ಹೀಗೊಂದು - ನನ್ನ ತಂದೆ ಮೃತರಾಗಿ ಹಲವಾರು ವರುಷಗಳಾಗಿವೆ. ಅವರು ಜೋಪಾನವಾಗಿ ಇಟ್ಟಿದ್ದ ಕೆಲ ವಸ್ತುಗಳಲ್ಲಿ ಅವರ ಹಲವಾರು ಡೈರಿಗಳಿವೆ. ಅವುಗಳಲ್ಲಿ ʼಅಡುಗೆ ಮನೆಗೆ ಬೆಂಕಿ ಪೆಟ್ಟಿಗೆ – 50 ಪೈಸೆʼ ಇಂದ ಹಿಡಿದು ʼಇವತ್ತು ರಾಮಚಂದ್ರ ಬಂದʼ ಅಂತ ಹಲವಾರು ವರುಷಗಳ ಹಲವಾರು ಸಣ್ಣ-ಪುಟ್ಟ ಬೇಕು-ಬೇಡದ ದಿನ ನಿತ್ಯದ ಎಂಟ್ರಿಗಳಿವೆ. ಅದ್ಯಾಕೋ ಇದ್ದ ಎಲ್ಲಾ ಡೈರಿಗಳನ್ನು ದೂಳು ಹಿಡಿದು ಗೆದ್ದಲು ಬರುವ ವರೆಗೆ ನಾನು ಕೂಡಾ ಹಾಗೇ ಇಟ್ಟುಕೊಂಡಿದ್ದೆ. ಇನ್ನೊಂದೇನಂದ್ರೆ, ಜಗತ್ತಿನ ಪ್ರಭಾಶಾಲಿ ಮನೋವಿಜ್ಞಾನಿ ಎಂದೆಣಿಸಿಕೊಂಡ Sigmund Freud ಹೇಳುತ್ತಾರೆ, ʼKill the father’…..
ಬಿ. ವಿ. ಕಾರಂತ
ಈ ಹಿಂದೆ, ಅರವತ್ತರ ದಶಕದಲ್ಲಿ ಅಮೇರಿಕಾದ ಸೇನಾಪಡೆ ತಾವು ಸೃಜಿಸಿದ ವಿಯೆಟ್ನಾಮ್ ಯುದ್ಧದಲ್ಲಿ ನಾಪಾಮ್ ಬಾಂಬ್‌ಗಳನ್ನು ಬಹಳ ಮಾರಕವಾಗಿ ಬಳಸಿಕೊಂಡಿತ್ತು. ಈ ಬಾಂಬುಗಳ ಮುಖ್ಯ ಗುಣವೇನೆಂದರೆ, ಆದ ಸ್ಪೋಟಗಳಿಂದ ತಗಲುವ ಬೆಂಕಿ ಬಹಳಷ್ಟು ಹೊತ್ತು ಉರಿಯುತ್ತಿರುತ್ತೆ. ಅಮೇರಿಕಾದ DOW ಕೆಮಿಕಲ್ ಬಹುರಾಷ್ಟ್ರೀಯ ಕಂಪೆನಿಗೆ ನಾಪಾಮ್ ಬಾಂಬಿನ ರಿಸರ್ಚ್ ಹಾಗೂ ತಯಾರಿಕೆಯ ಉಸ್ತುವಾರಿಯನ್ನು ಕೊಡಲಾಗಿತ್ತು.
ಈ ಬಗ್ಗೆ ೧೯೬೯ರಲ್ಲಿ ಜರ್ಮನಿ ಮೂಲದ ನಿರ್ದೇಶಕರು ಹಾರುನ್ ಫಾರೂಕಿ 'The Inextinguishable Fire' ಎಂಬ ೩೮ ನಿಮಿಷಗಳ ಸಿನಿಮಾವೊಂದನ್ನು, ಅಮೇರಿಕಾಕ್ಕೂ ಹೋಗದೆ, ವಿಯೆಟ್ನಾಮಿಗೂ ಹೋಗದೆ ತಮ್ಮ ದೇಶದಲ್ಲೇ ಕೂತು, ವಿಮರ್ಶಾತ್ಮಕವಾಗಿ ಹೊರ ತಂದಿದ್ದರು. ರಾಜ್ಯ-ವ್ಯವಸ್ಥೆ, ವಿಜ್ಞಾನ-ವ್ಯವಸ್ಥೆ ಹಾಗೂ ಯುದ್ದ-ಉದ್ಯಮಗಳ ಸಂಬಂಧವನ್ನು ತಾರ್ಕಿಕವಾಗಿ ಎತ್ತಿ ತೋರಿಸುವ ಈ ಸಿನಿಮಾ, ಸಾಕ್ಷ್ಯಚಿತ್ರಗಳ ಪರಿಭಾಷೆಯನ್ನೇ ವಿಸ್ತರಿಸಿತ್ತು ಅಂತ ಹೇಳಿದರೆ ತಪ್ಪಾಗದು.
![]() |
| ಹಾರುನ್ ಫಾರೂಕಿ |
ಸಾಕ್ಷ್ಯಚಿತ್ರಗಳೆಂದರೆ ವಾಸ್ತವ ಜಗತ್ತಿನ ನನಗೆ ಗೊತ್ತಿದ್ದ ಆದರೆ ನಿಮಗೆ ಗೊತ್ತಿರದ ಘನವಾದ ವಿಷಯಗಳನ್ನು ವಸ್ತು ನಿಷ್ಠೆ ಹಾಗೂ ಎಲ್ಲರಿಗೂ ಸರಿ ಹೊಂದಿದ - ದೇವಲೋಕದಿಂದಲೋ ಎಂಬಂತೆ - top angle ನೋಟವನ್ನು ತಾಳುತ್ತಾ, ತಿಳಿ ಹೇಳುವ ಒಂದು ಅಹಂ ಬರಿತ ಪರಿ ಎಂದು ನಂಬಿದ್ದ ಕಾಲದಲ್ಲಿ, ಫಾರೂಕಿಯ ಈ ಚಿತ್ರ ಒಂದು ಖಚಿತವಾದ ಜನಪರ ನಿಲುವನ್ನು ಪರೋಕ್ಷವಲ್ಲದ ರೀತಿಯಲ್ಲಿ ಯಾವುದೇ ಹಿಗ್ಗು-ಮುಗ್ಗು ಇಲ್ಲದೆ ರಚಿಸಿತ್ತು. ವ್ಯಕ್ತಿ ನಿಷ್ಠ ಅನುಭವಗಳು ಕೂಡಾ ಪರಿಶೀಲಿಸಬಹುದಾದ ಪುರಾವೆಗಳಷ್ಟೆ ಮಾನ್ಯತೆ ಹೊಂದಿವೆ ಅಂತ ಸಾರಿ ಹೇಳಿದ ಕಲ್ಟ್ ಅಂತ ಎನಿಸಿಕೊಳ್ಳುವ ಚಿತ್ರವಿದು.
ಇದೆ ವರ್ಷ ಸೆಪ್ಟೆಂಬರಿನಲ್ಲಿ ತೀರಿಕೊಂಡ ಹಿರಿಯ ಅಮೇರಿಕನ್ ಚಿತ್ರ ನಿರ್ದೇಶಕಿ ಜಿಲ್ ಗಾಡ್ಮಿಲೋವ್, ಹಾರುನ್ ಫಾರೂಕಿಯ ಚಲನಚಿತ್ರಗಳಿಂದ ಮತ್ತವರ ಜನಪರ ವಿಶ್ವನೋಟದಿಂದ ಪ್ರೇರಿತಗೊಂಡವರು. ಎಂಬತ್ತರ ದಶಕದಲ್ಲಿ ಪೊಲ್ಯಾಂಡಿನಲ್ಲಿ ನಡೆದ Solidarity Movement ನ ಬಗ್ಗೆ ಒಂದು ಚಲನಚಿತ್ರ ಮಾಡಲು ಹೊರಟಾಗ ಅವರಿಗೆ ಆ ದೇಶಕ್ಕೆ ಹೋಗಲು ವೀಸಾ ಸಿಗಲ್ಲಿಲ್ಲ. ದೃಡ ಗೆಡದೇ ಪೊಲ್ಯಾಂಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕೆಲ ಕಾರ್ಮಿಕರ ಸಂದರ್ಶನಗಳನ್ನು ಅಮೇರಿಕಾದಲ್ಲೇ ವಾಸವಾಗಿದ್ದ ಕೆಲ ಪೊಲಿಶ್ ನಟರನ್ನು ಬಳಸಿಕೊಂಡು ಯತಾವತ್ತಾಗಿ ಅದೇ ಸಂದರ್ಶನಗಳನ್ನು ಮರು ಸೃಷ್ಟಿಸಿ ಚಿತ್ರಿಸಿಕೊಂಡರು. ಜೊತೆಗೆ ಹಾಗೆ ಚಿತ್ರಿಸಿ ಕೊಂಡದ್ದನ್ನೂ ಚಿತ್ರಿಸಿಕೊಂಡು ಅವುಗಳನ್ನು ತಮ್ಮ ಚಿತ್ರ 'Far From Poland' ನಲ್ಲಿ ಬ್ರೆಕ್ಟ್ ನ ಎಲಿನಿಯೇಶನ್ ಎಫೆಕ್ಟ್ ರೀತಿಯಲ್ಲಿ ಬಳಸಿಕೊಂಡರು.
೧೯೯೮ರಲ್ಲಿ ಜಿಲ್ ಗಾಡ್ಮಿಲೋವ್ 'What I Learnt from Farockiʼ ಅಂತ ಇನ್ನೊಂದು ಚಿತ್ರವನ್ನು ತಯಾರಿಸಿದರು. ಆಶ್ಚರ್ಯವೆಂದರೆ ಈ ಚಿತ್ರ ಹಾರುನ್ ಫಾರೂಕಿಯ 'The Inextinguishable Fire' ಚಿತ್ರದ ಹೂ-ಬ-ಹೂ ನಕಲಾಗಿತ್ತು, ಭಾಷೆ ಇಂಗ್ಲೀಶ್ ಮತ್ತು ಕಲರ್‌ನಲ್ಲಿರುವುದನ್ನು ಬಿಟ್ಟರೆ. ಫಾರೂಕಿಯ ಚಿತ್ರದಲ್ಲಿದ್ದ ಪ್ರತಿಯೊಂದು ಇಮೇಜ್ ಸೈಸ್, ಶಾಟುಗಳ ಕಾಲ ಹಾಗೂ ಲಯ, ಕ್ಯಾಮೆರಾ ಚಲನೆ, ಧ್ವನಿಗಳ ಬಳಕೆ, ನಟರ ಚಲನೆ ವಲನೆ- ಎಲ್ಲವೂ ಯತಾವತ್ತಾಗಿತ್ತು. ೨೮ ನಿಮಿಶಗಳು ಮುಗಿದ ಬಳಿಕ ಕ್ಯಾಮರಾದ ಮುಂದೆ ಸ್ವತಃ ಗಾಡ್ಮಿಲೋವ್ ಬಂದು ನಾನು ಫಾರೂಕಿಯ ಸಿನಿಮಾ ಮಾಡುವ ಬಗೆಯನ್ನು study ಮಾಡಲು ಹೀಗೊಂದು ಚಿತ್ರ ಮಾಡಿದ್ದೇನೆ ಅಂತ ಹೇಳಿ, ಇದು ಅವರಿಗೆ ಸಲ್ಲಿಸಿರುವ ಗೌರವ ಅಂತ ಸ್ಪಷ್ಟೀಕರಣಕೊಟ್ಟರು.
![]() |
| ಜಿಲ್ ಗಾಡ್ಮಿಲೋವ್ |
ಈಗ ಮತ್ತೂ ಒಂದೇನೆಂದರೆ, ಹೋದ ವಾರ ಬೆಂಗಳೂರಿನ ಬೆನಕ ತಂಡ ಮುಂಬಯಿಯಲ್ಲಿ ಮೂರು ನಾಟಕಗಳ ಪ್ರದರ್ಷನಗಳನ್ನು ಕೊಟ್ಟಿತು - 'ಹಯವದನ', 'ಸತ್ತವರ ನೆರಳು' ಹಾಗೂ 'ಗೋಕುಲ ನಿರ್ಗಮನ'. ಇವುಗಳ ಸಂಗೀತ ಹಾಗೂ ನಿರ್ದೇಶನ ಬಿ. ವಿ. ಕಾರಂತ ಹಾಗೂ 're-presentionʼ ಅಥವಾ 'ಮರು-ಪ್ರಸ್ತುತೀಕರಣ', ಟಿ. ಎಸ್. ನಾಗಾಭರಣರದ್ದು. ಇವುಗಳಲ್ಲಿ ನಾನು ನೋಡಿದ್ದು ಪು. ತಿ. ನರಸಿಂಹಾಚಾರ್ ಬರೆದ ಹಳೆ ಕನ್ನಡದ ಗೀತ ರೂಪಕ 'ಗೋಕುಲ ನಿರ್ಗಮನ'.ಈ ನಾಟಕದ ʼಸಹ ಮರು-ಪ್ರಸ್ತುತೀಕರಣ' ಕಾರರಾಗಿ ಬಿ. ವಿ. ಶ್ರುಂಗ, ಶ್ರೀಲಕ್ಷ್ಮೀ ಭಾಗವತರ್ ಹಾಗೂ ವಸುಕಿ ವೈಭವ್ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಇಡೀ ತಂಡ ರಂಗಸ್ಥಳದಲ್ಲಿ ತೋರಿದ ಅಸಾದಾರಣ ವೃತ್ತಪರತೆಯು ಇವರುಗಳು ತಮ್ಮ ತಾಲೀಮುಗಳಲ್ಲಿ ಮಾಡಿರಬಹುದಾದ ಪ್ರಯತ್ನ ಹಾಗೂ ಅವರ ರಂಗಬದ್ಧತೆಯ ಪ್ರತೀಕದಂತಿದೆ.
ಬಿ. ವಿ. ಕಾರಂತರು ಭಾರತ ದೇಶದ ಮೇರು ಕಲಾವಿದರಲ್ಲಿ ಒಬ್ಬರು. ಅವರ ಸುದೀರ್ಘ ಜೀವನದಲ್ಲಿ ಸೃಷ್ಟಿಸಿದ 'ಬರ್ನಮ್ ವನ', 'ಅಂಧ ಯುಗ್', 'ಮಾಲವಿಕಾಗ್ನಿ ಮಿತ್ರ','ಏವಂ ಇದ್ರಜೀತ್', 'ತುಗ್ಲಕ್', 'ಚಂದ್ರಗುಪ್ತ್', 'ಘಾಸಿರಾಮ ಕೋತ್ವಾಲ್', 'ಪಂಜರಶಾಲೆ', 'ಹಯವದನ', 'ಚಂಡಿಪ್ರಿಯ', 'ಜೋಕುಮಾರಸ್ವಾಮಿ', 'ಸಂಕ್ರಾಂತಿ', 'ಗೋಕುಲ ನಿರ್ಗಮನ' ಇತ್ಯಾದಿ ನಾಟಕಗಳು ಭಾರತೀಯ ರಂಗಭೂಮಿಗೆ ಒಂದು ಹೊಸಾ ತಿರುವು ಕೊಟ್ಟಿತು ಅಂತ ಹೇಳಿದರೆ, ಅತಿಶಯವಾಗದು. ಭಾರತದ ಸುತ್ತ ಒಬ್ಬ missionaryಯ ರೀತಿಯಲ್ಲಿ ತಿರುಗಾಡಿ ಕಾರಂತರು ಎಲ್ಲೆಲ್ಲಿ ರಂಗಕರ್ಮಿಗಳನ್ನು ತಯಾರಿಸಿದ್ದರೋ ಅಲ್ಲಲಿ ರಂಗಭೂಮಿ ಇನ್ನೂ ಜೀವಂತವಾಗಿದೆ.
ಕಾರಂತರು ತಯಾರಿಸಿದ ಒಂದು ಪೀಳಿಗೆಯ ರಂಗ ಕಲಾವಿದರು ಋಣದಿಂದ ವಿವಿಧ ರೀತಿಯಲ್ಲಿ ಅವರನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಅಂತವರಲ್ಲಿ ಕೆಲವರು ಕಾರಂತರು ಆಡಿಸಿದ ನಾಟಕಗಳನ್ನು ಚಾಚೂ ತಪ್ಪದೆ ನೆನಪಿನಲ್ಲಿಟ್ಟುಕೊಂಡು ಅವುಗಳನ್ನು ಯತಾವತ್ತಾಗಿ - ಜಿಲ್ ಗಾಡ್ಮಿಲೋವ್ 'What I Learnt from Farockiʼದಲ್ಲಿ ಮಾಡಿದಂತೆ - ಮರುಸೃಷ್ಟಿಸಿದ್ದಾರೆ. ಭೋಪಾಲದಲ್ಲಿ 'ಘಾಸಿರಾಮ ಖೋತ್ವಾಲ್' ಅಥವ documentation ಸಲುವಾಗಿ ೨೦೧೪(?)ರಲ್ಲಿ ನಿನಾಸಂ ತಂಡ ಮತ್ತೆ ಕಟ್ಟಿದ 'ಗೋಕುಲ ನಿರ್ಗಮನ' ನೆನಪಿಗೆಬರುತ್ತದೆ. ಆದರೆ ಕಾರಂತರು ನಿರಂತರವಾಗಿ ಸ್ಮರಣೆ ಆಗುತ್ತಿರುವುದು ಟಿ ಎಸ್.ನಾಗಾಭರಣರ ಸಾರಥ್ಯದಲ್ಲಿ ಬೆನಕ ತಂಡದ ನಾಟಕಗಳ ಪ್ರದರ್ಶನಗಳಲ್ಲಿ. ಅವರ 'ಸತ್ತವರನೆರಳು', 'ಹಯವದನ' ಹಾಗೂ 'ಗೋಕುಲ ನಿರ್ಗಮನ' ನಾಟಕಗಳಿಗೆ ನೂರಾರು ಪ್ರಯೋಗಗಳಾಗಿವೆ.
ಈಗ ಹೀಗೊಂದು ಗೊಂದಲ - ಜಿಲ್ ಗಾಡ್ಮಿಲೋವ್ 1998 ರಲ್ಲಿ ಮಾಡಿದ 'What I Learnt from Farockiʼ ಚಿತ್ರವನ್ನು ನೋಡುತ್ತಿರಬೇಕಾದರೆ ನಾವು ಎರಡು ದಶಕಗಳಷ್ಟು ಹಿಂದಿನ ಫಾರೂಕಿಯ 'The Inextinguishable Fire' ನೋಡುತ್ತಿದ್ದೇವೆ ಅಂತ ಭಾವಿಸಬೇಕೆ? ಇಂದು ಮೂರು ದಶಕಗಳ ಬಳಿಕ, ಸುಮಾರು ಎರಡು ದಶಕಗಳ ಹಿಂದೆ ದಿವಂಗತರಾದ ಬಿ. ವಿ. ಕಾರಂತರ ʼಗೋಕುಲ ನಿರ್ಗಮನʼ ನೋಡುತ್ತಿರಬೇಕಾದರೆ ನಾವು ೧೯೯೩ರಲ್ಲಿ ನಿನಾಸಂ ತಿರುಗಾಟ ತಂಡಕ್ಕೆ ಬಿ. ವಿ. ಕಾರಂತರು ಮೊದಲ ಬಾರಿಗೆ ಕಟ್ಟಿಕೊಟ್ಟ ʼಗೋಕುಲ ನಿರ್ಗಮನʼ ನೋಡುತ್ತಿದ್ದೇವೆ ಎಂದು ಭಾವಿಬೇಕೆ? ಯಾಕಿಲ್ಲ? - ಅದೇ ಸಂಗೀತ, ಅದೇ ತಾಳ, ಅವೇ ಹೆಜ್ಜೆಗಳು, ಅಂತಹುದೇ ವಸ್ತ್ರ ವಿನ್ಯಾಸ, ಹಾಗಿದ್ದೇ ನೃತ್ಯ, ಪ್ರಾಯಶಃ ಸರಿಸಮಾನ ಅದೇ ಬೆಳಕು ಸಂಯೋಜನೆ, ರಂಗಸಜ್ಜಿಕೆ – ಮುಖ್ಯವಾಗಿ ಪಠ್ಯದ ಅದೇ ಇಂಟರ್ಪ್ರಿಟೇಶನ್ ಹಾಗೂ ಅದೇ ಲೋಕ ದೃಷ್ಟಿ.
![]() |
| The Inextinguishable Fire |
![]() |
| What I Learnt from Farocki |
ಗಾಡ್ಮಿಲೋವ್, ನಾಗಾಭರಣ ಅಥವಾ ಭೋಪಾಲದಲ್ಲಿ ʼಘಾಸಿರಾಮ್ ಕೋತ್ವಾಲ್ʼ ನಾಟಕವನ್ನು ಮರು ಸೃಷ್ಟಿಸಿದ ಸಜ್ಜನರು – ಇವರ್ಯಾರೂ ಇವು ತಮ್ಮದೇ ಸೃಜನಶೀಲತೆ ಅಂತ ಖಂಡಿತ ಹೇಳಿಕೊಳ್ಳುತ್ತಿಲ್ಲ. ಹಾಗಾದರೆ ಈ ಸ್ವಾಮ್ಯತೆ ಯಾವ ಬಗೆಯದ್ದು?
ನಾವು ಕೇಳಿ ತಿಳಿದುಕೊಂಡ ಹಾಗೆ ಸ್ವತಃ ಬಿ. ವಿ, ಕಾರಂತರೇ ತಮ್ಮ ನಾಟಕಗಳ ಪ್ರದರ್ಶನಗಳಲ್ಲಿ ಅನಿಶ್ಚತತೆಯ ಅಂಶಗಳನ್ನು ಬಳಸಿ ಪ್ರದರ್ಶನಗಳಲ್ಲಿ ಹೊಸತನವನ್ನು ಹೇಗೆ ತರಬೇಕೆಂದು ಸದಾ ಚಿಂತಿಸುತ್ತಿದ್ದರಂತೆ. ‘What I Learnt from Farockiʼ ಬಿಟ್ಟರೆ ಮುಂದೆಂದೂ ಗಾಡ್ಮಿಲೋವ್ ಈ ರೀತಿಯ ಮರುಸೃಷ್ಟಿಗೆ ಕೈ ಹಚ್ಚಲಿಲ್ಲ. ಟಾಮ್ ಗನ್ನಿಂಗ್ ಎಂಬ ಸಿನಿಮಾ ಥಿಯರಿಟಿಶಿಯನ್ ಜಿಲ್ ಗಾಡ್ಮಿಲೋವ್ ಅವರ ಈ ಪ್ರಯತ್ನ ಒಂದು ʼAct of remembering… not for nostalgia… but for learning… the fact that film can break reality’, ಎಂಬಂತೆ ಅಭಿಪ್ರಾಯ ಪಟ್ಟಿದ್ದಾರೆ.
ನೆನಪಿಗಾಗಿ ರಂಗಾಯಣದ ಹಿರಿಯ ಕಲಾವಿದರು ಅಥವಾ ಭೋಪಾಲದ ನಿಷ್ಕಿಯಗೊಂಡ ರಂಗಮಂಡಲದ ಹಳೆಯ ಕಲಾವಿದರೂ ಬಿ. ವಿ. ಕಾರಂತರ ಒಂದೆರದು ನಾಟಕಗಳನ್ನು ಇನ್ನೂ ಆಡುತ್ತಿರಬಹುದು ಅಥವಾ ಕಾರಂತರು ಸಂಯೋಜಿಸಿದ ಹಾಡುಗಳನ್ನು ಸ್ಮರಣೆಗಾಗಿ ಅಥವಾ documentation ಗಾಗಿ ಇನ್ನೂ ಹಾಡುತ್ತಿರಬಹುದು. ಆದರೆ ಈ ಕಲಾವಿದರು ಕಾರಂತರ ಶೈಲಿಯನ್ನು ಸಂಪೂರ್ಣವಾಗಿ ಅರಗಿಸಿಕೊಂಡು ಅದನ್ನು ಸಮರ್ಥವಾಗಿ ಪ್ರದರ್ಶಿಸಿ ಅದರಿಂದಾಚೆ ಕೂಡಾ ಹೋಗಿ ಹೊಸಾದಾರಿಗಳನ್ನು ಹುಡುಕಿಕೊಂಡಿದ್ದಾರೆ.
ಬೆನಕ ತಂಡದ ಅಂದಿನ ಬಿ. ವಿ. ಕಾರಂತ ನಿರ್ದೇಶಿತ ಹಾಗೂ ಇಂದು ಟಿ. ಎಸ್. ನಾಗಾಭರಣರ ಪ್ರಸ್ತುತೀಕರಣವಿದ್ದ ʼಗೋಕುಲ ನಿರ್ಗಮನʼ, ಒಂದು ಚೊಕ್ಕ ಹಾಗೂ ಸಮರ್ಥ ಪ್ರದರ್ಶನ. ಈ ತಂಡದ ಪ್ರತಿಯೊಬ್ಬ ಸದಸ್ಯರ professionalism ನಿಂದ ನೋಡಿ ಕಲಿಯುವುದು ತುಂಬಾ ಇದೆ. ನಾಟಕ ಮುಗಿದ ಮೇಲೆ ನಾಗಾಭರಣರು ಪ್ರೇಕ್ಷಕ ವರ್ಗಕ್ಕೆ ತಮ್ಮ ಆಶಯಗಳನ್ನು ತೆರೆದಿಟ್ಟರು - ಇತ್ತೀಚೆಗೆ physical theatre ಅಂತ ಏನೇನೋ ಬಂದಿವೆ. ಅದೇನಂದ್ರೂ ಪ್ರಾಯೋಗಿಕ ಮಟ್ಟದಲ್ಲೇ ಇದ್ದು, ಒಂದೆರಡು ಪ್ರದರ್ಶನಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ನಾವು ಗೀತೆ ನಾಟಕಗಳನ್ನು ಆಡಬೇಕು, ನೀವು ಅವುಗಳನ್ನು ಪ್ರೋತ್ಸಾಹಿಸ ಬೇಕು, ಯಾಕೆಂದ್ರೆ ಅದು ನಮ್ಮ ನಾಟ್ಯಶಾಸ್ತ್ರ ಪರಂಪರೆಯಿಂದ ಬಂದಿದೆ - ಅಂತ.
ಈಗ ಮಗದೊಂದು - ನಾಟ್ಯಶಾಸ್ತ್ರದ ಮೊದಲ ಅಧ್ಯಾಯದಲ್ಲೇ ಸ್ವಷ್ಟವಾಗಿ ಅದರ ಆಶಯವಿದೆ. ಭೂಲೋಕದಲ್ಲಿ ಅರಾಜಕತೆ ಹರಡಿದ ಸಂದರ್ಭದಲ್ಲಿ ಇಂದ್ರ ಹಾಗೂ ಇತರ ದೇವತೆಗಳು ಸರ್ವಶಕ್ತ ಭಗವಂತ ಬ್ರಹ್ಮನ ಬಳಿ ಬಂದು ಪರಿಹಾರವನ್ನು ಕೇಳುತ್ತಾರೆ. ಆಗ ಬ್ರಹ್ಮನು ಧರ್ಮಪಾಲನೆಗೆ ಅಣವು ಮಾಡಿಕೊಡಲು ಲೋಕದಲ್ಲಿರುವ ಅರಾಜಕತೆಯ ಕಾರಣಕರ್ತರಿಗೆ ವೇದಗಳ ಸತ್ವಗಳನ್ನು ರಸವತ್ತಾಗಿ ಕಥೆ, ಸಂಗೀತ, ನೃತ್ಯ, ನಾಟಕಗಳ ಮೂಲಕ ತಿಳಿ ಹೇಳಲು ನಾಟ್ಯವೇದವನ್ನು ರಚಿಸಿದನು. ಮನುಸ್ಮೃತಿಯು ವೇದಗಳನ್ನು ೊಂದೇ ವರ್ಣ-ಜಾತಿಗೆ ಲಭ್ಯವಾಗಿಸಿ ಉಳಿದವರಿಗೆ ಕಡಿವಾಣ ಹಾಕ್ಕಿದ್ದು ನಮಗೆಲ್ಲರಿಗೂ ತಿಳಿದಿದೆ. ಈ ಪೌರಾಣಿಕ ಕಥೆಯಲ್ಲಿ ತಮಗೆ ಲಭ್ಯವಿಲ್ಲದಿರುವ ವೇದಗಳನ್ನು ಓದದಿರುವವರೇ ಈ ಲೋಕದ ಅಧರ್ಮಕ್ಕೆ ಕಾರಣರು, ಎಂಬು ವಿಷಯ ಸುಪ್ತವಾಗಿ ಅಡಗಿದೆ. ನಾಟ್ಯಶಾಸ್ತ್ರದ castist ನಿಲುವುಗಳನ್ನು ಕೈ ಬಿಟ್ಟು ನಾವು ಅದನ್ನು ಅರ್ಥೈಸಿಕೊಳ್ಳಬೇಕು ಅಂತ ಹಲವಾರು ಆಧುನಿಕ ನಾಟಕ ತಜ್ಞರು ಹಲವು ಭಾರಿ ಹೇಳಿಕೊಂಡಿದ್ದಾರೆ.
ʼಗೋಕುಲ ನಿರ್ಗಮನʼ ನಾಟಕ ಮುಗಿದ ಮೇಲೆ, ಕೊನೆಯಲ್ಲಿ, ಪ್ರಾಯೋಜಕರ ಕಡೆಯಿಂದ ತೀರಾ ಹಿರಿಯ ವ್ಯಕ್ತಿಯೊಬ್ಬರು ಮೈಕ್ ಹಕ್ಕಿನಿಂದ ಕೇಳಿಕೊಂಡು, ಪಡೆದು ತಮ್ಮ ಮುಂದಿದ್ದ ಪ್ರೇಕ್ಷಕರಿಗೆಲ್ಲಾ ಬುದ್ದಿವಾದವನ್ನು ಹೇಳಿದರು - ನಾವು ಬರೀ ಹಾಡು-ಕುಣಿತ ಅಂತ ಖುಷಿ ಪಡದೆ, ಲೇಖಕ ಪು. ತಿ. ನರಸಿಂಹಾಚಾರ್ ಅವರ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು.ಅವರು ಮಹಾನ್ ಉಪನಿಷತ್ತು ಹಾಗೂ ಅದ್ವೈತ ವಿದ್ವಾಂಸರು. 'ಗೋಕುಲ ನಿರ್ಗಮನ' ಪಠ್ಯದಲ್ಲಿ ನಾವು ಈ ಅದ್ವೈತ ತತ್ವವನ್ನು ಗುರುತಿಸಬೇಕೆಂದು ಸ್ವಲ್ಪ ಜಾನ್ಞ ಪಸರಿಸಿದರು.
![]() |
| ಪು. ತಿ. ನರಸಿಂಹಾಚಾರ್ |
1993ರಲ್ಲಿ ಬಿ. ವಿ. ಕಾರಂತರು ನಾಟಕ ಕಟ್ಟಲು 'ಗೋಕುಲ ನಿರ್ಗಮನ' ಪಠ್ಯ ಎತ್ತಿ ಕೊಂಡದ್ದು ಅದರೊಳಗೆ ಸುಪ್ತವಿದ್ದ ಅದ್ವೈತ ತತ್ವಕ್ಕೋ, ಅದು ಒದಗಿಸುವ ನಾಟಕೀಯ ಸಾಧ್ಯತೆಗಳಿಗೋ ಅಥವಾ ಮತ್ತಾವುದಕ್ಕೋ ನಾನರಿಯೆ. ಆದರೆ, ಹೋದ ವಾರ ನಾನು ನೋಡಿದ ಬಿ.ವಿ. ಕಾರಂತರ ಒರಿಜಿನಲ್ ಎಂದೆಣಿಸಿಕೊಂಡ 'ಗೋಕುಲ ನಿರ್ಗಮನ' ಹಲವಾರು ವ್ಯಾಖ್ಯಾನಗಳ ಸಾಧ್ಯತೆಗಳನ್ನು ತೆರೆದಿಟ್ಟಿದೆ - ʼಎಂತೊರೆದರೇನಮ್ಮ ಹೆಣ್ಣಳಲಿಗೆಣೆಯುಂಟೆʼ ಎಂದು ಸಾರುವ ಹೆಣ್ತನ ಹಾಗು ಪುರುಷತ್ವ ನಡುವಿನ ಆದಿ ಸ್ಥಿತಿಯ ದ್ವಂದ್ವ, ಗ್ರಾಮೀಣ–ನಗರಗಳ ಗುಣಾತ್ಮಕತೆಯ ತೊಯಿದಾಟ, ಮುಗ್ಧ ಯುವಕನೊಬ್ಬನು ತನ್ನ ಕಂಫರ್ಟ್ ವಲಯವನ್ನು ಕಷ್ಟದಿಂದ ತೊರೆದು ಪೌರುಷದ ಕವಚವನ್ನು ಧರಿಸಿ ಮನು ಧರ್ಮ ಪಾಲನೆಗೆ (ಯುದ್ಧ?) ಹೊರಟ coming of age ಕತೆ ಅಥವಾ ಜಾತಿ-ವರ್ಗ-ಲಿಂಗ ಎಂಬ ಭೇದವಿಲ್ಲದೇ ಜಗವಲ್ಲ ಸರ್ವ ಶಕ್ತಿಯೊಂದರೊಳಗೆ ಮೀಲೀನಗೊಳ್ಳಬೇಕೆನ್ನುವ ತೀವ್ರ ಬಯಕೆ… ಹೀಗೆ ಇನ್ನೂ…
ಇತ್ತೀಚೆಗೆ, ಅವರ legacy ಬಗ್ಗೆ ಮಾತನಾಡುತ್ತಾ ರಂಗಕರ್ಮಿ ರಘುನಂದನ, ಬಿ. ವಿ. ಕಾರಂತರು ನೆಹರೂ ಯುಗದ ಕೊಡುಗೆ ಅಂತ ಅಭಿಪ್ರಾಯ ಪಡುತ್ತಾರೆ. ನೆಹರೂ ಹಾಗೂ ಇತರರು ಹೊಸ ದೇಶ ಕಟ್ಟಿದ ಹಾಗೆ, ಕಮಲಾದೇವಿ ಚಾಟ್ಟೋಪದ್ಯಾಯ, ನೇಮಿಚಂದ್ರ ಜೈನ್, ಅಲ್ಕಾಜಿ, ಬಾದಲ್ ಸರ್ಕಾರ್, ಕೆ. ಎನ್. ಪನ್ನಿಕರ್, ವಿಜಯ್ ತೆಂಡೂಲ್ಕರ್, ಡಿ. ಡಿ. ಕೊಸಂಬಿ, ಹಬೀಬ್ ತನ್ವೀರ್, ಬಿ. ವಿ. ಕಾರಂತ್ ಮುಂದಾದವರು ದೇಶದ ಸ್ವಾತಂತ್ರ ನಂತರದ ಅವಧಿಯಲ್ಲಿ ಆಧುನಿಕ ಭಾರತವನ್ನು ಸಾಂಸೃತಿಕವಾಗಿ ಕಟ್ಟಿದವರು.
ಒಂದು ಕಡೆ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಕಾರಂತರ ನಾಟಕಗಳು ʼಹಿಂದುʼ ಎಂದೆಣಿಸಿ ಕೊಳ್ಳುವ ಹಾಗಿವೆ ಅಂತ ಹೇಳುತ್ತಾರೆ. ಇನ್ನೊಂದೆಡೆ, ಬನಾರಸ್ ಸಮಯದಿಂದಲೂ ಕಾರಂತರಿಗೆ ಆಪ್ತರಾಗಿದ್ದ ಕಮ್ಯನಿಸ್ಷ್ ಎಂದೆಣಿಸಿಕೊಳ್ಳುವ ಹಿಂದಿ ಸಾಹಿತಿ ದಿ. ವಿಷ್ಣುಚಂದ್ರ ಶರ್ಮರು ಕಾರಂತರಿಗೆ ಬಲಪಂಥೀ ಸಂಘೀಯರ ತರ್ಕದ ಪ್ರತಿ ಅಸನನೆ ಇತ್ತು ಅಂತ ಸಾರುತ್ತಾರೆ. ಮತ್ತೆ, ಪ್ರಾಯಷಃ ತಮ್ಮನ್ನು ತಾವು ಸಂಪ್ರದಾಯವಾದಿ regime ಜೊತೆಗೆ ಗುರುತಿಸಿಕೊಂಡ ನಾಗಾಭರಣರು, ಇಂದು ಕಾರಂತ ಸ್ಮರಣೆಗೆಂದೇ ತಯಾರಿಸಿದ ಅಂದಿನ ಕಾರಂತ ನಿರ್ದೇಶಿತ ನಾಟಕಗಳ ಸುಮಾರು ೪೦೦-೫೦೦ರಕ್ಕೂ ಹೆಚ್ಚು ಶೋಗಳಿಗೆ ಕಾರಣರಾಗಿದ್ದಾರೆ. And ಮೊನ್ನೆ ಮುಂಬಯಿಯಲ್ಲಿ ಹಿರಿಯ ಸಜ್ಜನರೊಬ್ಬರು ಪರೋಕ್ಷವಾಗಿ ಬಿ. ವಿ. ಕಾರಂತರನ್ನು ಅದ್ವೈತ ತತ್ವದ ಪ್ರತಿಪಾದಕ ಅಂತ ಅಭಿಪ್ರಾಯ ಪಟ್ಟೇ ಬಿಟ್ಟಂತೆ ಕಂಡರು.
ಎಂತಿದು ಕಾರಂತರ ಕೊಳಲಿನ ಆಟ? ಎತ್ತ ಸಾಗಿದೆ ಇಂದು ಅದರ ಪಯಣ?
ಈಗ ಮತ್ತೆ ಹೀಗೊಂದು - ನನ್ನ ತಂದೆ ಮೃತರಾಗಿ ಹಲವಾರು ವರುಷಗಳಾಗಿವೆ. ಅವರು ಜೋಪಾನವಾಗಿಟ್ಟಿದ್ದ ಕೆಲ ವಸ್ತುಗಳಲ್ಲಿ ಅವರ ಹಲವಾರು ಡೈರಿಗಳಿವೆ. ಅವುಗಳಲ್ಲಿ ʼಬೇವಿನ ಸೊಪ್ಪು – ೨ ರೋಪಾಯಿʼ ಇಂದ ಹಿಡಿದು ʼಇವತ್ತು ಶೇಖರ ಮಾಡು ಕಟ್ಟಲು ಶುರು ಮಾಡಿದʼ ಅಂತ ಹಲವಾರು ವರುಷಗಳ ಹಲವಾರು ಸಣ್ಣ-ಪುಟ್ಟ ಬೇಕು-ಬೇಡದ ದಿನ ನಿತ್ಯದ ಎಂಟ್ರಿಗಳಿವೆ. ಅದ್ಯಾಕೋ ಇದ್ದ ಎಲ್ಲಾ ಡೈರಿಗಳನ್ನು ದೂಳು ಹಿಡಿದು ಗೆದ್ದಲು ಬರುವವರೆಗೆ ನಾನು ಕೂಡಾ ಹಾಗೇ ಇಟ್ಟು ಕೊಂಡಿದ್ದೆ. ಅದೇ ಇನ್ನೊಂದೇನಂದ್ರೆ, ಜಗತ್ತಿನ ಪ್ರಭಾಶಾಲಿ ಮನೋವಿಜ್ಞಾನಿ ಎಂದೆಣಿಸಿಕೊಂಡ Sigmund Freud ಹೇಳುತ್ತಾರೆ, ʼKill the father’. ಒಂದೆರಡು ವರುಷಗಳ ಹಿಂದೆ ತಂದೆಯ ಅರ್ಧದಷ್ಟು ಡೈರಿಗಳನ್ನು ಕಸದ ಬುಟ್ಟಿಗೆ ಎಸೆದೆ. ಇನ್ನು ಉಳಿದದ್ದನ್ನು ಹಾಗೇ ಇಟ್ಟಿದ್ದೇನೆ, ಎಷ್ಟು ದಿನ ಅಂತ ನೋಡಬೇಕು. ಫಿಚ್ಚರ್ ಖಂಡಿತಕ್ಕೂ ಅಭಿ ಭೀ ಬಾಕಿ ಹೈ.




