Thursday, December 9, 2010

ಸಿನಿಮಾಕೃತಿ

ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗಾಗಿ ನನ್ನ “ಪುಟಾಣಿ ಪಾರ್ಟಿ” ಚಲನಚಿತ್ರದ ಕೆಲ ಪ್ರದರ್ಶನಗಳಾದವು. ಪ್ರದರ್ಶನಗಳ ನಂತರ ಕೆಲ ಕಡೆ ಮಕ್ಕಳ ಜೊತೆ ಸಂವಾದ ನೆಡೆಯುತ್ತಿತ್ತು. ಒಂದು ಸಿನಿಮಾದಲ್ಲಿ ಏನ್ನನ್ನು ನೋಡುತ್ತೀರೆಂದು ಕೇಳಿದಾಗ ಬಹುತೇಕ ಮಕ್ಕಳು ಹಾಡು, ಫೈಟ್ಸು, ಜೋಕ್ಸು ಮತ್ತು ಕಥೆ; ಅಂತ ಅನ್ನುತ್ತಿದ್ದರು. ಇವುಗಳಿಲ್ಲದೇ ಸಿನಿಮಾವೇ ಇಲ್ಲ, ಇವಿದ್ದರೆ ಮಾತ್ರ ಸಿನಿಮಾ – ಎಂಬ ಭಾವನೆ. ಮಕ್ಕಳು ಬಿಡಿ, ಸಿನಿಮಾದ ಬಗ್ಗೆ ಪೌರ ಜನ ಸಾಮಾನ್ಯರು ತಾಳುವ ಅಭಿಪ್ರಾಯವೂ ಇದೇ ಆಗಿದೆ. ನಾವು ಮಾಡುವ ಸಿನಿಮಾಗಳೇ ಹೀಗಿವೆ, ನಾವು ನೋಡುವ ಸಿನಿಮಾಗಳೇ ಹೀಗಿವೆ, ಅಥವಾ ಹೀಗೆನ್ನಿ - ನಮಗೆ ತೋರಿಸಲ್ಪಡುವ ಸಿನಿಮಾಗಳೇ ಹೀಗಿವೆ ಅಂತ. ಮುಖ್ಯ ವಾಹಿನಿಯ ಸಿನಿಮಾದ ಪ್ರಭಾವವೇ ಹಾಗೆ.

ಮತ್ತೆ ಇನ್ನು ಕೆಲವರು ತಾವು ನೋಡುವ ಸಿನಿಮಾಗಳಲ್ಲಿ ಸಾಮಾಜಿಕ ಕಳಕಳಿಯನ್ನು ಆಶಿಸುತ್ತಾರೆ ಅಥವಾ ಸಿನಿಮಾ ನೋಡುವಾಗ ಉಂಟಾದ ಅನುಭವಗಳನ್ನು ಸಾಹಿತ್ಯಿಕ ಚೌಕಟ್ಟಿನೊಳಗೆ, ನಾಟಕಗಳ ಚೌಕಟ್ಟಿನೊಳಗೆ ಅಥವಾ ಚಿತ್ರಕಲೆಗಳ ಚೌಕಟ್ಟಿನೊಳಗಿಟ್ಟು ನೋಡುತ್ತಾರೆ - ಅರ್ಥಗಳನ್ನು ಹುಡುಕುತ್ತಾರೆ, ಉಪಮೆ, ಸಂಕೇತ ಹಾಗೂ ಸೂಚನೆಗಳನ್ನು ಶೋಧಿಸುತ್ತಾರೆ. ಪಾತ್ರಗಳ ಕ್ಯಾರೆಕ್ಟರಯಿಸೇಶನ್ ಹೀಗಿರಬೇಕಿತ್ತು-ಹಾಗಿರಬೇಕಿತ್ತು; ಕಥೆ ಚೆನ್ನಾಗಿತ್ತು-ಚೆನ್ನಾಗಿಲ್ಲ ಅಂತಲೂ ವಾದಿಸುತ್ತಾರೆ. ’ಪುಟಾಣಿ ಪಾರ್ಟಿ’ ಚಲನಚಿತ್ರವನ್ನು ಕೆಲ ದೊಡ್ಡವರು ನೋಡಿ, ಅವರಲ್ಲೊಬ್ಬರು ನಿಮ್ಮ ಫ್ರೇಮುಗಳಲ್ಲಿ ಹಲವು ಬಾರಿ ತ್ರಿಕೋಣಾಕಾರಗಳ ವಿನ್ಯಾಸಗಳನ್ನು ಗಮನಿಸಿದ್ದೇನೆ – ಇದರ ಅರ್ಥವೇನು? ಇದು ಸಂಘರ್ಷವನ್ನು ಸೂಚಿಸುತ್ತದೆಯೋ? ಅಂತ ಕೇಳಿದರು. ವಿನ್ಯಾಸಗಳನ್ನು ಗಮನಿಸಿದ್ದಕ್ಕೆ ವಂದಿಸಿದರೂ, ನನ್ನ ಹತ್ತಿರ ಅವರ ಪ್ರಶ್ನೆಗೆ ಉತ್ತರವಿರಲಿಲ್ಲ, ಯಾಕೆಂದರೆ ಇಂಥಾ ವಿನ್ಯಾಸಗಳಿಗೆ ನಿರ್ದಿಷ್ಟವಾದ ಅರ್ಥಗಳನ್ನು ನಾನು ಕೊಟ್ಟವನೇ ಅಲ್ಲ.

ಸಿನಿಮಾ ಹೇಗಿರಬೇಕು? ಸಿನಿಮಾ ಹುಟ್ಟಿ ನೂರು ವರುಷಗಳಾದರೂ ಹುಡುಕಾಟ ನಡೆಯುತ್ತಲೇ ಇದೆ. ಸಿನಿಮಾ ಎಲ್ಲ ಕಲೆಗಳ ಸಂಗಮ; ಅದರಲ್ಲಿ ನಾಟಕ, ಸಾಹಿತ್ಯ, ಸಂಗೀತ, ಚಿತ್ರಕಲೆ – ಇವೆಲ್ಲಾ ಕೂಡಿವೆ ಅಂತ ಹೇಳುತ್ತಾರೆ ಬಲ್ಲವರು. ಫ್ರೆಂಚ್ ನಿರ್ದೇಶಕ ರಾಬರ್ಟ್ ಬ್ರೆಸ್ಸಾನ್ನ ನಿಲುವು ಸ್ವಲ್ಪ ಭಿನ್ನವಾಗಿದೆ. ತನ್ನ ಪುಸ್ತಕ ’ನೋಟ್ಸ್ ಆಫ್ ಏ ಸಿನಿಮಾಟೋಗ್ರಾಫರ್’ ನಲ್ಲಿ ಅವನು ಹೀಗೆನ್ನುತ್ತಾನೆ –

’The truth of cinematography cannot be the truth of the theater, not the truth of the novel nor the truth of the painting.What the cinematographer captures with his or her own resources cannot be what the theater, the novel, painting capture with theirs”

’ಸಿನಿಮಾಕೃತಿಯಲ್ಲಿ ಸೂಸುವ ಸತ್ಯ ನಾಟಕದಲ್ಲಿರುವಂಥದ್ದಲ್ಲ; ಕಾದಂಬರಿಯಲ್ಲಿರುವಂಥದ್ದಲ್ಲ ಅಥವಾ ಚಿತ್ರಕಲೆಯಲ್ಲಿರುವಂಥದ್ದಲ್ಲ. ನಾಟಕಕಾರನ, ಕಾದಂಬರಿಕಾರನ ಹಾಗೂ ಚಿತ್ರಕಲೆಗಾರನ ಸೃಜನಶೀಲ ಉಪಕರಣಗಳು ಸಿನಿಮಾಕರ್ತನ ಉಪಕರಣಗಳಾಗಲು ಸಾಧ್ಯವೇ ಇಲ್ಲ.”

ನಾವು ’ಕುರ್ಚಿ’ ಎಂಬ ಶಬ್ದವನ್ನು ಉಚ್ಚರಿಸಿದರೆ, ನಮಗೆಲ್ಲರಿಗೂ ಅದರ ಅರ್ಥವೇನಂತ ಗೊತ್ತಿದೆ. ವಾಸ್ತವದಲ್ಲಿ ’ಕುರ್ಚಿ’ ಒಂಬುವುದು ಒಂದು ಧ್ವನಿ, ಅದರ ಉಚ್ಚಾರಣೆ ಒಂದು ಬರೀಯ ಶಬ್ದ. ಈ ಧ್ವನಿ ಅಮೂರ್ತವಾದದ್ದು. ’ಕುರ್ಚಿ’ ಎಂಬ ಶಬ್ಧಕ್ಕೆ ಅರ್ಥವಿಲ್ಲ, ಅದಕ್ಕೆ ಅರ್ಥ ಕೊಡುವವರು ನಾವು. ’ಕುರ್ಚಿ’ ಎಂಬ ಅಮೂರ್ತ ಧ್ವನಿ ಹೊರಡಿಸಿದಾಗ ಮೂರ್ತವಾಗಿ ನಮ್ಮ ಕಣ್ಣೆದುರಿಗೆ / ಮನಸ್ಸಿಗೆ ಬರುವುದು ನಾವು ಕೂರಬಹುದಾದ ಆ ನಾಲ್ಕು ಕಾಲಿನ ವಸ್ತು. ’ಕುರ್ಚಿ’ ಎಂದಾಗ ನಮಗೆ ಬೇರೆ ಬೇರೆ ರೀತಿಯ ಕುರ್ಚಿಗಳು ಮನಸ್ಸಿಗೆ ಬರಬಹುದು. ಕೆಲವರಿಗೆ ಸಣ್ಣ ಕುರ್ಚಿ ಬಂದರೆ, ಇನ್ನು ಕೆಲವರಿಗೆ ದೊಡ್ಡದು; ಒಬ್ಬರಿಗೆ ಮರದ ಕುರ್ಚಿ ಆದರೆ, ಇನ್ನೊಬ್ಬರಿಗೆ ಸ್ಟೀಲ್ ಕುರ್ಚಿ. ತಮ್ಮ ತಮ್ಮ ಅನುಭವಗಳಿಗೆ ಅನುಸಾರವಾಗಿ ’ಕುರ್ಚಿ” ಎಂಬ ಧ್ವನಿ ನಮ್ಮ ಮನಸ್ಸಿನಲ್ಲಿ ಮೂರ್ತ ರೂಪವಾಗಿ ಪರಿವರ್ತನೆ ಗೊಳ್ಳುತ್ತದೆ. ಸಾಹಿತ್ಯದಲ್ಲಿ ಹೀಗೆ ಅಮೂರ್ತತೆಯಿಂದ ಮೂರ್ತತೆಯ ಕಡೆಗೆ ಸಾಗುತ್ತದೆ ಪಯಣ.

ಸಿನಿಮಾ ಒಂದು ಮುದ್ರಿಕೆಯ (ರೆಕಾರ್ಡಿಂಗ್) ಮಾಧ್ಯಮ. ಆದುದರಿಂದ ಇಲ್ಲಿ ಎಲ್ಲವೂ ಮೂರ್ತ. ಇಲ್ಲಿ ನಾವು ’ಕುರ್ಚಿ’ ಎಂಬ ಆ ನಾಲ್ಕು ಕಾಲಿನ ವಸ್ತುವನ್ನು ಮುದ್ರಿತಗೊಂಡಿದ್ದನ್ನು ನೋಡುತ್ತೇವೆ, ಅದನ್ನು ಯಾರಾದರೂ ಎತ್ತಿ ಕೆಳಗಿಟ್ಟರೆ ಅದರಿಂದಾಗುವ ’ಟಪ್ಪ್’ ಎಂಬ ಮುದ್ರಿತ ಶಬ್ಧವನ್ನು ಕೇಳುತ್ತೇವೆ. ಮುದ್ರಿತಗೊಂಡ ಕುರ್ಚಿ ಹಾಗೂ ನಿಜವಾದ ಕುರ್ಚಿಗೆ ವ್ಯತ್ಯಾಸವಿರಬಹುದು. ಆದರೆ ಮುದ್ರಿತಗೊಂಡ ಕುರ್ಚಿ ಒಂದು ನಿರ್ದಿಷ್ಟ ಆಕಾರ ಹಾಗೂ ಗಾತ್ರವಿರುವ ಕುರ್ಚಿಯದ್ದಾಗಿರುತ್ತದೆ, ಕುರ್ಚಿಯನ್ನು ಎತ್ತಿ ಇಡುವ ಶಬ್ದ ಕೂಡಾ ಅಷ್ಟೇ ನಿರ್ದಿಷ್ಟವಾಗಿರುತ್ತದೆ. ಹೆಚ್ಚು ಕಡಿಮೆ ಎಲ್ಲರಿಗೂ ಈ ನಿರ್ದಿಷ್ಟತೆ ಸಮಾನವಾಗಿರುತ್ತದೆ. ಹೀಗಿರುವಾಗ, ಈ ನಿರ್ದಿಷ್ಟತೆಯಲ್ಲಿ ಅಮೂರ್ತತೆಯ ಅರ್ಥವನ್ನಾದರೂ ಹೇಗೆ ಹುಡುಕುತ್ತೀರಿ? ಈ ಮೂರ್ತ ಕುರ್ಚಿ ಬೇರೆ ಏನೋ ಒಂದರ ಸಂಕೇತವಾಗಲು ಹೇಗೆ ಸಾಧ್ಯ? ಕುರ್ಚಿ ಯಾವುದೋ ಒಂದು ವಸ್ತುವಿನ ಅಥವಾ ವಿಚಾರದ ಸಂಕೇತವಾದರೆ ಅದರ ಮೇಲಿರೋ ಬೈರಾಸ ಯಾವುದರ ಸಂಕೇತ? ಪಕ್ಕದಲ್ಲಿರುವ ಟೇಬಲ್? ಅದರ ಮೇಲಿರುವ ಪುಸ್ತಕಗಳು? ಅಸಂಬದ್ಧ, ಅಲ್ಲವೇ?

’ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’ ಎಂದು ಯಾರಾದರೂ ನಮ್ಮ ಮುಂದೆ ಹಾಡಿದರೆ, ಅದರಲ್ಲಿ ಒಬ್ಬರಿಗೊಂದು ಅರ್ಥ / ಅನುಭವ ಹೊಳೆಯುವುದು ಸಹಜ. ಕವಿತೆಯ ಶಕ್ತಿಯೇ ಅದು. ಸಿನಿಮಾದಲ್ಲಿ ಇದೇ ಪದ್ಯವನ್ನು ರಾಜಕುಮಾರ ಹಾಗೂ ಜಯಂತಿ ಕೊಡೈಕೆನಾಲ್ ಅಥವಾ ಊಟಿಯ ಯಾವುದೋ ಒಂದು ಕೆರೆಯಲ್ಲಿ ಹಾಡಿದರೆ ಅದಕ್ಕೆ ಅಂತಹ ಆರ್ಥಗಳು / ಅನುಭವಗಳು ಬರುವುದು ತುಸು ಕಷ್ಟ. ನಿಮ್ಮಲ್ಲಿ ಕೆಲವರು ’ಮಿಸ್ ಲೀಲಾವತಿ’ ಎಂಬ ಹಳೆಯ ಕನ್ನಡ ಚಲನಚಿತ್ರವನ್ನು ನೋಡಿರಬಹುದು. ಅಥವಾ ಆ ಚಲನಚಿತ್ರದಲ್ಲಿ ಬಳಸಿಕೊಂಡಿರುವ ಈ ಹಾಡನ್ನು ಯುಟ್ಯುಬಿನಲ್ಲಿ ಕ್ಲಿಕ್ಕಿಸಿ ನೋಡಿ ಕೇಳಿರಬಹುದು. ಎಷ್ಟೆಂದರೂ ಅದು ಎರಡು ವ್ಯಕ್ತಿಗಳು ಒಂದು ಸಣ್ಣ ದೋಣಿಯಲ್ಲಿ ಕೂತು ಒಂದು ಹಾಡನ್ನು ಹಾಡುತಿರುವ ಮೂರ್ತ ಕ್ರಿಯೆಯಾಗುತ್ತದೆ. ಅದಕ್ಕೆ ಅರ್ಥ ಅಷ್ಟೇ – ಎರಡು ವ್ಯಕ್ತಿಗಳು ಒಂದು ಸಣ್ಣ ದೋಣಿಯಲ್ಲಿ ಕೂತು ಒಂದು ಹಾಡನ್ನು ಹಾಡುತ್ತಿರುವುದು; ನಿರ್ದಿಷ್ಟವಾದದ್ದು. ಹಾಗಾದರೆ ಸಿನಿಮಾದಲ್ಲಿ ಅಮೂರ್ತತೆ ಹುಟ್ಟುವುದಾದರೂ ಹೇಗೆ? ಇಲ್ಲಿ ಕಲೆಯ ಪ್ರಕ್ರಿಯೆ ನಡೆಯುವುದಾದರೂ ಹೇಗೆ?

ಕುಲೆಶೋವ್ ಎಂಬ ರಷ್ಯನ್ ಸಿನಿಮಾಕರ್ತ ಸುಮಾರು ತೊಂಬತ್ತು ವರುಷಗಳ ಹಿಂದೆ ಪುಡೊವ್ಕಿನ್ ಎಂಬ ಇನ್ನೊಬ್ಬ ರಷ್ಯನ್ ಸಿನಿಮಾಕರ್ತನೊಡನೆ ಸೇರಿ ಒಂದು ಪ್ರಯೋಗವನ್ನು ಮಾಡಿದ. ಅದಕ್ಕೆ ನಾವು ಕುಲೆಶೋವ್ ಇಫೆಕ್ಟ್ ಅಂತ ಕರಿಯುತ್ತೇವೆ. ನಾವು ಸಿನಿಮಾ ಮಾಡುವ ಹಾಗೂ ನೋಡುವ ಪ್ರಕ್ರಿಯೆಯ ಮರ್ಮ ಇದರಲ್ಲಿ ಅಡಗಿದೆ ಅಂತ ನಾನು ಭಾವಿಸುತ್ತೇನೆ. ಅವರು, ಒಬ್ಬ ರಷಿಯನ್ ನಟನ ಭಾವನೆಯಿಲ್ಲದ ಮುಖದ ಶಾಟ್ ಅನ್ನುಒಂದು ಸೂಪಿನ ಪ್ಲೇಟಿನ ಶಾಟಿನೊಂದಿಗೆ, ಒಂದು ಹೆಂಗಸಿನ ಶಾಟಿನೊಂದಿಗೆ ಹಾಗೂ ಒಂದು ಸಣ್ಣ ಹುಡುಗಿಯ ಕಾಫಿನ್ನ ಶಾಟಿನೊಂದಿಗೆ ಬೇರೆ ಬೇರೆಯಾಗಿ ಜೋಡಿಸಿ, ಅವುಗಳನ್ನು ಬೇರೆ ಬೇರೆಯಾಗಿ ಜನರಿಗೆ ತೋರಿಸಿದರು. ಸೂಪಿನ ಪ್ಲೇಟಿನೊಡನೆ ಸೆರಿಸಿದ ಕ್ಲಿಪ್ಪಿಂಗ್ ಅನ್ನು ನೋಡಿದಾಗ ಜನರು ಆ ನಟನಿಗೆ ಹಸಿವಾಗಿದೆ ಅಂತ ಅರ್ಥ ಮಾಡಿಕೊಂಡರು. ಹೆಂಗಸಿನ ಶಾಟಿನೊಡನೆ ಸೇರಿಸಿದ ಕ್ಲಿಪ್ಪಿಂಗ್ ಅನ್ನು ನೋಡಿದಾಗ ಜನರು ಆ ನಟ ಕಾಮುಕ ಅಂತ ಅರ್ಥ ಮಾಡಿಕೊಂಡರು ಹಾಗೂ ಆ ಸಣ್ಣ ಹುಡುಗಿಯ ಕಾಫಿನ್ ಜೊತೆಗೆ ಸೇರಿಸಿದ ಕ್ಲಿಪ್ಪಿಂಗ್ ಕರುಣಾ ರಸ ಉಕ್ಕಿಸಿತಂತೆ.

ಒಂದೇ ಖಚಿತವಾದ ಶಾಟನ್ನು ಮೂರು ಬೇರೆ ಬೇರೆ ಖಚಿತವಾದ ಶಾಟುಗಳೊಂದಿಗೆ ಸೇರಿಸಿದರೆ ಪ್ರೇಕ್ಷಕರ ಮನದಲ್ಲಿ ಮೂಡಿಕೊಂಡ ಬೇರೆ ಬೇರೆ ಅರ್ಥಗಳು! ಅಂದರೆ ಎರಡು ಖಚಿತವಾದ ಶಾಟುಗಳಿಗೆ ತಮ್ಮದೇ ಆದ ಅರ್ಥಗಳಿದ್ದರೂ ಅವುಗಳನ್ನು ಜೋಡಿಸಿದರೆ ಬರುವುದು ಮತ್ತೊಂದೇ ಅರ್ಥ! ಇಲ್ಲಿ ಮೂರ್ತತೆಯಿಂದ ಅಮೂರ್ತತೆಯ ಕಡೆಗೆ ಸಾಗಿದೆ ಪಯಣ – ಎರಡು ಮೂರ್ತ ಶಾಟುಗಳ ನಡುವೆ, ಎರಡು ಸೀನುಗಳ ನಡುವೆ, ದೃಶ್ಯ ಹಾಗೂ ಧ್ವನಿಗಳ ನಡುವೆ. ಧ್ವನಿ ಹಾಗೂ ಧ್ವನಿಗಳ ನಡುವೆ ಇರುವ ಅಮೂರ್ತತೆ. ತುಣುಕುಗಳು ತಮ್ಮ-ತಮ್ಮೊಳಗೇ ಸ್ಪರ್ಶಿಸಿ ಅದರಿಂದ ಹೊರ ಸೂಸುವ ಅನುಭವ ಅಮೂರ್ತವಾದದ್ದು ಹಾಗೂ ಅವು ಒಬ್ಬೊಬ್ಬರಿಗೆ ಒಂದೊಂದು ತರದ್ದು. ಈ ಮರ್ಮವನು ಅರೆದು ಕುಡಿದು ಅರಗಿಸಿಕೊಂಡು ತೇಗಿ ಸಿನಿಮಾಕೃತಿಗಳನ್ನು ಮಾಡಿದರೆ ಹಾಗೂ ಸಿನಿಮಾ ಕೃತಿಗಳನ್ನು ನೋಡಿ ಅನುಭವಿಸಿದರೆ, ಅದರಿಂದಾಗುವ ಆಗುವ ಸೊಗಸೇ ಬೆರೆ.

ಮತ್ತೆ ಬ್ರೆಸ್ಸಾನ್ನನ್ನು ಉಲ್ಲೇಖಿಸ ಬೇಕಾಗುತ್ತದೆ.

'An image should be transformed by contact with other images as is colour by contact with other colour. A blue is not the same blue besides a green, a yellow and a red. No art without transformation.'

’ಬಣ್ಣಗಳು ಒಂದಕ್ಕೊಂದು ಸ್ಪರ್ಶಿಸಿದಂತೆ, ಒಂದು ಬಿಂಬ ತನ್ನ ರೂಪವನ್ನು ಬದಲಿಸುವುದು ಇತರ ಬಿಂಬಗಳ ಜೊತೆ ಸ್ಪರ್ಶಿಸಿಯೇ. ನೀಲಿ ಬಣ್ಣವನ್ನು ಹಸಿರು, ಹಳದಿ ಅಥವಾ ಕೆಂಪು ಬಣ್ಣಗಳ ಬಳಿ ಇಟ್ಟರೆ, ಅದು ಅದೇ ನೀಲಿ ಬಣ್ಣವಾಗಿರಲಾರದು. ರೂಪಾಂತರವಿಲ್ಲದೆ ಕಲೇಯೇ ಇಲ್ಲ.’

ಇಂದಿನ ಸಿನಿಮಾಗಳಲ್ಲಿ ನಮಗೆ ನಟನೇ ಮುಖ್ಯ. ಅವನ ಹೆಸರಿನಲ್ಲೇ ಸಿನಿಮಾ ತಯಾರಾಗುವುದು, ಅವನ ಹೆಸರಿನಲ್ಲೇ ಸಿನಿಮಾ ಓಡುವುದು ಹಾಗೂ ಅವನ ಹೆಸರಿನಲ್ಲೇ ನಾವು ಸಿನಿಮಾ ನೋಡುವುದು. ಅವನೇ ಸರ್ವಸ್ವ. ಆದರೆ ಮೇಲೆ ಹೇಳಿದ ಸಿನಿಮಾ ಮಾಧ್ಯಮದ ವಾಸ್ತವತೆಯಲ್ಲಿ ನಟ ಪೂರಕವಾಗುತ್ತಾನೇ ಹೊರತು, ಮುಖ್ಯವಲ್ಲ. ಅವನಿಲ್ಲದೇ ಸಿನಿಮಾ ಇರುತ್ತದೆ. ನಾಟಕದಲ್ಲಾದರೆ ನಟ ಮುಖ್ಯ, ಅವನಿಲ್ಲದೇ ಇದ್ದರೆ ನಾಟಕದ ಕ್ರಿಯೆಯೇ ಇಲ್ಲ. ಸೆಟ್ಟಿಂಗ್, ಲೈಟಿಂಗ್ ಸ್ಕೀಮು, ರಂಗು ರಂಗಿನ ಕಾಸ್ಟ್ಯೂಮು, ಸಂಗೀತ, ಹಾಡು, ಡಾಯಲಾಗುಗಳು - ಒಂದು ನಾಟಕದಿಂದ ಇವೆಲ್ಲವನ್ನೂ ತೆಗೆದು ಕಿತ್ತೆಸೆಯಬಹುದು; ಆದರೆ ನಟನನ್ನಲ್ಲ, ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಅವನು ಮಾಡುವ ಕ್ರಿಯೆಯನ್ನಲ್ಲ. ಪ್ರೇಕ್ಷಕ, ನಟ ಹಾಗೂ ಒಂದು ಕಾಲಾವಧಿಯಲ್ಲಿ ನಟನು ಮಾಡುವ ರಂಗಕ್ರಿಯೆ – ಇವುಗಳು ಇಲ್ಲದೇ ಇದ್ದರೆ, ನಾಟಕವೇ ಇಲ್ಲ.

ಸಿನಿಮಾದ ಮೂಲಭೂತ ಘಟಕ ಸೆಲ್ಲುಲಾಯಿಡ್ನಲ್ಲಾಗಲಿ ಅಥವಾ ಡಿಜಿಟಲ್ನಲ್ಲಾಗಲೀ ಮುದ್ರಿತಗೊಂಡಿರುವ (ರೆಕಾರ್ಡಾಗಿರುವ) ಒಂದು ಶಾಟು, ಅದರೊಳಗೆ ಮುದ್ರಿತಗೊಂಡಿರುವ ದೃಶ್ಯ ಹಾಗೂ ಧ್ವನಿಗಳು. ಸುಲಭ ಬಾಷೆಯಲ್ಲಿ ಹೇಳುವುದಾದರೆ ಶಾಟ್ ಅಂದರೆ ಕ್ಯಾಮರಾ ಆನ್ ಮಾಡಿ ಆಫ್ ಮಾಡುವ ತನಕ ಮುದ್ರಿತಗೊಂಡಿರುವ ಸಂಗತಿಗಳು. ಸೆಟ್ಟಿಂಗ್, ಚಕಾಚಕ್ ಲೈಟಿಂಗ್, ರಂಗು ರಂಗಿನ ಕಾಸ್ಟ್ಯೂಮು, ಸಂಗೀತ, ಹಾಡು, ಡಾಯಲಾಗುಗಳು - ಒಂದು ಸಿನಿಮಾಕೃತಿ ಇವೆಲ್ಲವನ್ನೂ ತೊರೆದು ಕಿತ್ತೆಸೆಯ ಬಹುದು; ಆದರೆ ಶಾಟುಗಳನ್ನಲ್ಲ, ಶಾಟುಗಳ ಜೋಡಣೆಗಳಿಂದಾಗುವ ಅಮೂರ್ತ ಅನುಭವಗಳನ್ನಲ್ಲ. ಶಾಟುಗಳ ಜೋಡಣೆ ಅಂತ ಅಂದ ಮೇಲೆ ಕಾಲಾವಧಿ ಬರುತ್ತದೆ. ಹೀಗೆ - ಒಂದು ನಿರ್ದಿಷ್ಟ ಕಾಲಾವಧಿ, ಶಾಟುಗಳು ಹಾಗೂ ಶಾಟುಗಳ ಜೋಡಣೆಗಳಿಂದಾದ ಅಮೂರ್ತ ಅನುಭವಗಳು ಇವುಗಳಿಲ್ಲದೇ ಒಂದು ಸಿನಿಮಾ ಕೃತಿಯೇ ಇಲ್ಲ.

ನಾಟಕ, ಸಾಹಿತ್ಯ, ಸಂಗೀತ, ಚಿತ್ರಕಲೆ ಇತ್ಯಾದಿ ಕಲೆಗಳು ಈ ಪ್ರಕ್ರಿಯೆಗೆ ಪೂರಕವಾಗಿತ್ತವೆಯೇ ಹೊರತು, ಅವೇ ಪ್ರಕ್ರಿಯೆಯ ಮುಖ್ಯಾಂಶವಾಗುವುದಿಲ್ಲ. ಒಂದು ವೇಳೆ ಯಾವುದೇ ಸಿನಿಮಾ ಅಂಥ ಅಂಶಗಳನ್ನೇನಾದರೂ ಮುಖ್ಯವಾಗಿ ಅವಲಂಬಿಸಿದ್ದಲ್ಲಿ, ಅದು ಅಂಥಾ ಕಲೆಯ ಮುದ್ರಣವಾಗುತ್ತದೆ (ರೆಕಾರ್ಡಿಂಗ್) ಹೊರತು ಸಿನಿಮಾಕೃತಿ ಅಲ್ಲ. ನಾಟಕಗಳ ಸಂದರ್ಭದಲ್ಲಿ ಹೇಳುವುದಾದರೆ ಅಂತ ಸಿನಿಮಾ ಬರೀ ನಾಟಕದ ಚಿತ್ರೀಕರಣವಾಗಿ ಉಳಿಯುತ್ತದೆ ಹೊರತು ಸಿನಿಮಾಕೃತಿ ಅಲ್ಲ. ಅಂತೆಯೇ ನನ್ನನ್ನು ಕೇಳಿದರೆ ಒಬ್ಬ ಪ್ರೇಕ್ಷಕ, ಸಹೃದಯಿ ಅಥವಾ ವಿಮರ್ಶಕ ಕೂಡಾ ಒಂದು ಚಿತ್ರವನ್ನು ಅನುಭವಿಸುವಾಗ ಅಂತಹ ಅಂಶಗಳನ್ನು ಮುಖ್ಯವಾಗಿ ಅವಲಂಬಿಸಿದ್ದಲ್ಲಿ, ಅವನು ಖಂಡಿತಕ್ಕೂ ಏನನ್ನೋ ಕಳೆದುಕೊಳ್ಳುತ್ತಿರುತ್ತಾನೆ.

ನಾನು ಮೇಲೆ ಸೂಚಿಸಿದ ವ್ಯಾಖ್ಯಾನಗಳು ಸರ್ವ ಸಿದ್ಧ ಸತ್ಯಗಳೇನಲ್ಲ, ಅವು ಬರೀ ನನಗೆ ಕಂಡಂತಹ ಸತ್ಯಗಳು. ನೀವು ಇದನ್ನು ಒಪ್ಪಿಕೊಳ್ಳಬೇಕೆಂಬ ಹಟವೇನಿಲ್ಲ. ಇದಿಷ್ಟನ್ನು ಗ್ರಹಿಸಲು ನನಗೆ ಇಪ್ಪತ್ತು ವರುಷಗಳಿಗಿಂತ ಹೆಚ್ಚೇ ಬೇಕಾದವು. ಆದರೂ ಪೂರ್ಣವಾಗಿ ಗ್ರಹಿಸಿದ್ದೇನೆ ಎಂದು ಖಚಿತವಾಗಿ ಹೇಳಲಾರೆ. ನಾನು ಮಾಡಿದ ಸಿನಿಮಾಗಳಲ್ಲೂ ಮೇಲೆ ಹೇಳಿದ ದ್ವಂಧ್ವಗಳು ಇರಬಹುದು. ’ಹುಟ್ಟು ಗುಣ ಸತ್ರೂ ಬಿಡೊಲ್ಲ’ ಅಂತಾರಲ್ಲ, ಹಾಗೆ. ನಾನು ಸಿನಿಮಾದಲ್ಲಿ ನಟ, ಕಥೆ, ಸಂಗೀತ ಇತ್ಯಾದಿಗಳೇ ಮುಖ್ಯ ಎಂದು ತಿಳಿದಿದ್ದೆ – ಸೀಮಿತನಾಗಿದ್ದೆ. ಆದರೆ ಅದರಿಂದಾಚೆಗೆ ಹೋಗಬುಹುದು ಎಂಬ ಗ್ರಹಿಕೆ ಆದ ಮೇಲೆ; ಸಿನಿಮಾಕೃತಿಗಳಿಗೆ ಸಂಬಂಧ ಪಟ್ಟಂತೆ ಬೇರೊಂದು ಹೊಸ ಲೋಕವೇ ತೆರೆದು ಕೊಂಡಿತು. ನಿಮ್ಮೆಲ್ಲರನ್ನೂ ಈ ಲೋಕಕ್ಕೆ ಕರೆದೋಯ್ಯ ಬೇಕೆಂಬ ಆಸೆ, ಅಷ್ಟೆ.

Cinematography is a writing with images in movement and with sound. – Robert Bresson

ಕೊನೆಯಲ್ಲಿ ರಾಬರ್ಟ್ ಬ್ರೆಸ್ಸಾನ್ನನ್ನು ಮತ್ತೆ ಕರೆ ತರುತ್ತೇನೆ- ಸಿನಿಮಾಟೊಗ್ರಾಫಿ ಅಂದರೆ ಬಿಂಬಗಳ ಚಲನೆಗಳೊಂದಿನ ಬರಹ; ಧ್ವನಿಗಳ ಜೊತೆಗೆ.

14 comments:

  1. ram if you look at cinema in the context of natyshastra definition then entertainment need not be the fundamental goal. information and education is also an criteria.
    as for intepretation again this is a combination of chintana and rasaanubhava, that is the image, reading or whatever would trigger an experience and I reflect that experience through the projected art.
    infact nagarjuna an buddhist writer says that every time you read a book the experience is different for between the two readings your anubhava has varied.

    ReplyDelete
  2. ಕನ್ನಡದಲ್ಲಿ ಈ ರೀತಿಯ ಸಮಕಾಲೀನ ಒಳನೋಟ ಕೊಡಬಲ್ಲ ಲೇಖನಗಳು ಸಾಹಿತ್ಯದ ಸಂದರ್ಭ ಹೊರತುಪಡಿಸಿ ಸಿನಿಮಾ, ಕಲೆ, ವಾಸ್ತುಶಿಲ್ಪ ಇತ್ಯಾದಿ ಸಂದರ್ಭಗಳಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಬಹಳ ಕುತೂಹಲಕರ ಲೇಖನ. ನಿಮ್ಮ ಬರಹಗಳು ಸ್ವಾಗತಾರ್ಹ.

    ReplyDelete
  3. @Parwathisringari- wah! rasaanubhava and chintana... well said.

    ReplyDelete
  4. ತಲ್ಲೂರ್ ಅವರೆ, ಲೇಖನ ಓದಿ ಕಮೆಂಟ್ ಮಾಡಿದಕ್ಕೆ ಧನ್ಯವಾದಗಳು. ನೀವು ಸಾಂಗತ್ಯ ಎಂಬ ವೆಬ್ ಸೈಟ್ ಬಗ್ಗೆ ಕೇಳಿರಬಹುದು. ಅದರಲ್ಲಿ ಕೆಲವೊಮ್ಮೆ ಸಿನಿಮದ ಬಗ್ಗೆ ಕೆಲ ಒಳ್ಳೆ ಲೇಖನಗಳು ಬರುತ್ತವೆ.

    ReplyDelete
  5. ತುಂಬಾ ಒಳ್ಳೆಯ ವಿಶ್ಲೇಷಣೆ ಸರ್! ಸಾಹಿತ್ಯಕ್ಕೂ, ನಾಟಕಕ್ಕೂ ಮತ್ತು ಸಿನಿಮಾಗೂ ಇರುವ ವ್ಯತ್ಯಾಸ ಹಾಗೂ ಅನಿವಾರ್ಯತೆಗಳು ಎಂಥವರಿಗೂ ಸುಲಭವಾಗಿ ಅರ್ಥವಾಗುವಂತೆ ಬಿಡಿಸಿಟ್ಟಿದ್ದೀರಿ. ಥ್ಯಾಂಕ್ಸ್.

    ReplyDelete
  6. ಏನೋ ತಲೆಗೆ ಹೊಳೆದದ್ದನ್ನು ಬರೆದಿದ್ದೇನೆ. ಕಮ್ಯುನಿಕೇಟ್ ಆಯಿತು ಅಂದ್ರೆ ಹ್ಯಾಪಿ.

    ReplyDelete
  7. chintanege hacchuva baraha. chennagide sir. -suresh k.

    ReplyDelete
  8. @ MIERS and Suresh - thanks for the visit. Am glad that you have reacted.

    ReplyDelete
  9. Very informative article; nicely written! When we read a great novel, the image we get in our mind is very different than what we see when the same story is made into a movie. Even then each person in the audience experiences it differently. A good director/ cinematographer can take the audience to a world beyond the limits of story telling, acting, music and dance.You are well on your way achieving this Ram, congrats!

    ReplyDelete
  10. Actually the comment is from Nalini! I'm just using Balakrishna's google acct!

    ReplyDelete
  11. Wow! thanks for commenting Nalini akka.

    ReplyDelete
  12. ಚನ್ನಾಗಿದೆ ರಾಮ್, ಸಿನೆಮಾ, ಸಾಹಿತ್ಯ, ನಾಟಕ, ಚಿತ್ರಕಲೆ ಗಳಿಗಿಂತಾ ಬಿನ್ನಾ ಎಂಬುದನ್ನ ಎಲ್ಲರಿಗೂ ತಿಳಿಯುವಹಾಗೆ ಬಿಡಿಸಿ ಬಿಡಿಸಿ ವಿವರಿಸಿದ್ದೀರಿ, ಧನ್ಯವಾದಗಳು. ಈ ರೀತಿಯ ಲೇಖನಗಳ ಅವಶ್ಯಕತೆ ತುಂಬಾ ಇದೆ.

    ಪ್ರಕಾಶ್ ಬಾಬು

    ReplyDelete
  13. ಸಿಂಪ್ಲಿಫಾಯಿ ಮಾಡಿ ವಿವರಿಸುವ ಪ್ರಯತ್ವ, ಪ್ರಕಾಶ್. ಇದನ್ನ ಬರೀಬೇಕಾದ್ರೆ ನನಗೂ ಸ್ವಲ್ಪ ಕ್ಲೇರಿಟಿ ಸಿಕ್ತು. ಓದಿ, ಪ್ರತಿಕ್ರಿಯ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete