ಇವ ನಮ್ಮವನಲ್ಲ, ಅವ್ಳು ನಮ್ಮವಳಲ್ಲ An A.I Image |
ಪೇಜಾವರ ಮಠದ ಮುಖ್ಯಸ್ಥರು 'ನಮಗೆ ಗೌರವಿಸುವ ಸಂವಿಧಾನ ಬರಲಿ' ಅಂತ ಹೇಳಿಕೆ ಕೂಟ್ಟಿದ್ದಾರೆಂದು ವರದಿಯಾಗಿತ್ತು. ನಂತರ ಅವರು 'ನಾನು ಸಂವಿಧಾನ ಬದಲಿಸಬೇಕು ಅಂತ ಹೇಳಲಿಲ್ಲ, ಆದರೆ - ನಮಗೆ ಗೌರವ ಕೊಡಿವ ಸರ್ಕಾರ ಬೇಕು ಅಂತ ಹೇಳಿದ್ದು ಹೌದು', ಎಂದು ಹೇಳಿಕೆ ಕೊಟ್ಟಿದ್ದಾರೆ.
ಅಳಿಯ ಅಲ್ಲ, ಮಗಳ ಗಂಡ. ಇರಲಿ.
ಈ ಎರಡೂ ಹೇಳಿಕೆಗಳಲ್ಲಿ 'ನಾವು' ಅಂದರೆ ಯಾರು? ಮಠದ ಮುಖ್ಯಸ್ಥರ ನಿಲುವಿಗೆ ತಕ್ಕಂತೆ ಈ 'ನಾವು' ಅಂದ್ರೆ ಹಿಂದು ಧರ್ಮವನ್ನು ಪಾಲಿಸುವವರು. ನಮ್ಮ ಸಂವಿಧಾನವು ಭಾರತ ದೇಶದೊಳಗಿರುವ ಸಮಸ್ತ ಜನರು ಮಾಡಿರುವ ಒಂದು ಒಪ್ಪಂದ. ಇದು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಂತ ಒಂದು ಒಪ್ಪಂದ. ಇಂತಹ ಸಂವಿಧಾನದಲ್ಲಿ 'We the people agree to.. ' ಅಂತಿದೆ ಹೊರತು, 'We the Hindu people agree too...' ಅಂತಿಲ್ಲ. ಸಂವಿಧಾನ ಗೌರವ ಕೊಡುವುದು ಸಮಸ್ತ ಜನರಿಗೆ. ಹಾಗಾಗಿ ಯಾರಾದರೂ ಸಂವಿಧಾನ ಹಿಂದುಗಳಿಗೆ ಗೌರವ ಕೊಡುವುದಿಲ್ಲ ಅಂತ ಹೇಳಿದರೆ ಅದು ತರ್ಕವಿಲ್ಲದ ನಿಲುವು. ಸರಕಾರ ಹುಟ್ಟಿದ್ದು ಸಂವಿಧಾನದಿಂದ. ಹಾಗಾಗಿ, ಅದಕ್ಕೂ ಕೂಡಾ ಸಮಸ್ತ ಜನರಿಗೆ ಗೌರವ ಕೊಡಿವ ಮೆಂಡೇಟ್ ಇದೆ.
ಒಂದು ಕ್ಷಣ ಈ ದೇಶ ಹಿಂದೂ ಧರ್ಮವನ್ನು ಪಾಲಿಸುವವರದ್ದೇ ಅಂತ ಅಂದು ಕೊಳ್ಳುವ. ಮಠದ ಮುಖ್ಯಸ್ಥರು ಹೇಳಿ ಕೊಂಡಿರುವ 'ನಾವು' - ಇದರೊಳಗೆ ಹಿಂದುಗಳು ಅಂತ ಅನ್ನಿಸಿ ಕೊಳ್ಳುವವರು ಸಮಸ್ತರೂ ಒಳಗೊಂಡಿರ ಬೇಕು, ಅಲ್ಲವೇ? ಆದರೆ ಇವರ 'ನಾವು' ಪದದ ಪರಿಮಿತಿಯಲ್ಲಿ ದೇಶದಲ್ಲಿರುವ ಎಲ್ಲಾ ಹಿಂದುಗಳು ನಿಜವಾಗಿಯೂ ಒಳಗೊಂಡಿದ್ದಾರ?
ಇವ ನಮ್ಮವನಲ್ಲ, ಅವ್ಳು ನಮ್ಮವಳಲ್ಲ ಅಂತಂದು ನಾವೇ ನಮ್ಮವರಲ್ಲದೇ ಇರುವವರಿಗೆ ಸ್ವಲ್ಪ ಕೂಡಾ ಗೌರವವನ್ನು ತೋರಿಸದೆ, ಜೊತೆ ಕೂತು ಊಟ ಕೂಡಾ ಮಾಡಲು ಇಚ್ಚಿಸುವುದಿಲ್ಲ, ಅಲ್ಲವೇ? ಇನ್ನು ಗರ್ಭಗುಡಿಯ ಒಳಗೆ ಪ್ರವೇಶದ ವಿಷಯ ಬಿಡಿ. ಹೀಗೆ ಯಾವ ಗೌರವವನ್ನೂ ಕೊಡದೆ ನಾವು ಹೊರಹಾಕಿ ಅಥವಾ ದೂರ ಸರಿಸಿದ ಹಿಂದುಗಳ ಸಂಖ್ಯೆ ಹೆಚ್ಚು ಕಡಿಮೆ ಶೇಕಡ ೯೫℅ ರಷ್ಟಿದೆಯೋ ಏನೋ. ಹಾಗಿದ್ದಲ್ಲಿ, ಪೇಜಾವರ ಮಠದ ಮುಖ್ಯಸ್ಧರು ಯಾರ ಗೌರವದ ಬಗ್ಗೆ ಮಾತನಾಡುತ್ತ ಇದ್ದಾರೆ ಎಂಬ ಪ್ರಶ್ನೆ ಬರುತ್ತದೆ.
ಹೊರತುಪಡಿಸುವಿಕೆ ನಮ್ಮ ಧಾರ್ಮಿಕ ಹಕ್ಕು, ಅದಕ್ಕೆ ಶಾಸ್ತ್ರಗಳ ಅನುಮೋದನೆ ಇದೆ ಅಂತ ಯಾರಾದರೂ ೧೯೪೭ರ ನಂತರ ಹೇಳಿದರೆ, ಅದು ಭಾರತದ ಸಮಸ್ತ ಜನರು ಸೇರಿ ಮಾಡಿ ಒಪ್ಪಿರುವ ಸಂವಿಧಾನದ ಉಲ್ಲಂಘನೆ ಆಗುತ್ತದೆ. ಗೊಡ್ಡು ಹಟಮಾರಿತನದಿಂದ ಒಪ್ಪದೇ ಇರುವವರನ್ನು ನಾವು ಪ್ರತ್ಯೇಕವಾದಿಗಳು ಅಂತ ಕರೆಯತ್ತೇವೆ.