ನಾಯಕ ಮೂರ್ತಿ ಓರ್ವ ಆದರ್ಶ ಶಿಕ್ಷಕ; ಸಮಾಜ ಸೇವೆಯನೇ ನಂಬಿದವನು. ಹಳ್ಳಿಗಾಡಿನ ಶಾಲೆಯೊಂದರ ಉಸ್ತುವಾರಿ ವಹಿಸಿ, ಹಳ್ಳಿ ಮಕ್ಕಳಲ್ಲಿ ಶಿಸ್ತು ಮೂಡಿಸಲು ಪಣತೊಡುತ್ತಾನೆ. ಅಲ್ಲದೆ ಪತ್ನಿ ನಿರ್ಮಲಾ ಜೊತೆ ನವದಾಂಪತ್ಯದ ಖುಷಿ ಬೇರೆ. ಆದರೆ ಮೊದಲನೇ ಹೆರಿಗೆಯಲ್ಲಿ ನಿರ್ಮಲಾ ಸಾವನ್ನಪ್ಪುತ್ತಾಳೆ. ನಿರ್ಮಲಾ ಇಲ್ಲದ ಮೂರ್ತಿ ಬದುಕು ತೀರಾ ದುಸ್ತರವಾಗುತ್ತದೆ. ಮಗು ಕಾಯಿಲೆ ಬಿದ್ದು ಚೇತರಿಸಿಕೊಳ್ಳದೇ ಕಿವುಡಾಗಿಬಿಡುತ್ತದೆ. ಕೊನೆಗೆ ಮಗುವಿಗಾಗಿ ಮೂರ್ತಿ ಗಂಗಾ ಎಂಬವಳನ್ನು ಮದುವೆಯಾಗುತ್ತಾಳೆ. ಗಂಗಾ ಮೂಕಿ ಮತ್ತು ಕಿವುಡಿ. ಅವಳ ಸನ್ನಡತೆಯಿಂದಾಗಿ ಮನೆ ಮತ್ತೆ ನಂದನವಾಗುತ್ತದೆ; ಸಂವಹನ ನಡೆಯುವುದು ತುಟಿಗಳ ಚಲನವಲನವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ. (lip reading) ಎಲ್ಲರಂತೆ ಮೂಕ ಮತ್ತು ಕಿವುಡರೂ ಸಂವಹನ ನಡೆಸಬಹುದು ಎನ್ನುವ ವಿಚಾರವನ್ನು ಅರ್ಥ ಮಾಡಿಕೊಂಡ ಮೂರ್ತಿ ಕುಟುಂಬ, ಅಂತಹ ಮಕ್ಕಳನ್ನು ತಮ್ಮಂತೆಯೇ ಶಕ್ತಗೊಳಿಸಲು ಶಾಲೆಯೊಂದನ್ನು ತೆರೆಯುತ್ತದೆ. ಮತ್ತೆ ಹಳಿ ತಪ್ಪುವ ಬದುಕು. ಬೆಂಕಿ ಅಕಸ್ಮಿಕದಲ್ಲಿ ಕಿವುಡಿ ಗಂಗಾಳಿಗೆ ಮಗುವಿನ ರೋದನ ಕೇಳಿಸುವುದೇ ಇಲ್ಲ. ಮಗು ಸಾವನ್ನಪ್ಪುತ್ತದೆ. ಹೊಸ ಶಾಲೆಯಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಲ್ಲೇ ಮೂರ್ತಿ ಕುಟುಂಬ ತೃಪ್ತಿ ಕಾಣುತ್ತದೆ. ಗಂಗಾ ಮತ್ತೆ ಗಂಡು ಮಗುವಿಗೆ ಜನ್ಮ ನೀಡುವುದರೊಂದಿಗೆ ಬದುಕು ಹಸನಾಗುತ್ತದೆ.
ಚಿತ್ರದ ಸಾಮಾಜಿಕ ಕಳಕಳಿ ಹಾಗೂ ಚಿತ್ರೀಕರಣದಲ್ಲಿ ಭಾವಾತಿರೇಕಕ್ಕೆ ಒತ್ತು ನೀಡದೇ ಪಾತ್ರದ ಅಂತರಂಗದ ವ್ಯಾಪ್ತಿಯನ್ನು ಬಿಂಬಿಸಲು ಯತ್ನಿಸಿದ ರೀತಿಯನ್ನು ಗಮನಿಸಿಯೇ ನಾಂದಿ ನಿರ್ದೇಶಕ ಎನ್. ಲಕ್ಷ್ಮೀ ನಾರಾಯಣ ಅವರನ್ನು ಕನ್ನಡದ ಹೊಸ ಅಲೆಯ ಚಿತ್ರಗಳ ಪಿತಾಮಹ ಎಂದು ಚಿತ್ರ ವಿಮರ್ಶಕ ಮನುಚಕ್ರವರ್ತಿ ಕರೆದಿದ್ದರು. ಎಂ. ವಿ. ಕೃಷ್ಣಸ್ವಾಮಿ ಮತ್ತು ಪುಟ್ಟಣ್ಣ ಕಣಗಾಲ್ ಅವರ ಶೈಲಿಯಲ್ಲಿಯೇ ಕನ್ನಡ ಚಿತ್ರಲೋಕದಲ್ಲಿ ನಿರ್ದೇಶಕನ ಸೃಜನಶೀಲತೆಗೆ ಘನತೆ ತಂದು ಕೊಟ್ಟವರು ಎನ್. ಲಕ್ಷ್ಮೀ ನಾರಾಯಣ.
ಹಾಗಿದ್ದರೆ ನಾಂದಿಯ ವಿಶೇಷತೆ ಏನು..?
ಚಿತ್ರದಲ್ಲಿ ಮೂರು ಭಾಗವಿದೆ. ಮೊದಲ ಪತ್ನಿ ನಿರ್ಮಲಾ ಜೊತೆ ಮೂರ್ತಿಯ ಬದುಕು, ವಿದುರನಾಗಿ ಮೂರ್ತಿ ಮಗು ಸಾಕಲು ಪಡುವ ಪಾಡು ಹಾಗೂ ಎರಡನೇ ಪತ್ನಿ ಗಂಗಾ ಜೊತೆಗೆ ಆತನ ಬಾಳು. ಮೊದಲ ಭಾಗದಲ್ಲಿ ನವದಾಂಪತ್ಯದ ಸುಂದರ ಕ್ಷಣಗಳಿವೆ. ಜೊತೆಗೆ ಹಳ್ಳಿಗಾಡಿನ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರಲ್ಲಿ ಬದಲಾವಣೆ ತರುವ ಮೂರ್ತಿಯ ಆದರ್ಶ. ಸ್ವಾತಂತ್ರ್ಯೋತ್ತರ ಭಾರತದ ಹೆಚ್ಚಿನ ಆದರ್ಶವಾದಿಗಳ ರೀತಿಯಲ್ಲಿಯೇ ಮೂರ್ತಿ ತನ್ನ ಆದರ್ಶದ ಮೂಲಕ ರಾಷ್ಟ್ರ ಪುನರ್‌ನಿರ್ಮಾಣಕ್ಕೆ ನೆರವಾಗುತ್ತಿದ್ದೇನೆ ಎಂದು ನಂಬಿರುತ್ತಾನೆ. ಎರಡನೇ ಹಂತದಲ್ಲಿ ಬದುಕಿನ ದುರಂತವಿದ್ದರೆ ಅಂತ್ಯದಲ್ಲಿ ಗಂಗಾ ಜೊತೆಗಿನ ಜೀವನ ಮತ್ತು ಮೂಗ ಮತ್ತು ಕಿವುಡ ಮಕ್ಕಳ ಶಾಲೆಯ ಮೂಲಕ ಆತ ನಡೆಸುವ ಸಾಮಾಜಿಕ ಕಾರ್ಯಗಳನ್ನು ಚಿತ್ರ ಬಿಂಬಿಸುತ್ತದೆ.
ವ್ಯಕ್ತಿಯೊಬ್ಬ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತನ್ನ ವೈಯಕ್ತಿಕ ಸಮಸ್ಯೆಗಳನ್ನು ಜಯಿಸುತ್ತಾನೆ ಎಂಬ ಬಗ್ಗೆ ನಾಂದಿ ಸಾಗುತ್ತದೆ. ಸಾಮಾಜಿಕ ಸಮಸ್ಯೆ ಆತನ ವೈಯಕ್ತಿಕ ಸಮಸ್ಯೆಯನ್ನು ಮೀರಿ ನಿಲ್ಲುತ್ತದೆ. ಆದರೆ ನಾನಿಲ್ಲಿ ನಾಂದಿ ಚಿತ್ರದ ಸಂದೇಶದ ಬಗ್ಗೆ ಹೆಚ್ಚು ಚರ್ಚಿಸುವುದಿಲ್ಲ. ನನಗೆ ಆಸಕ್ತಿಯಾದ ವಿಚಾರವೆಂದರೆ ಅಂತರ್ಗತವಾದ ಸನ್ನಿವೇಶ ಸ್ವರೂಪದ ನಿರ್ದಿಷ್ಟ ಮಾದರಿಗಳು. ನನ್ನ ಪಾಲಿಗಂತೂ ಅವು ನಿಜವಾಗಿಯೂ ಸಂವಹನ ಮಾಡುವಂಥವು.
ಚಿತ್ರದ ಮೊದಲ ಮತ್ತು ಕೊನೆಯ ಭಾಗದ ಕಥಾಹಂದರದಲ್ಲಿ ಸಾಮ್ಯವಿದೆ. ಮಗು ಜನನವಾಗುವವರೆಗಿನ ನವದಾಂಪತ್ಯದ ದೃಶ್ಯಗಳಿವೆ. ಮೇಲ್ನೋಟಕ್ಕೆ ಚಿತ್ರದ ರಚನೆ ಒಂದು ವರ್ತುಲಾಕಾರದಲ್ಲಿದೆ, ನಾಂದಿಯ ಕಲಾತ್ಮಕತೆ ಇರುವುದೇ ಇಲ್ಲಿ. ಚಿತ್ರದುದ್ದಕ್ಕೂ ಹಲವು ಮೂಲಾಶಯದ ಪರಿಕಲ್ಪನೆಗಳನ್ನು (motif ಗಳನ್ನು) ಪರಿಚಯಿಸಲ್ಪಟ್ಟಿವೆ; ಮಾದರಿಗಳು (patterns) ಪುನರಾವರ್ತನೆಗೊಳ್ಳುತ್ತವೆ - ಶಾಟ್‌ಗಳಲ್ಲಾಗಲೀ, ಚಿತ್ರಕಥೆಯಲ್ಲಾಗಲೀ, ಅಥವಾ ಬೆಳಕು ಮತ್ತು ವಸ್ತುಗಳ ಬಳಕೆಯಾಗಲೀ, ಸಂಗೀತ ಮತ್ಯಾವುದೇ ಸೂಕ್ಷ್ಮ ವಸ್ತುಗಳ ಬಳಕೆಯಲ್ಲಿ ಇದು ಎದ್ದು ಕಾಣುತ್ತದೆ.
ಒಂದೊಂದಾಗಿ ವಿಶ್ಲೇಷಿಸುವುದಾದರೆ...
ಕರಿಹಲಗೆಯ ಮೇಲೆ ಪುಟಾಣಿ ವಿದ್ಯಾರ್ಥಿಯೊಬ್ಬ ಬೆಕ್ಕಿನ ಚಿತ್ರ ಬರೀತಾನೆ. ಮತ್ತೊಬ್ಬನದು ಚೇಷ್ಟೆ. ಕ್ಯಾಮರಾ ಮುಂದಿನ ಬೆಂಚಿನತ್ತ ಸರಿಯುತ್ತದೆ. ಕಿಲಾಡಿ ಹುಡುಗರು ಆಟವಾಡುತ್ತಿರುತ್ತಾರೆ. ಕ್ಯಾಮರಾ ಇನ್ನೂ ಸರಿಯುತ್ತದೆ. ತರಗತಿಯ ಹಿಂಭಾಗದಲ್ಲಿ ಕಿಟಕಿ ಪಕ್ಕ ಮಕ್ಕಳು ಫುಟ್‌ಬಾಲ್ ಜೊತೆ ಆಡುತ್ತಿದ್ದರೆ, ಕ್ಯಾಮರಾ ಟಿಲ್ಟ್ ಡೌನ್ ಆಗಿ ಕೆಳಕ್ಕೆ ಚಲಿಸುತ್ತಿರುವಂತೆಯೇ ಅಲ್ಲಿ ಕಿಲಾಡಿ ಮಕ್ಕಳು ಮತ್ತು ಮಗು ಡೆಸ್ಕ್ ಮೇಲೆ ನಿದ್ದೆ ಮಾಡುವುದು ಕಾಣಿಸುತ್ತದೆ. ಮತ್ತೆ ಮುಂದಿನ ಬೆಂಚ್ ಬಳಿ ಮಕ್ಕಳಾಟದತ್ತ ಕ್ಯಾಮರಾ ಸರಿಯುತ್ತದೆ. ಕೊನೆಗೆ ಕರಿಹಲಗೆ ಮೇಲೆ ಚಿತ್ರ ಬರೆಯುತ್ತಲೇ ಇರುವ ಪುಟಾಣಿ ಸೇರಿದಂತೆ ಒಂದು ಲಾಂಗ್ ಶಾಟ್. ಅಷ್ಟರಲ್ಲಿ ಮೇಷ್ಟ್ರು ಬಂದರೆಂದು ಯಾರೋ ಕಿರುಚುತ್ತಾರೆ. ಎಲ್ಲ ಮಕ್ಕಳು ಪುರ್ ಅಂತ ತಂತಮ್ಮ ಜಾಗಕ್ಕೆ.
ಇದು ನಾಂದಿ ಚಿತ್ರದ ಆರಂಭದ ಶಾಟ್. ಶಾಟಿನ ಆರಂಭ ಮತ್ತು ಅಂತ್ಯದ ಫ್ರೇಮ್ಗಳಲ್ಲಿ ಸಾಮ್ಯವಿದೆ – ಒಂದು ರೀತಿಯ ವರ್ತುಲಾಕಾರ. ಆದರೂ ಒಂದು ಸಣ್ಣ ವ್ಯತ್ಯಾಸವಿದೆ - ಕೊನೆಯ ಫ್ರೇಮ್‌ನಲ್ಲಿ ಪ್ರತಿಮೆಗಳ ಗಾತ್ರ ದೊಡ್ಡದಿವೆ. ಈ ಶಾಟ್‌ನ ವಿನ್ಯಾಸ ನಿರ್ದೇಶಕ ಚಿತ್ರದುದ್ದಕ್ಕೂ ವಿವಿಧ ವಿಧಾನಗಳಲ್ಲಿ ಬಳಸಿರುವ ಪುನರಾವರ್ತನೆಯ ಆಶಯಕ್ಕೆ ಪೂರಕ ಅಂತ ಅನಿಸುತ್ತದೆ.
ಇಂತಹ ಹಲವು ಉದಾಹರಣೆಗಳಿವೆ. ಮೂರ್ತಿ ಪಾಠ ಮಾಡುವಾಗ ಕೆಲ ಮಕ್ಕಳು ಕಣ್ಣಗಲಿಸಿ ಆತನ ಪಾಠ ಕೇಳುತ್ತವೆ. ಕ್ಯಾಮರಾ ನಿಧಾನಕ್ಕೆ ಇತರ ಮಕ್ಕಳತ್ತ ಚಲಿಸಿ ಕ್ಲಾಸಿನ ಇನ್ನೊಂದು ಮೂಲೆಗೆ ಚಲಿಸಿ ನಿಲ್ಲುತ್ತದೆ. ಅಲ್ಲಿಯೇ ಶಾಟ್ ನಿಲ್ಲುತ್ತದೆ ಎನ್ನುವಷ್ಟರಲ್ಲಿ ಕ್ಯಾಮರಾ ಮತ್ತೆ ಅದೇ ರೀತಿಯಲ್ಲಿ ವಾಪಸ್ ಕಣ್ಣಗಲಿಸಿ ಕುಳಿತ ಮಕ್ಕಳತ್ತಲೇ ಬರುತ್ತದೆ. ಕ್ಯಾಮರಾ ನಿಲ್ಲುತ್ತದೆ ಅನ್ನುವಷ್ಟರಲ್ಲಿ ದೃಶ್ಯ ತಕ್ಷಣವೇ ಬದಲಾಗುತ್ತದೆ.
ಮೂರ್ತಿ ಗಂಗಾ ಮನೆಗೆ ಬರುತ್ತಾನೆ. ಮಾವನ ಉಪಚಾರ. ಅವರು ಕುಳಿತುಕೊಳ್ಳುವ ವೇಳೆಗೆ ಕ್ಯಾಮರಾ ಟ್ರ್ಯಾಕ್ ಇನ್ ಆಗಿ ಬಳಿಗೆ ಸರಿದು ದೃಶ್ಯದಲ್ಲಿ ಬಿಂಬಗಳು ದೊಡ್ಡದಾಗಿ ಗೋಚರಿಸುತ್ತವೆ. ಗಂಗಾಳ ತಂದೆ ಕ್ಯಾಮರಾದ ಬಳಿಗೇ ನಡೆದು ಬರುತ್ತಾರೆ. ಕ್ಯಾಮರಾ ಹಿನ್ನೆಲೆಯಲ್ಲಿದ್ದ ಮೂರ್ತಿಯನ್ನು ಬಿಟ್ಟು, ಎದುರು, ಗಂಗಾಳನ್ನು ಫ್ರೇಮ್‌ನೊಳಗೆ ತೆಗೆದುಕೊಳ್ಳುತ್ತದೆ. ಒಂದು ಸಣ್ಣ ಸಂವಹನದ ನಂತರ ಗಂಗಾ ಫ್ರೇಮ್‌ನಿಂದಾಚೆ ಹೋದರೆ ಆಕೆಯ ತಂದೆ ಬಂದು ಮತ್ತೆ ಮೂರ್ತಿ ಜೊತೆ ಕುಳಿತುಕೊಳ್ಳುತ್ತಾರೆ. ಹೀಗೆ ಚಲಿಸುವ ಕ್ಯಾಮರಾ ಮತ್ತೆ ಮುಂಚಿನ ಫ್ರೇಮ್‌ಗೇ ಬಂದು ನಿಲ್ಲುತ್ತದೆ. ಮತ್ತೆ ಮತ್ತೆ ಇಣುಕುವ ಆಶಯ...
ಇಂತಹ ಪುನರಾವರ್ತಿತ ಆಶಯಗಳು ಚಿತ್ರದ ತುಂಬಾ ಅಲ್ಲಲ್ಲಿ ಗೋಚರಿಸುತ್ತದೆ. ಶಾಟ್‌ಗಳನ್ನು ತೆಗೆಯುವಾಗ ಮಾತ್ರವಲ್ಲ ಇತರ ವಿಚಾರಗಳಲ್ಲಿಯೂ ಇದು ಸ್ಪಷ್ಟವಾಗಿದೆ. ಕ್ಯಾಮರಾ ಬೆಳಕಿನ ಜೊತೆಗೂ ಆಟವಾಡುತ್ತದೆ. ಚಿತ್ರದ ಹಲವು ಶಾಟ್‌ಗಳಿಗೆ ಬೆಳಕೇ ಆಧಾರ. ಒಂದು ಸಾಮಾನ್ಯ ಬಲ್ಬ್‌ನ ಪ್ರಸ್ತುತಿಯಲ್ಲೂ ವಿನ್ಯಾಸ. ಕೆಲವೊಮ್ಮೆ ಸ್ವಿಚ್ ಆಫ್ ಆಗಿ, ಮತ್ತೆ ಕೆಲವೊಮ್ಮೆ ಸ್ವಿಚ್ ಆನ್ ಆಗುವ ಮೂಲಕ ಬೆಳಕು ಪ್ರಾಶಸ್ತ್ಯ ಪಡೆಯುತ್ತದೆ. ಉದಾ: ಮಗು ಅಳುವ ಶಬ್ದ ಕೇಳಿ, ಬೆಳಕಿದ್ದ ಚಾವಡಿಯಲ್ಲಿ ಕುಳಿತುಕೊಂಡಿದ್ದ ಮೂರ್ತಿ ಕ್ಯಾಮರಾದ ಬಳಿ ಬರುತ್ತಾನೆ. ಅದೊಂದು ಕತ್ತಲಿನ ಕೋಣೆಗೆ. ಅಲ್ಲಿ ಸ್ವಿಚ್ ಆನ್ ಮಾಡುತ್ತಲೇ ಬೆಳಕಿನಲ್ಲಿ ಮಗುವಿನ ತೊಟ್ಟಿಲು ಕಾಣಿಸುತ್ತದೆ. ಮಗುವನ್ನು ಸಮಾಧಾನ ಮಾಡಿ ಪತ್ನಿ ಗಂಗಾಳನ್ನು ಹುಡುಕುತ್ತಾನೆ. ಬೆಳಕಿದ್ದ ಚವಡಿಯನ್ನು ದಾಟಿಕೊಂಡು, ಅಡುಗೆ ಮನೆಯ ಕತ್ತಲಿನಲ್ಲಿ ನಡೆದು ಲೈಟ್ ಹಾಕಿದಾಗ ಅಲ್ಲಿ ಕೆಲಸ ಮಾಡಿ ದಣಿದ ಗಂಗಾ ಮಲಗಿದ್ದನ್ನು ಕಾಣುತ್ತಾನೆ. ಕೆಲವು ಶಾಟ್‌ಗಳ ನಂತರ ಕತ್ತಲಿನ ಹಿನ್ನೆಲೆಯಲ್ಲಿ ಮೂರ್ತಿ ಮತ್ತು ಗಂಗಾ ಇಬ್ಬರು ನಿದ್ದೆ ಮಾಡುತ್ತಿರುವುದು ಕಾಣಿಸುತ್ತದೆ. ಮತ್ತೆ ಮಗುವಿನ ಅಳು ಕೇಳಿ ಮೂರ್ತಿ ಪತ್ನಿಯನ್ನು ಎಬ್ಬಿಸುತ್ತಾನೆ. ಇದೀಗ ಎದ್ದು ಹಿನ್ನೆಲೆಗೆ ಹೋಗಿ ಲೈಟ್ ಹಾಕಿ ಮಗುವನ್ನು ಗೋಚರಿಸಿ ಅದನ್ನು ರಮಿಸುವ ಕೆಲಸವನ್ನು ಗಂಗಾ ಮಾಡುತ್ತಾಳೆ.
ಪಾತ್ರಗಳು ಮಾಡುವ ಪ್ರಕ್ರಿಯೆಗಳಲ್ಲೂ ಕೆಲ ಪುನರಾವರ್ತಿತ ಆಶಯಗಳು ಕಾಣ ಸಿಗುತ್ತವೆ. ಮೂರ್ತಿ ಪ್ರತಿ ಸಾರಿ ಶಾಲೆಗೆ ಹೊರಡುವಾಗ ಕೋಟ್ ಹಾಕ್ಕೋತಾನೆ, ಮನೆಗೆ ಬಂದು ಕೋಟ್ ತೆಗೆದಿಡುತ್ತಾನೆ. ನಿರ್ಮಲಾ ಇದ್ದಾಗ ಈ ಕೆಲಸವನ್ನು ಆಕೆಯೇ ಮಾಡುತ್ತಿದ್ದಳು. ನಂತರ, ಅಂದರೆ ನಿರ್ಮಲ ತೀರಿ ಹೋದ ಮೇಲೆ, ಮೂರ್ತಿ ತನ್ನ ಪಾಡಿಗೆ ತಾನು ಕೋಟ್ ಹಾಕ್ಕೋತಾನೆ. ಕೆಲ ದಿನಗಳ ಬಳಿಕ ಗಂಗಾ ಆ ಕೆಲಸ ಮಾಡುತ್ತಾಳೆ. ಮಗು ತೀರಿಕೊಂಡ ಬೇಸರ ದಿನಗಳಲ್ಲಿ ಗಂಗಾ ಅದರತ್ತ ಗಮನ ಕೊಡುವುದೇ ಇಲ್ಲ. ಮೂರ್ತಿ ಮತ್ತೆ ತನ್ನ ಪಾಡಿಗೆ ತಾನು ಕೋಟ್ ಹಾಕಿಕೊಳ್ಳ ತೊಡಗುತ್ತಾನೆ. ಈ ಎಲ್ಲ ಪ್ರಕ್ರಿಯೆಗಳೂ ಸಹಜವಾಗಿಯೇ ನಡೆದು, ನಾಟಕೀಯತೆಯ ಸೋಂಕು ಕೊಂಚವೂ ಕಾಣಿಸುವುದಿಲ್ಲ.
ಆರಂಭದಲ್ಲಿ ಮೂರ್ತಿ ಸಾಂಪ್ರದಾಯಿಕ ಮೈಸೂರು ಪೇಟಾ ಧರಿಸುತ್ತಾನೆ. ಆದರೆ ನಿರ್ಮಲಾ, ಕಪ್ಪು ಗಾಂಧಿ ಟೋಪಿ ಹಾಕ್ಕೊಳುವಂತೆ ಹೇಳಿದಾಗ ಖುಷಿಯಿಂದ ಮೂರ್ತಿ ಟೋಪಿಯೊಳಗೆ ತೂರಿಕೊಳ್ಳುತ್ತಾನೆ. ಚಿತ್ರದ ಕೊನೆಯ ಭಾಗದಲ್ಲಿ ಗಂಗಾ ಮತ್ತೆ ಪೇಟಾ ಹಾಕ್ಕೊಳುವಂತೆ ಹೇಳಿದರೆ ಮೂರ್ತಿ ನಕ್ಕು ಕರಿ ಕ್ಯಾಪ್ ನನಗಿಷ್ಟ, ಹಳೇ ಫ್ಯಾಶನ್ ಪೇಟಾ ಬೇಡ ಅಂತ ನಿರಾಕರಿಸುತ್ತಾನೆ. ನಂತರ ಶಾಲೆಯಲ್ಲಿ ಕಿಲಾಡಿ ಮಕ್ಕಳು ಸೋಂಬೇರಿ ಸೀತಾಪತಿಯ ಪೇಟದೊಂದಿಗೆ ಆಟವಾಡುತ್ತಿರುತ್ತಾರೆ.
ಪುಟ್ಟ ಪುಟ್ಟ ವಸ್ತುಗಳನ್ನೂ ವಿವಿಧ ಸನ್ನಿವೇಶಗಳಲ್ಲಿ ವಿಭಿನ್ನವಾಗಿ ಬಳಸಿಕೊಳ್ಳಲಾಗಿದೆ. ಉದಾಹರಣೆಗೆ ಮೂರ್ತಿ ಮನೆಯಲ್ಲಿ ಮೂರು ಕಾಲಿನ ಕುರ್ಚಿಯೊಂದಿದೆ. ಅದರಲ್ಲಿ ಪಾಂಗಿತವಾಗಿ ಕೂರುವುದು ಹೇಗೆ ಅನ್ನೋದು ಮೂರ್ತಿಗೆ ಮಾತ್ರ ಗೊತ್ತು. ಅತಿಥಿಗಳು ಬಂದಾಗ ಅವರು ಆ ಕುರ್ಚಿಯಲ್ಲಿ ಕೂರದಂತೆ ನೋಡಿಕೊಳ್ಳುತ್ತಾನೆ. ಮುಂದೆ ಚಿತ್ರದಲ್ಲಿ ಮೂರ್ತಿಗೆ ನಂಟಸ್ಥಿಕೆ ತೆಗೆದುಕೊಂಡು ಬಂದ ಒಬ್ಬರು ಆ ಖುರ್ಚಿಯಲ್ಲಿ ಕೂತು ಎಡವುತ್ತಾರೆ. ಆದರೆ ಅಷ್ಟರಲ್ಲೇ ಅದರಲ್ಲಿ ಕೂರುವ ಚಳಕ ಅರಿತ ಮೂರ್ತಿಯ ಸಹೋದ್ಯೋಗಿ ಸ್ನೇಹಿತ ಮೂರ್ತಿಯ ಸಹಾಯಕ್ಕೆ ಬರುತ್ತಾನೆ. ಅದೇ ರೀತಿ ನಿರ್ಮಲಾಳಿಗೆ ಪ್ರಿಯವಾದ ತಾನ್ಪುರ ಕೂಡ. ಚಿತ್ರದ ಆರಂಭದಲ್ಲಿ ಆಕೆ ಮೂರ್ತಿಗಾಗಿ ಹಾಡಿದ್ದಳು. ಆದರೆ ಕೊನೆಗೆ ಗಂಗಾ ಅದನ್ನೊರೆಸುವಾಗ ಹೊರಡುವ ಕಂಪನದಿಂದ ರೋಮಾಂಚಿತಳಾಗುತ್ತಾಳೆ.
ಸಂಗೀತಕ್ಕೂ ಮೂರ್ತಿ ಕುಟಂಬಕ್ಕೂ ಇರುವ ಸಂಬಂಧ ಕೂಡ ಪುನರಾವರ್ತನೆಯಾಗುತ್ತದೆ. ನಿರ್ಮಲ ಹಾಗೂ ಮೂರ್ತಿ ಪಕ್ಕದ ಮನೆಯ ವಾಚಾಳಿ ಹುಡುಗ ಪ್ರಾಣೇಶನ ಸಂಗೀತ ಕೇಳಿ ಖುಷಿ ಪಟ್ಟಿದಿದೆ. ಚಿತ್ರದ ನಡು ಭಾಗದಲ್ಲಿ, ನಿರ್ಮಲ ಸತ್ತ ಮೇಲೆ, ಮಗುವುಗೆ ನಿದ್ದೆ ಮಾಡಿಸಲು ಮೂರ್ತಿ ಪ್ರಯತ್ನಿಸುತ್ತಿದ್ದರೇ ಪ್ರಾಣೇಶನ ಸಂಗೀತ ಪುಟಾಣಿ ನಿದ್ದೆಗೆ ಅಡಚಣೆಯಾಗುತ್ತದೆ. ಚಿತ್ರದ ಶುರುವುನಲ್ಲಿ ಹೊಟ್ಟೆಯಲ್ಲಿರುವ ಮಗು ಕೂಡ ಪ್ರಾಣೇಶನ ತರವೇ ಸಂಗೀತಗಾರನಾಗುತ್ತದೇನೋ ಎಂಬುದು ನಿರ್ಮಲಳ ಆತಂಕ. ಆಕೆಗೆ ಮಗು ಡಾಕ್ಟರ್ ಆಗಬೇಕೆಂಬ ಆಸೆ. ನಂತರ ಗಂಗಾ ಗರ್ಭಿಣಿಯಾದಾಗ ಮಗು ಸಂಗೀತಗಾರನಾಗಲಿ ಎಂಬ ಆಸೆಯಿಂದ ಮಗುವಿಗಾಗಿ ಮೂರ್ತಿ ಹಾಡುತ್ತಾನೆ. ಆದರೆ ಗಂಗಾ ಹಾಡು ಕೇಳಲಾರಳು ಎನ್ನುವುದು ವಿಪರ‍್ಯಾಸ.
ಹೆಚ್ಚಿನ ಸನ್ನಿವೇಶಗಳನ್ನು ನಿರ್ದೇಶಕರು ಸರಳವಾದ ಸಿಂಗಲ್ ಶಾಟ್ ಗಳಲ್ಲೇ ಚಿತ್ರಿಕರಿಸಿದ್ದಾರೆ; ಆ ಸಿಂಗಲ್ ಶಾಟಿನಲ್ಲೇ ಅಲ್ಪ ಸ್ವಲ್ಪ ಕ್ಯಾಮರಾ ಚಲನೆ. ಕಟ್ ಗಳ ಬಳಕೆ ಇದ್ದರೂ ಮಿತವ್ಯಯ. ಹಲವಾರು ಕಡೆ ದೃಶ್ಯಗಳು ಮೊದಲು ಲಾಂಗ್ ಶಾಟ್, ನಂತರ ಮಿಡ್ ಶಾಟ್ ಹಾಗೂ ಕ್ಲೋಸಪ್ ಹಾಗೂ ಮತ್ತೆ ಲಾಂಗ್ ಶಾಟ್ ಗೆ ಬರುವ ಸಂಕಲನದ ಪರಿಯನ್ನು ಹೊಂದಿರುತ್ತವೆ. ಉದಾಹರಣೆ ಕೊಡುವುದಿದ್ದರೆ, ಇಬ್ಬರೂ ನಾಯಕಿಯರನ್ನು ಪರಿಚಯಿಸುವಾಗ, ಅಥವಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಪಾಠವಾಗುತ್ತಿರುವಾಗ.. ಹೀಗೆ. ಯಾವುದಾದರೂ ದೃಶ್ಯಕ್ಕೆ ಹೆಚ್ಚು ಒತ್ತುಕೊಡುವಾಗ ಅಥವಾ ಪಾತ್ರದ ಅಂತರ್ಮುಖಿ ಯೋಚನೆಗಳನ್ನು ಬಿಂಬಿಸುವಾಗ ಕೂಡ ಇದೇ ತಂತ್ರ ಬಳಸಲಾಗಿದೆ. ನಿರ್ಮಲಾ ಹಾಗೂ ಮೂರ್ತಿಯ ಕೊನೆಯ ಭೇಟಿ, ಮೂರ್ತಿ ಹೆಣ್ಣಿನ ಸಂಭಂದಿಕರಿಂದ ತಿರಸ್ಕರಿಸಲ್ಪಡುವ ಸಂದರ್ಭ, ಗಂಗಾಳಿಗೆ ತುಟಿಗಳ ಚಲನೆಯನ್ನು ಓದಲು ಹೇಳಿಕೊಡುವುದು, ಮೂಕ ಮತ್ತು ಕಿವುಡ ಮಕ್ಕಳ ಜೊತೆಗೆ ಗಂಗಾ ಸಮಯ ಕಳೆಯುವ ಸಂದರ್ಭಗಳ ಈ ಪರಿ ಹೊಂದಿರುವ ಶಾಟ್‌ಗಳು ಚಿತ್ರದುದ್ದಕ್ಕೂ ಇವೆ.
ನಾಟಕೀಯ ರೀತಿಯಲ್ಲಿ ವೇಗದ ಶಾಟ್‌ಗಳನ್ನು ಕಟ್ ಮಾಡುವ ಶೈಲಿಗಳನ್ನು ಎರಡು-ಮೂರು ಬಾರಿ ಮಾತ್ರ ಬಳಸಲಾಗಿದೆ. ಮೂಕಿ ಮತ್ತು ಕಿವುಡಿ ಹುಡುಗಿ ಗಂಗಾಳನ್ನು ಮದುವೆಯಾಗಲು ಮೂರ್ತಿ ನಿರ್ಧರಿಸುವಾಗ, ಬೆಂಕಿ ಅಕಸ್ಮಿಕದಲ್ಲಿ ಮಗು ತೀರಿಕೊಳ್ಳುವಾಗ ಮತ್ತು ಕೊನೆಗೆ ಗಂಗಾ ಹೆರಿಗೆಯಲ್ಲಿ ಹಳೆಯದನ್ನು ನೆನೆಸಿಕೊಂಡು ಮೂರ್ತಿ ಕಳವಳ ಪಡುವ ಕ್ಲೈಮ್ಯಾಕ್ಸ್ ಸಂದರ್ಭದಲ್ಲಿ ಇಂತಹ ಶೈಲಿಯ ಶಾಟ್‌ಗಳನ್ನು ಕಾಣಬಹುದು. ತಿರುಗುವ ಫ್ಯಾನ್‌ನ ಕ್ಲೋಸಪ್, ಆಸ್ಪತ್ರೆಯ ಭಿತ್ತಿಪತ್ರಗಳು, ಬಿಗಿ ಮುಷ್ಠಿ ಮುಂತಾದವು ಇಲ್ಲಿ ಪ್ರಮುಖ ಪಾತ್ರ ವಹಿಸುವುದು ನಿಜ. ಹಾಡಿನ ದೃಶ್ಯಗಳಂತೂ ಮೈ ನವಿರೇಳಿಸುವಂತಿವೆ. ಕ್ಯಾಮರಾ ಮತ್ತು ಪಾತ್ರದ ಚಲನೆ, ಕಟ್ಟಿಂಗ್, ಬಿಂಬದ ಗಾತ್ರ- ಒಟ್ಟಿನಲ್ಲಿ ಸಿನಿಮಾದಲ್ಲಿರುವ ಇಡೀ ಸನ್ನಿವೇಶದ ಸ್ವರೂಪ ಇದ್ದಕ್ಕಿದ್ದಂತೆಯೇ ಒಂದು ವೈವಿಧ್ಯತೆ ಮೈಗೂಡಿಕೊಳ್ಳುತ್ತದೆ. ಎರಡು ಹಾಡುಗಳ ಹೊರತಾಗಿ
ಇತರ ಹಾಡುಗಳಿಗೆ ಈ ಹೊಂದಾಣಿಕೆ ಅತ್ಯಗತ್ಯ. ಯಾಕೆಂದರೆ ಅವುಗಳೆಲ್ಲವೂ ಮೂರ್ತಿಯ ಮನೆಯ ಸೀಮಿತ ಜಾಗದೊಳಗೇ ಚಿತ್ರೀಕರಣಗೊಂಡವು. ಅದೂ ಸ್ಟುಡಿಯೋ ಸೆಟ್‌ನೊಳಗೆ. ಶೈಕ್ಷಣಿಕ ಪ್ರವಾಸದ ಹಾಡನ್ನು ಮಾತ್ರ ನಂದಿ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಆದರೆ ಉಳಿದ ಹಾಡುಗಳಿಗೆ ಅಂತ ವಿಶಾಲ ಕ್ಯಾನ್‌ವಾಸ್ ಸಿಕ್ಕಿಲ್ಲ. ಆದ್ದರಿಂದ ಸನ್ನಿವೇಶದ ಸ್ವರೂಪಗಳಿಗೇ ಹೆಚ್ಚು ಒತ್ತುಕೊಟ್ಟು ಬಳಸದೇ ನಿರ್ದೇಶಕರಿಗೆ ಬೇರೆ ದಾರಿ ಇಲ್ಲ.
ಹಾಡಿನ ದೃಶ್ಯಗಳಿಗೆ ಆದಷ್ಟು ಸಹಜತೆ ತುಂಬುವ ಪ್ರಯತ್ನಗಳನ್ನು ನಾವು ನಾಂದಿ ಚಿತ್ರದಲ್ಲಿ ನೋಡಬಹುದು. ಹಾಡುಗಳನ್ನು ಕಥನಾಕ್ರಮಕ್ಕೆ ಸಹಜವಾಗಿ ಸೇರಿಸಿಕೊಳ್ಳುವ ಪ್ರಯತ್ನ - ಮೂರ್ತಿ ಮದುವೆಯ ನಂತರ ಪತ್ನಿಗೆ ಹಾಡುವಂತೆ ಪ್ರೋತ್ಸಾಹಿಸುವುದು, ಅಥವಾ ಸೀಮಂತದ ವೇಳೆ ನೆರೆಯವರಿಗೆ ಹಾಡುವಂತೆ ಹೇಳುವುದು, ಮಗುವನ್ನು ಸಂತೈಸುತ್ತಾ ಮಕ್ಕಳು ಹಾಡುವುದು. ಎಲ್ಲ ಹಾಡುಗಳಲ್ಲಿಯೂ ಬಳಸುವ ಸಂಗೀತ ವಾದ್ಯಗಳನ್ನು ಪಾತ್ರಗಳೂ ನುಡಿಸುತ್ತಿರುವುದೂ ಕಾಣಿಸುತ್ತದೆ. ಘಟಂನಂತೆ ಮಡಿಕೆ ಬಾರಿಸುವ ಮೂರ್ತಿ, ಸೀಮಂತ ಹಾಡುಗಾರರು ವೀಣೆ ಬಾರಿಸುವುದು, ಪ್ರವಾಸದಲ್ಲಿ ಮಕ್ಕಳು ಕಹಳೆ ಮತ್ತು ಡ್ರಮ್ಸ್ ಬಾರಿಸುತ್ತಾರೆ. ಯಾವ ಹಾಡಿನಲ್ಲಿ ವಾದ್ಯಗಳ ಬಾರಿಸುವಿಕೆ ತೋರಿಸಿಲ್ಲವೋ ಅಂತಹ ಹಾಡುಗಳಲ್ಲಿ ವಾದ್ಯ ಬಳಕೆಯೇ ಕಡಿಮೆ - ಮೂರ್ತಿ ಹುಟ್ಟಲಿರುವ ಮಗುವಿಗಾಗಿ ಮೆತ್ತಗೆ ಹಾಡು ಗುನುಗುತ್ತಾನೆ. ಈ ಹಾಡಿಗೆ ಅತೀ ಕಡಿಮೆ ವಾದ್ಯ ಬಳಸಲಾಗಿದೆ. ಹಾಡಿನ ದೃಶ್ಯವನ್ನು ಕ್ಯಾಮರಾದಲ್ಲಿ ಆದಷ್ಟು ಸಹಜ ಕ್ರಿಯೆಗಿಳಿಸುವ ನಿರ್ದೇಶಕನ ಪ್ರಯತ್ನವೇ ಅಲ್ವೇ.
ಸಹಜವೇ ಸೌಂದರ್ಯ
ನಟನೆಯಲ್ಲಿಯೂ ಒಂದು ರೀತಿಯ ಸಹಜತೆ ತರುವ ಯತ್ನ ಕಾಣಿಸುತ್ತದೆ. ತಮ್ಮ ಪಾತ್ರಗಳ ವೈಭವೀಕರಣಕ್ಕೆ ಯಾವ ನಟರೂ ಯತ್ನಿಸಿಲ್ಲ. ಅತೀಯಾದ ಭಾವನೆಗಳನ್ನು ಬಿಂಬಿಸುವ ಪ್ರಯತ್ನಕ್ಕೆ ನಿರ್ದೇಶಕರು ಬೆಲೆ ಕೊಟ್ಟಿಲ್ಲ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಪ್ರಾಣೇಶನ ಪಾತ್ರಧಾರಿ ವಾದಿರಾಜ್‌ರಂತಹ ನಟ ಇದಕ್ಕೆ ತಕ್ಕ ಉದಾಹರಣೆ. ಚಿಂತೆಯನ್ನು ವ್ಯಕ್ತಪಡಿಸಲು ತಲೆ ಮೇಲೆ ಕೈ ಇಡಬೇಕು ಅಂತ ನಂಬಿರುವ ನಟ ನಟಿಯರೂ ಚಿತ್ರದಲ್ಲಿ ನಟಿಸಿದ್ದಾರೆ, ಆದರೆ ಅವರು ಯಾರೂ ಅತಿಯಾದ ಮೆಲೊಡ್ರಮಾ ಅಥವಾ ವೈಭವೀಕರಣ ಮಾಡಿಲ್ಲ.
ಇದು ಮೂರ್ತಿ ಕುಟುಂಬದ ಕತೆ. ಆದರೆ ಸುತ್ತಲಿನ ಪಾತ್ರಗಳಿಗೂ ಪ್ರಾಧಾನ್ಯವಿದೆ. ನೆರೆಮನೆಯ ಹುಡುಗಿಯ ಮೂರ್ತಿ ಮಗುವಿನ ಮೇಲಿಟ್ಟಿರುವ ಮಮತೆ, ಪ್ರಾಣೇಶನ, ಸಸ್ಯ ಮತ್ತು ಸಂಗೀತ ಮೇಲಿನ ಪ್ರಯೋಗಗಳು, ಮಗುವಿಗೆ ಅಮ್ಮನೇ ಆಗಿಬಿಡುವ ಪಕ್ಕದ ಮನೆ ಆಂಟಿ, ಮೂರ್ತಿ ಸಹೋದ್ಯೋಗಿಯ ಒಡನಾಟ, ಆತನ ಬದುಕು, ಹೀಗೆ ನಮ್ಮ ಬದುಕಿನಲ್ಲಿ ಕಾಣುವ ಪುಟ್ಟ ಪುಟ್ಟ ಸನ್ನಿವೇಶಗಳೇ ಚಿತ್ರದ ನೈಜತೆಗೆ ಬಲ ನೀಡಿವೆ.
ಹೀಗೆ ಇನ್ನೂ ಹಲವಾರು ಮಾದರಿ ಮತ್ತು ಮೂಲಾಶಯದ ಪರಿಕಲ್ಪನೆಗಳನ್ನು ನಾವು ನಾಂದಿ ಚಿತ್ರದಲ್ಲಿ ಗುರುತಿಸಬಹುದು. ನನ್ನ ಪ್ರಕಾರ ಈ ವಿಚಾರಗಳ ತಳಹದಿಯ ಮೇಲೆಯೇ ಚಿತ್ರ ನಿಂತಿದೆ. ಸಂಗೀತದ ಶ್ರುತಿಯ ಮದರಿಗಳನ್ನು ಅನುಸರಿಸುವ ಹಾಡುಗಾರನಂತೆ ಈ ಮಾದರಿ ಕೂಡಾ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಸಂಗೀತದಲ್ಲಾದಂತೇಯೇ, ಇವುಗಳಿಗೆ ಸ್ವತಂತ್ರವಾಗಿ ತಮ್ಮದೇ ಆದ ಮಹತ್ವ ಅಥವಾ ಅರ್ಥಗಳಿಲ್ಲ - ಅವು ಬರೀ ಚಿತ್ರನಿರ್ದೇಶಕನ ಆಶಯಕ್ಕೆ ಪೂರಕವಾದ ಮಾದರಿಗಳು.
ಸಾಮಾನ್ಯವಾಗಿ ಚಿತ್ರ ನೋಡುವುದೆಂದರೆ ನಾವು ಚಿತ್ರದ ಕಥೆ, ಪಾತ್ರ, ಹಾಡು, ಸಂಭಾಷಣೆ, ಸಾಂಸ್ಕೃತಿಕ ಸಂಬಂಧಗಳು ಮತ್ತು ಸಾಮಾಜಿಕ ಸಂದೇಶಗಳನ್ನು ಗಮನಿಸುತ್ತೇವೆ. ಒಂದು ಚಿತ್ರವನ್ನು ಯಾವ ಸಿನಿಮೀಯ ಮಾದರಿ ಮತ್ತು ಆಶಯವನ್ನಿರಿಸಿಕೊಂಡು ನಿರ್ಮಿಸಲಾಗಿದೆಯೋ ಆ ದೃಷ್ಟಿಯಿಂದಲೂ ನೋಡುವುದು ಸಾಧ್ಯವೇ ? ಈ ದೃಷ್ಟಿಕೋನ ಕೂಡ ಚಿತ್ರವೀಕ್ಷಣೆಯ ಪ್ರಮುಖ ಅಂಶಗಳಲ್ಲಿ ಒಂದಾಗಬಹುದೇ ? ಆಗಬಹುದು ಎನ್ನುವುದು ನನ್ನ ನಂಬಿಕೆ.
ಮೂಲ ಇಂಗ್ಲೀಷ ಬರಹ: Upperstall
ಕನ್ನಡ ರೂಪಾಂತರ: ಕೊಡಿಬೆಟ್ಟು ರಾಜಲಕ್ಷ್ಮಿ
ಇಷ್ಟು ದಿನ ನಿಮ್ಮ ಈ ಬ್ಲಾಗಿಗೆ ಭೇಟಿ ಕೊಡದುದಕ್ಕೆ ನನ್ನ ಮೇಲೆ ನನಗೇ ಬೇಸರವಾಗುತ್ತಿದೆ ಸರ್...
ReplyDeleteಒಬ್ಬ ಸಾಮಾನ್ಯ ಪ್ರೇಕ್ಷಕ ಸಿನಿಮಾವನ್ನು ನೋಡುವ ರೀತಿಗೂ ನಿರ್ದೇಶಕನೊಬ್ಬ (ಅಥವಾ ಸಿನಿಮಾದ ತಾಂತ್ರಿಕತೆಯನ್ನು ಬಲ್ಲ ಜನ) ಸಿನಿಮಾ ನೋಡುವ ರೀತಿಗೂ ಎಷ್ಟೊಂದು ವ್ಯತ್ಯಾಸವಿರುತ್ತದೆ!!! ಈ ಸೂಕ್ಷ್ಮ ವೀಕ್ಷಣೆ ತುಂಬಾನೇ ಇಷ್ಟವಾಯ್ತು ಸರ್. ಹಾಗೆಯೇ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಸಹಜ ಅನುವಾದ ಸಹ.
ಬಂದು ಓದಿ ಸ್ಪಂದಿಸಿದ್ದಕ್ಕೆ ಥ್ಯಾಂಕ್ಸು. ನಿಜ, ಅನುವಾದ ಚೆನ್ನಾಗಿದೆ. ಇಲ್ಲಾಂದ್ರೆ, ರಾಜಲಕ್ಶ್ಮಿ ಅವರ ಭಾಷೆ ನನಗೆಲ್ಲಿ ಬರಬೇಕು?
ReplyDelete