Thursday, October 15, 2026

 

ಎರಡು ಶಿಬಿರಗಳು, ಒಂದು ಕನಸು.

ಚಿದಂಬರರಾವ್‌ ಜಂಬೆ ಹಾಗೂ ಗಂಗಾಧರ ಸ್ವಾಮಿ
A.I. ನಿಂದ edit ಮಾಡಿದ ಬಿಂಬ 

ಸುಮಾರು ೧೯೮೨ ಅಥವಾ ೧೯೮೩ ಇಸವಿ ಇರಬಹುದು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿ FTII ಗೆ ಸಿನಿಮಾ ಕಲಿಯಲು ಸೇರಬೇಕು ಎಂದು ನಾನು ಮನೆಯಲ್ಲಿ ಕೇಳಿಕೊಂಡೆ. ಅವರಿಗೆ ತಿಳಿಯದಂತೆ ನಾನು ಆ ಸಂಸ್ಥೆಯ prospectus ಅನ್ನು ಆಗಲೇ ಮನೆಗೆ ತರಿಸಿಕೊಂಡಿದ್ದೆ. ಆರೇಳು ತಿಂಗಳ ಹಿಂದೆಯಷ್ಟೇ, ಇಂಗ್ಲಿಷ್ ಪ್ರಾಧ್ಯಾಪಕರೂ ಕರಾವಳಿ ಕರ್ನಾಟಕದ ಹವ್ಯಾಸಿ ರಂಗದ ನಾಟಕದ ಅಗ್ರಣೀಯ ನಿರ್ದೇಶಕರೂ ಆದ ನನ್ನ ಗುರುಗಳಾದ ಬಿ.ಆರ್. ನಾಗೇಶ್ ಅವರಿಂದ, ನಾಟಕ ಹಾಗೂ ಸಿನಿಮಾ ಕಲೆಗಳನ್ನು ಕಲಿಸುವ ವಿದ್ಯಾಸಂಸ್ಥೆಗಳಿರುತ್ತವೆ ಎಂದು ತಿಳಿದು 'ಹೀಗೂ ಉಂಟೇ' ಎಂದು ಅಚ್ಚರಿಪಟ್ಟಿದ್ದೂ ಉಂಟು. ನಾಟಕ ಕಲಿಯಲು ನೀನಾಸಂಗೆ ಹೋಗಬೇಕೆಂದು ಮೊದಲು ಕೇಳಿಕೊಂಡೆ. ಮನೆಯಲ್ಲಿ ಬೇಡ ಅಂತ veto ಮಾಡಿದರು. FTII prospectus ಅನ್ನು ಬದಿಗಿಟ್ಟು 'ಮೊದಲು ಡಿಗ್ರಿ ಮುಗಿಸು' ಅಂತ ತಾಕೀತು ಮಾಡಲಾಯಿತು.

ಜೀವವೇ ಕಳೆದುಹೋಯಿತು ಅಂತ ಬೇಸರದಲ್ಲಿ emotional ಆಗಿ ಕೂತಿರುವಾಗ ಉದಯವಾಣಿಯ ಸುದ್ದಿ ತುಣುಕೊಂದು ಕಣ್ಣಿಗೆ ಬಿತ್ತು – ಸುಳ್ಯದ ಬಾಳಿಲ ಎಂಬ ಹಳ್ಳಿಯಲ್ಲಿ ನೀನಾಸಂ ಪ್ರಾಂಶುಪಾಲ ಹಾಗೂ NSD ಪದವೀಧರ ಚಿದಂಬರರಾವ್ ಜಂಬೆ ಎಂಬವರು ಮಕ್ಕಳ ನಾಟಕ ಶಿಬಿರ ನಡೆಸುತ್ತಾರೆ ಎಂದು. 'ಪುಣೆಗೆ ಹೋಗಲು ನಿರಾಕರಿಸಿದ್ದೀರಿ, ಇದಕ್ಕಾದರೂ ಬಿಡಿ' ಎಂದು ಬೇಡಿಕೊಂಡಾಗ, ಮನೆಯವರು ನಾಗೇಶರ ಸಲಹೆ ಕೇಳಿದರು. ನಾಗೇಶರಿಗೆ ಜಂಬೆಯವರ ಮೇಲೆ ಅಪಾರ ಅಭಿಮಾನ. ಜಂಬೆಯವರ Macbeth ನಾಟಕದಲ್ಲಿ ಮೂವರು witchಗಳ ರಂಗಚಲನವಲನಗಳನ್ನು ಸಂಯೋಜಿಸಿದ ಪರಿಯನ್ನು ಅವರು ನನಗೆ ಆಗಲೇ ಹೇಳಿದ್ದೇ ಹೇಳಿದ್ದು. ಮನೆಯವರಿಗೆ 'ಇವನು ಬಾಳಿಲಕ್ಕೆ ಹೋಗಲಿ, ತೊಂದರೆ ಇಲ್ಲ' ಅಂತ ಸಲಹೆ ನೀಡಿದರು.

ಚಿದಂಬರರಾವ್‌ ಜಂಬೆ

ಆದರೆ ಶಿಬಿರದ ಸಂಯೋಜಕರಾದ 'ವಿನ್ಯಾಸ' ತಂಡಕ್ಕೆ ನನ್ನ ವಿಷಯದಲ್ಲಿ ಒಂದೆರಡು ಸಮಸ್ಯೆಗಳಿದ್ದವು. ಅತ್ತ, ನನ್ನನ್ನು ಶಿಬಿರಕ್ಕೆ ಸೇರಿಸಿಕೊಳ್ಳಲು ನಾನು ಮಕ್ಕಳಿಗಿಂತ ದೊಡ್ಡವನಾಗಿದ್ದೆ; ಇತ್ತ, ಸೇರಿಸಿಕೊಳ್ಳದಿರಲು ನಾನು ಪೂರ್ಣವಾಗಿ ದೊಡ್ಡವನೂ ಆಗಿರಲಿಲ್ಲ. ತಂಡದ ಸಂಚಾಲಕರಾದ ಭಾಸ್ಕರ ಬಾಳಿಲ ಅವರು ಜಂಬೆಯವರ ಜೊತೆ ಏನು ಸಮನ್ವಯ ನಡೆಸಿದರೋ ಗೊತ್ತಿಲ್ಲ, 'ಬನ್ನಿ' ಅಂತ ಪತ್ರ ಬಂತು, ನಾನು ಬಸ್ ಹತ್ತಿ ಬಾಳಿಲಕ್ಕೆ ಹೊರಟೇಬಿಟ್ಟೆ. ಅಲ್ಲಿಯವರೆಗೆ ಮನೆಯಿಂದ ಒಬ್ಬನೇ ಹೊರಗೆ ಹೋಗಿ ಉಳಿದದ್ದು ಇದೇ ಮೊದಲು. ಪುಂಚಿತ್ತಾಯ ಅವರ ಮನೆಯಲ್ಲಿ ನನ್ನ ವಾಸ. ಶಿಬಿರಕ್ಕೆ ಒಂದೆರಡು ಕಿಲೋಮೀಟರ್ ನಡೆಯಬೇಕಿತ್ತು. ಧೈರ್ಯಕ್ಕೆಂದು ನನ್ನ ಜೊತೆ ಬರುತ್ತಿದ್ದವನು ನನಗಿಂತ ಕಿರಿಯನಾದ ಮಹೇಶ.

ಜಂಬೆಯವರ ಸಹಕಾರಕ್ಕೆ ಭಾರತಿಯವರಿದ್ದರು. ಜೊತೆಗೆ ಮಂಜೇಶ್ವರದ ಅಚ್ಯುತ್ ಎಂಬವರು. ಇಬ್ಬರೂ ಆಗ ತಾನೇ ನೀನಾಸಂನಲ್ಲಿ ಶಿಕ್ಷಣ ಮುಗಿಸಿದ ಹಾಗಿತ್ತು. ಜಂಬೆಯವರು ಶಿಬಿರದಲ್ಲಿ ಮಕ್ಕಳಿಂದ 'ನೀಲಿ ಕುದುರೆ' ಹಾಗೂ 'ಕಾಡಿಗೆ ಹೋದ ಕತ್ತೆ' ಎಂಬ ನಾಟಕಗಳನ್ನು ಆಡಿಸಿದ್ದರು. ನಾನು ಹೆಚ್ಚುಕಮ್ಮಿ ಶಿಬಿರದಲ್ಲಿ observer ಆಗಿ ಭಾಗವಹಿಸಿದ್ದರಿಂದ, ನನ್ನನ್ನು ನಟನನ್ನಾಗಿ ಮಾಡದೆ, 'ನಿನಗೆ ಜವಾಬ್ದಾರಿ ಹೆಚ್ಚು', ಅಂತ stage manager ನ ಪಟ್ಟ ಕಟ್ಟಿದರು. ಈ ಪದದ ಅರ್ಥವನ್ನು ಅವರು ಕ್ಲಾಸಿನಲ್ಲಿ ಬಿಡಿಸಿ ಹೇಳಿದ್ದರೂ, ಅದಕ್ಕೆ ಅಂಟಿಕೊಂಡಿರುವ ಜವಾಬ್ದಾರಿಗಳ ಪೂರ್ಣ ಪರಿಕಲ್ಪನೆ ನನಗಿಲ್ಲದಿದ್ದರೂ, ಹಣೆಗೆ ಏನೋ ಒಂದು ಕಿರೀಟ ಅಂಟಿಕೊಂಡಿತ್ತು. ವಿನ್ಯಾಸ ತಂಡದ ಸದಸ್ಯರೊಬ್ಬರಿಗೆ ಸೂಚ್ಯವಾಗಿ ಈ ಕೆಲಸದ ನಿಜವಾದ ಜವಾಬ್ದಾರಿಯನ್ನು ಕೊಡಲಾಯಿತು.

ಶಿಬಿರ ನಡೆಯುತ್ತಿದ್ದ ಶಾಲೆಯ ರಂಗಮಂಚ ಅಷ್ಟೂ ಮಕ್ಕಳಿಗೆ ಚಿಕ್ಕದಾಗಿದೆ ಎಂದು, stage ನ ಮುಂದೆ ಸರಿಸಮಾನವಾಗಿ ಒಂದಿಷ್ಟು ಬೆಂಚುಗಳನ್ನು ಇಟ್ಟು ಅದನ್ನು ವಿಸ್ತರಿಸಲಾಯಿತು. ಹಾಗೆ ಮಾಡುವುದು stage manager ನ ಕೆಲಸವಾಗಿತ್ತು. ಆದರೆ ಮರುದಿನ ಬೆಳಿಗ್ಗೆ ನಾನು ಶಿಬಿರಕ್ಕೆಂದು ಶಾಲೆಯ ಆವರಣಕ್ಕೆ ಬಂದಾಗ ಅದಾಗಲೇ ಬೆಂಚುಗಳನ್ನು neat ಆಗಿ ಸೇರಿಸಲಾಗಿತ್ತು; ಬಹುಶಃ ಅದು 'ವಿನ್ಯಾಸ' ತಂಡದ ಅಸಲಿ stage manager ನ ಕೆಲಸವಾಗಿತ್ತು. ಆದರೂ ಎಲ್ಲರೂ ನನ್ನನ್ನು ನೋಡಿ ಅಚ್ಚುಕಟ್ಟಾಗಿದೆ ಎಂದಾಗ ನಾನೂ ತುಟಿ ಪಿಟಿಕ್ ಅನ್ನಲಿಲ್ಲ.

ಜಂಬೆಯವರು ಬೆಂಚುಗಳು ಸರಿಯಾಗಿ ಕೂತಿವೆಯೋ ಇಲ್ಲವೋ ಅಂತ ನೋಡಲು ಅವುಗಳ ಮೇಲೆ ಜಿಗಿದಾಗ ಒಂದು ಬೆಂಚು ದಢ್ ಅಂತ ಸಡಿಲಗೊಂಡು ಬಿಟ್ಟುಕೊಟ್ಟಿತು. ಇಲ್ಲಿಯವರೆಗೆ ಶಿಬಿರದಲ್ಲಿ ತಮ್ಮ ಮೃದು ಸ್ವಭಾವವನ್ನು ತೋರಿಸುತ್ತಿದ್ದ ಜಂಬೆಯವರು, ಒಮ್ಮಿಂದೊಮ್ಮೆಲೇ ರೌದ್ರಾವತಾರ ತಾಳಿ, 'ಎಲ್ಲಿ, stage manager?' ಅಂತ ಜೋರಾಗಿ ಒದರಿದರು. 'ಇದು ಮಕ್ಕಳ safety ಪ್ರಶ್ನೆ. ನಿಮ್ಮ ಕೆಲಸದಲ್ಲಿ ಇವನ್ನೆಲ್ಲಾ ನೋಡಬೇಕು' ಅಂತ ಸಿಕ್ಕಾಪಟ್ಟೆ ರೊಚ್ಚಿಗೆದ್ದರು.

ಒಮ್ಮೆಲೇ ನಾನು ಎದ್ದು ಮುಂದೆ ಬಂದೆ – ನಾನೇ stage manager ತಾನೇ? ಜೊತೆಗೆ, stage manager ಗಳಾಗಿರದಿದ್ದರೂ ಅಚ್ಯುತ್ ಹಾಗೂ ಭಾರತಿಯವರೂ ಮುಂದೆ ಬಂದ ನೆನಪು. ನಮ್ಮೆಲ್ಲರನ್ನು ಮೀರಿಸಿ ವೇಗವಾಗಿ ಮುಂದೆ ಬಂದವರು, ವಿನ್ಯಾಸ ತಂಡದ ಅಸಲಿಗೆ stage manager ಆಗಿದ್ದವರು. ಅವರು ಜಂಬೆಯವರಿಗೆ, 'ಇಲ್ಲ ಸರ್, ಇವನು ಇದರಲ್ಲಿ involve ಆಗೇ ಇಲ್ಲ. ಎಲ್ಲರೂ ಹೋದ ಮೇಲೆ ನಿನ್ನೆ ಸಂಜೆ ಇದನ್ನು ನಾವೇ ನಿಂತು ಮಾಡಿಸಿದ್ದು' ಅಂತ ತಮ್ಮ ಜವಾಬ್ದಾರಿತನವನ್ನು ಸ್ಪಷ್ಟವಾಗಿ ಪ್ರದರ್ಶಿಸಿದರು.

ಪ್ರಾಯಶಃ ನನ್ನ ಗಾಬರಿಯ ಮುಖವನ್ನು ನೋಡಿ ಜಂಬೆಯವರು ಮತ್ತೆ ತಮ್ಮ ಮೃದು ಸ್ವರೂಪಕ್ಕೆ ಬಂದಿಳಿದರು. ವಾತಾವರಣ ತಣ್ಣಗಾದ ಮೇಲೆ ನನಗೆ ಒಬ್ಬ stage manager ನ ಜವಾಬ್ದಾರಿಗಳನ್ನು ಮತ್ತೆ ತಿಳಿಹೇಳಿದರು. ಅರ್ಥವಾಯಿತು ಎಂಬಂತೆ ತಲೆ ಅಲ್ಲಾಡಿಸಿದ ನೆನಪು. ಬಾಳಿಲದಲ್ಲಿ ನಾನು ವಾಸಿಸಿದ್ದ ಆ ೧೫–೨೦ ದಿನಗಳಲ್ಲಿ ನೆನಪು ಉಳಿದದ್ದು ಭಾಸ್ಕರ್ ಅವರ ಸ್ನೇಹ ಸ್ವಭಾವ, ಪುಂಚಿತ್ತಾಯ ಮನೆತನದ ಆತಿಥ್ಯ, ಹಾಗೂ ಚಿದಂಬರರಾವ್ ಜಂಬೆಯವರು ಕಲಿಸಿದ ಆ ಶಿಸ್ತಿನ ಪಾಠ: position ಜೊತೆ responsibility ಕೂಡ ಜೊತೆಜೊತೆಯಾಗಿಯೇ ಇರುತ್ತದೆ ಎಂದು.

ಮುಂದಿನ ಮೂರು ವರುಷಗಳಲ್ಲಿ ಬಿ.ಕಾಂ. ಪದವಿ ಶಿಕ್ಷಣ ಮುಗಿಸುತ್ತಾ ಬಂದಂತೆ ಮತ್ತೆ FTII ನ prospectus ಅನ್ನು ತರಿಸಿಕೊಂಡೆ – ಈ ಸಲ ಮನೆಯವರಿಗೆ ಹೇಳಿಯೇ. ಆದರೆ ಮತ್ತೆ ಅದೇ ಉತ್ತರ – 'ಸಿನಿಮಾ ರಂಗ ನಮ್ಮಂಥವರಿಗೆ ಹೇಳಿಸಿದ್ದಲ್ಲ'. ಚಿಕ್ಕಮ್ಮನ ಮಾವನ ಉದಾಹರಣೆ ನನಗೆ ಕೊಡಲಾಯಿತು – ಮೇರು ನಿರ್ದೇಶಕರಾದ ಆರೂರು ಪಟ್ಟಾಭಿಯವರು ರಾಜಕುಮಾರ್ ಅವರ ಜೊತೆ ಕೆಲಸ ಮಾಡಿದ್ದರು. ಆದರೂ ಅವರಲ್ಲಿ ಉದ್ಯೋಗ ಸ್ಥಿರತೆಯ ಕೆಲವು ಪ್ರಶ್ನೆಗಳಿದ್ದವು ಅಂತ.

ಪರಿವಾರದ ವಿವಿಧ ಕಡೆಗಳಿಂದ 'CA ಮಾಡು, ಬೇಕಾದರೆ law ಮಾಡು' ಎಂಬ ಸಲಹೆಗಳು ತೀವ್ರವಾಗಿ ಬರತೊಡಗಿದವು; ಬರುಬರುತ್ತಾ ಅವು ಒತ್ತಡಗಳಾಗದವು. ಜೀವನದಲ್ಲಿ ಸಿನಿಮಾ ಮಾಡುತ್ತೇನೋ ಇಲ್ಲವೋ ಎಂಬ ಸಂದೇಹಗಳಲ್ಲಿ ಸಿಲುಕಿಕೊಂಡಿದ್ದಾಗ, ಎದುರಾದದ್ದು ಉಡುಪಿಯ ಆನಂದ ಗಾಣಿಗರ ಮುಂದಾಳತ್ವದಲ್ಲಿ ಹವ್ಯಾಸಿ ನಾಟಕಗಳನ್ನು ಆಡಿಸುವ 'ರಂಗಭೂಮಿ' ಸಂಸ್ಥೆ ನಡೆಸಿಕೊಟ್ಟ ೨೦ ದಿನಗಳ ರಂಗ ಶಿಬಿರ, ಗಂಗಾಧರ ಸ್ವಾಮಿಯವರ ನೇತೃತ್ವದಲ್ಲಿ. ಮುಳುಗುತ್ತಿರುವವನಿಗೆ ಒಂದು ಹುಲ್ಲುಕಡ್ಡಿಯೇ ಸಾಕು ಎಂಬಂತಿತ್ತು ನನ್ನ ಪರಿಸ್ಥಿತಿ.

ಗಂಗಾಧರ ಸ್ವಾಮಿ
ಗಂಗಾಧರ ಸ್ವಾಮಿಯವರು 'ಸಮುದಾಯ' ಸಂಸ್ಥೆಯ ಹಿನ್ನೆಲೆಯವರು. ಸಂಘಟನಾ ಕಾರ್ಯ ಹಾಗೂ ಬೀದಿ ನಾಟಕ ಕ್ಷೇತ್ರದಲ್ಲಿ ಪಳಗಿದವರಾಗಿದ್ದರು. ಶಿಬಿರದಲ್ಲಿ ನಟನಾ ಶಿಕ್ಷಣಕ್ಕೆ ಬೇಕಿದ್ದ ತಾಲೀಮುಗಳ ಬಗ್ಗೆ ಹಾಗೂ ಸಾಮಾನ್ಯವಾಗಿ ಶಿಬಿರಾರ್ಥಿಗಳ ಸಾಮೂಹಿಕ ಚೈತನ್ಯದ ಬೆಳವಣಿಗೆಗೆ ಒತ್ತು ನೀಡಲಾಯಿತು. ಶಿಬಿರದ ಕೊನೆಯಲ್ಲಿ ಒಂದು ಪೂರ್ಣ ಪ್ರಮಾಣದ ನಾಟಕದ ಪ್ರದರ್ಶನ ನಡೆಯದಿದ್ದರೂ, 'ಪುಣ್ಯಕೋಟಿ'ಯ ಜನಪದ ಪದ್ಯದ ನಾಟಕೀಯ ರೂಪಾಂತರವನ್ನು ಯಾವುದೇ lighting ಹಾಗೂ setting ಗಳಿಲ್ಲದೆ ಪ್ರದರ್ಶಿಸಿದೆವು. ನಟನ ದೇಹ ಹಾಗೂ ಧ್ವನಿಗಳ ಬಳಕೆಯಿಂದಲೇ ಸಂವಹನ.

ಪದ್ಯದಲ್ಲಿ ತಾಯಿ ಗೋವು ತಾನು ಕೊಟ್ಟ ಮಾತಿಗೆ ತಪ್ಪದೆ ತನ್ನ ಮಗುವಿಗೆ ಹಾಲುಣಿಸಿ, ಮುದ್ದಿಸಿ ಮಲಗಿಸಿ, ಮತ್ತೆ ದುಷ್ಟ ಹುಲಿಯ ಆಹಾರವಾಗಲು ಹೊರಡುತ್ತದೆ. ಗೋವಿನ ನಿಷ್ಠೆಯನ್ನು ನೋಡಿ ಹುಲಿಯ ಮನ ಕರಗಿ, ತಾನೇ ಪಶ್ಚಾತ್ತಾಪದಿಂದ ಬೆಟ್ಟದಿಂದ ಹಾರಿ ಪ್ರಾಣತ್ಯಾಗ ಮಾಡುತ್ತದೆ. ಆದರೆ ಗಂಗಾಧರ ಸ್ವಾಮಿ submissive ಆಗಿ, ಯಾರಾದರೂ ಯಾಕೆ ತಮ್ಮನ್ನು ತಾವೇ ಬಲಿ ಕೊಡಬೇಕು ಎಂದು ಪ್ರಶ್ನಿಸಿದರು. ನಮ್ಮ ಪ್ರದರ್ಶನದಲ್ಲಿ ಗೋವುಗಳೆಲ್ಲವೂ ಒಗ್ಗಟ್ಟಿನಿಂದ ಸೇರಿ ಹುಲಿಯನ್ನು ಬೆಟ್ಟದ ಕೆಳಗೆ ನೂಕಿಬಿಡುತ್ತವೆ. ಈ ಪುಟ್ಟ improvisation ಪದ್ಯದ ಆಶಯವನ್ನೇ ಬದಲಿಸಿಬಿಟ್ಟಿತು – ಹೇರಿದ ಯಾತನೆಯನ್ನು ಒಗ್ಗಟ್ಟಿನಿಂದ ಎದುರಿಸುವುದರಲ್ಲೇ ಘನತೆಯಿದೆ.

ಹೀಗೆ status quo ವನ್ನು ಪ್ರಶ್ನಿಸುವ ಸೃಜನಾತ್ಮಕ ಸಾಧ್ಯತೆಗಳನ್ನು ನಾನು ಕಲಿತದ್ದು ಗಂಗಾಧರ ಸ್ವಾಮಿಯವರಿಂದ. ಅವರಿಗೆ ಬೀದಿ ನಾಟಕಗಳ ಹಿನ್ನೆಲೆ ಇದ್ದುದರಿಂದಲೋ ಏನೋ, ಪರೋಕ್ಷವಾಗಿ, ವಿರಳ ಸಾಧನಗಳ ನಡುವೆ ಸೃಜನಶೀಲ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಹುಡುಕುವುದೇ ಶಿಬಿರದ ಕೇಂದ್ರಬಿಂದುವಾಗಿಬಿಟ್ಟಿತ್ತು. ಜೊತೆಗೆ, ಹಿಡಿತಕ್ಕೆ ಸಿಗದ ಪರಿಸ್ಥಿತಿಗಳಿಂದಾದ ಹತಾಶೆಯನ್ನು ಮೀರಿ ನಿಲ್ಲುವ ಪರಿಯನ್ನು ಕೂಡ ಅವರು ತಮ್ಮ ಜೀವನದ ಒಂದು ಅನುಭವದ ಮೂಲಕವೇ ನಮಗೆ ಪರಿಚಯಿಸಿದರು.

ನನಗೆ ನೆನಪಿದ್ದ ಮಟ್ಟಿಗೆ ಆ ಘಟನೆಯನ್ನು ಅವರು ಹೀಗೆ ಹಂಚಿಕೊಂಡಿದ್ದರು – ಸ್ವಾಮಿಯವರು ಚಿಕ್ಕವರಿದ್ದಾಗ ಏನೋ ಒಂದು ಅಪಘಾತದಿಂದ ತಮ್ಮ ನಾಲಿಗೆಗೆ ಪೆಟ್ಟು ಬಿದ್ದು, ಕೆಲವು ಅಕ್ಷರಗಳನ್ನು ಅವರಿಗೆ ಸರಿಯಾಗಿ ಉಚ್ಚರಿಸಲು ಆಗುತ್ತಿರಲಿಲ್ಲ. ನಟ-ನಟಿಯರಿಗೆ ದೇಹ ಅಭಿವ್ಯಕ್ತಿಗೆ ಹೇಗೆ ಮುಖ್ಯವೋ ಹಾಗೆಯೇ ಅವರ ಧ್ವನಿ ಹಾಗೂ ಸ್ವರಗಳ ಉಚ್ಚಾರವೂ ಅಷ್ಟೇ ಮುಖ್ಯ. ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ತೀವ್ರ ಹಂಬಲ ಅವರನ್ನು ಎಡೆಬಿಡದೆ ನಾಲಿಗೆಗೆ ಬೇಕಿದ್ದ exercise ಗಳನ್ನು ಮಾಡಿಸಿತು, ಉಚ್ಚಾರವನ್ನು ಪಳಗಿಸಿತ್ತು. ಬಿ,ವಿ. ಕಾರಂತರ ನಾಟಕಗಳಲ್ಲೂ ಅವರು ನಟನೆ ಮಾಡಿದ್ದರು ಅಂತ ಅವರು ಹೇಳಿದ ನೆನಪು.

ಈ ನಲವತ್ತು ವರುಷಗಳಲ್ಲಿ FTII ಸೇರಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಇಷ್ಟು ವರುಷಗಳಲ್ಲಿ ಈ ಇಬ್ಬರು ಮಹಾನಿಯರನ್ನು ನಾನು ಆಗೊಮ್ಮೆ-ಈಗೊಮ್ಮೆ ಭೇಟಿ ಮಾಡಿದರೂ, ಅವರ ಜೊತೆ ಹತ್ತಿರದ ಒಡನಾಟ ಇದ್ದದ್ದು ಕೇವಲ ಅಂದಿನ ೨೦–೩೦ ದಿನಗಳದ್ದು. ಆದರೆ ಆ formative ಆದ ಅವಧಿಯಲ್ಲಿ ದೊರೆತ ಒಂದೆರಡು ಮೂಲ ಕಲಿಕೆಗಳು ಶಾಶ್ವತವಾಗಿ ಉಳಿದು ಬೇರೂರಿ ಬಿಟ್ಟಿವೆ. ಕಾಕತಾಳೀಯ ಎಂಬಂತೆ ಇತ್ತೀಚೆಗೆ ಈ ಇಬ್ಬರೂ ಗುರುಗಳು ಒಂದೆರಡು ತಿಂಗಳ ಅಂತರದಲ್ಲಿ ಅಸುನೀಗಿದ್ದಾರೆ. ಇಬ್ಬರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು.

Wednesday, June 24, 2026

ಚಲನಚಿತ್ರಗಳ ರಾಜಕೀಯ ನೆರಳುಗಳು - 06

 

Dancing Shiva - Badami Caves..

ಭರತಖಂಡ – ನಾಟ್ಯಶಾಸ್ತ್ರ

ನಾಟಕೀಯ ನಿರೂಪಣೆ (Dramatic Narrative) ಮತ್ತು Classical Decoupage (ಕ್ಲಾಸಿಕಲ್‌ ಡೆಕ್ಯುಪಾಜ್‌) ಜಾಗತಿಕ ಸಿನಿಮಾರಂಗದಲ್ಲಿ ಪ್ರಬಲ ಮೆಟಾ-ನೆರೇಟಿವ್‌ಗಳಾಗಿವೆ. ಆದರೆ ನಾವು ಭಾರತ ದೇಶದ ಚಲನಚಿತ್ರಗಳಿಗೆ ನಮ್ಮನ್ನು ಸೀಮಿತಗೊಳಿಸಿದರೆ, ನಾಟ್ಯಶಾಸ್ತ್ರ ಆಧರಿತ ನಿರೂಪಣಾ ಶೈಲಿಗಳೇ ಪ್ರಬಲವಾಗಿವೆ.

ನಮ್ಮ ಸಿನಿಮಾಗಳು ಜಗತ್ತಿನ ಹೆಚ್ಚಿನ ಸಿನಿಮಾಗಳಂತೆ ಹಾಲಿವುಡ್‌ ಜನಪ್ರಿಯಗೊಳಿಸಿದ Classical Decoupage ವಿಧಾನವನ್ನೇ ತಮ್ಮದಾಗಿಸಿಕೊಂಡಿವೆ. ಆದರೆ ನಿರೂಪಣಾ ಶೈಲಿಯಲ್ಲಿ “ಕ್ರಿಯೆಯ ಏಕತೆ” (Unity of Action) ಕಂಡುಬಂದರೂ, ಈ ಏಕತೆಯನ್ನು ಭಂಗಗೊಳಿಸುವಂತಹ ಅನೇಕ ಘಟನೆಗಳು ನಮ್ಮ ಸಿನಿಮಾಗಳಲ್ಲಿ ನಡೆಯುತ್ತಲೇ ಇರುತ್ತವೆ.

ಉದಾಹರಣೆಗಳು:

·  ಮುಖ್ಯ ಕಥೆಗೆ ಭಿನ್ನವಾಗಿ ನಿಲ್ಲುವ ನಾಟ್ಯಶಾಸ್ತ್ರದ ವಿದೂಷಕ ಪಾತ್ರ ಆಧರಿತ ಕಾಮಿಡಿ ಟ್ರ್ಯಾಕ್‌ಗಳು (Comedy Tracks).

·     ಕೈಶಿಕಿ ವೃತ್ತಿ ಆಧರಿತ ಶೃಂಗಾರ ಪ್ರಧಾನ ಸಂಗೀತ–ನೃತ್ಯಗಳಿಂದ ಕೂಡಿದ ಲಾಸ್ಯ ಶೈಲಿಯ ಬಳಕೆ, ಮತ್ತು ಅದರ ಒರಟು ರೂಪವಾದ ಐಟಂ ನಂಬರ್‌ಗಳು (Item Numbers).

·    “ನಾಟ್ಯದಲ್ಲಿ ಎಲ್ಲವೂ ಇರುತ್ತದೆ” ಎಂಬ ನಾಟ್ಯಶಾಸ್ತ್ರದ ಸೂಕ್ತಿಯಂತೆ, ಒಂದೇ ಸಿನಿಮಾದಲ್ಲಿ ಹಲವಾರು ರಸಗಳ ಸೂಕ್ತ ಮಿಶ್ರಣ.

ಇವು, ನಮ್ಮ ಸಿನಿಮಾಗಳಲ್ಲಿ ಕೇಂದ್ರಾಪಗಾಮಿ (Centrifugal) ಪ್ರವೃತ್ತಿಯನ್ನು ಸೂಚಿಸುತ್ತವೆ. ಜಾಗತಿಕ ಸಿನಿಮಾದ ಪ್ರಮುಖ ಪ್ರವೃತ್ತಿ ಹೆಚ್ಚಾಗಿ ಕೇಂದ್ರಾಭಿಮುಖ (Centripetal) ಆಗಿರುವುದರಿಂದ, ಹೋಲಿಕೆಯಲ್ಲಿ ನಮ್ಮ ಈ ಪರಂಪರೆ ವಿಶ್ವ ಮಟ್ಟದಲ್ಲಿ ಒಂದು Micro Narrative (ಲಘು ನಿರೂಪಣೆ) ಆಗಿ ಕಾಣಿಸುತ್ತದೆ.

ನಾಟ್ಯಶಾಸ್ತ್ರದ ಸಂದರ್ಭ:

ಭಾರತೀಯ ಸಿನಿಮಾ ಪೂರ್ವನಿಯೋಜಿತವಾಗಿ (by default) ಬಳಸುತ್ತಿರುವ ನಾಟ್ಯಶಾಸ್ತ್ರದ ಭಾಷೆ ಯಾವ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡಿತು? ನಾಟ್ಯಶಾಸ್ತ್ರದ ಮೊದಲ ಅಧ್ಯಾಯವೇ ಹೇಳುತ್ತದೆ – ಕೃತಯುಗ ಮುಗಿದು ತ್ರೇತಾಯುಗ ಆರಂಭವಾಗುತ್ತಿದ್ದಾಗ, ಧರ್ಮ ಪಾಲನೆಯಾಗದೆ ಜನರು ಸುಖ–ದುಃಖ, ಅಸೂಯೆ ಮತ್ತು ಅತಿಯಾದ ಆಸೆಗಳಿಗೆ ಒಳಗಾಗಿದ್ದರು. ಜನರ ಗಮನ ಬೇರೆಡೆ ಸೆಳೆಯಲು ಮನರಂಜನೆಗಾಗಿ ಬ್ರಹ್ಮನು ನಾಲ್ಕು ವೇದಗಳಿಂದ ಅಂಶಗಳನ್ನು ತೆಗೆದು “ನಾಟ್ಯವೇದ”ವನ್ನು ರಚಿಸಿದನು.

ಎಲ್ಲಾ ವರ್ಣಗಳಿಗೆ (ಈಗಿನ ಸಂದರ್ಭ – ಜಾತಿ) ವೇದಗಳು ಲಭ್ಯವಿರದ ಕಾರಣ, ನಾಟ್ಯವೇದದ ಮೂಲಕ, ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳಲ್ಲಿ ಮನರಂಜನೆಯ ಜೊತೆಗೆ ವೇದಗಳಲ್ಲಿರುವ ಮೌಲ್ಯಗಳ ಬಗ್ಗೆಯೂ ಶಿಕ್ಷಣ ನೀಡಬಹುದು ಎಂಬ ಆಶಯ ಕೂಡಾ ಇತ್ತು. ವೇದಗಳನ್ನು ಎಲ್ಲಾ ವರ್ಣಗಳಿಗೆ ನಿಜವಾಗಿಯೂ ತೆರೆದಿಡದೆ, ಮನೋರಂಜನೆಯ ಮೂಲಕ ಅವುಗಳ ಸಾರಾಂಶವನ್ನು ಮಾತ್ರ ಜನರಿಗೆ ತಲುಪಿಸುವ ಹುನ್ನಾರ ಈ ನಾಟ್ಯಶಾಸ್ತ್ರದ್ದು. ಇಲ್ಲಿ ನಮಗೆ ನಿಜವಾಗಿಯೂ ಕಾಣಸಿಗುವುದು ಅವಕಾಶವಾದದ ಪೊಳ್ಳು ಔದಾರ್ಯ, ತಾರತಮ್ಯ, ಪ್ರಚಾರ ಹಾಗೂ ಗುಣ / ಜಾತಿ ಶ್ರೇಣೀಕರಣ.

ಪೂರ್ವನಿಯೋಜಿತವಾಗಿ Black and White:

ಬ್ರಹ್ಮನು ಭರತನಿಗೆ ವಹಿಸಿಕೊಟ್ಟ ಮೊದಲ ರಂಗಪ್ರದರ್ಶನವು ಅಸುರರು ಮತ್ತು ದಾನವರ ಮೇಲೆ ದೇವತೆಗಳ ವಿಜಯಕ್ಕೆ ಸಂಬಂಧಿಸಿದೆ. ಈ ಕಾರಣಕ್ಕಾಗಿ ನೊಂದ ದೈತ್ಯರು, ದಾನವರು ಹಾಗೂ ಇತರ ಅಸುರರು ಬ್ರಹ್ಮನಿಗೆ ದೂರುತ್ತಾರೆ – “ಹೊಸದಾಗಿ ಪರಿಚಯಿಸಿದ ನಾಟ್ಯಕಲೆ ದೇವತೆಗಳಿಗೆ ಮಾತ್ರ ಒಲವು ತೋರುತ್ತಿದೆ. ನಾವೆಲ್ಲರೂ ನಿಮ್ಮ (ಬ್ರಹ್ಮನ) ಮಕ್ಕಳಾಗಿರುವುದರಿಂದ ಇಂತಹ ತಾರತಮ್ಯ ಮಾಡಬಾರದು.”

ಅವರಿಗೆ ಸಾಂತ್ವನ ನೀಡುವ ನೆಪದಲ್ಲಿ ಬ್ರಹ್ಮನು ಹೇಳುತ್ತಾನೆ – “ನಾಟ್ಯವೇದದಲ್ಲಿ ಎಲ್ಲವೂ ಇದೆ, ಎಲ್ಲರ ಅನುಕರಣೆಯೂ ಆಗುತ್ತದೆ. ಅದು ದೇವತೆ ಮತ್ತು ಅಸುರರ ಒಳ್ಳೆಯ–ಕೆಟ್ಟ ಆಲೋಚನೆಗಳನ್ನೂ ಒಳಗೊಂಡಿದೆ.” ಆದರೆ, ದೈತ್ಯರು ನೊಂದ ಪರಿಯನ್ನು ಗಮನಿಸಿದರೆ ಹಾಗೂ ಅವರು ಭರತನ ಮೊದಲ ಪ್ರದರ್ಶನಕ್ಕೆ ವಿಘ್ನಗಳನ್ನು ಒಡ್ಡಲು ಮಾಡಿದ ಪ್ರಯತ್ನಗಳನ್ನು ಪರಿಗಣಿಸಿದರೆ, ಅಸುರರ ದೃಷ್ಟಿಕೋನವನ್ನು ನಾಟ್ಯಶಾಸ್ತ್ರದಲ್ಲಿ ಪ್ರತಿನಿಧಿಸಲಾಗಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಹೀಗಾಗಿ, ಪೂರ್ವನಿಯೋಜಿತವಾಗಿ ಒಂದು ಸಾಂಸೃತಿಕ ಕಥನ (narrative) ಸಿದ್ಧವಾಗಿದೆ – ದೈತ್ಯರು, ದಾನವರು, ವಿಘ್ನ ಒಡ್ಡುವವರು ಹಾಗೂ ಇತರ ಅಸುರರು ಧರ್ಮದ ಪಥಕ್ಕೆ ಅಡ್ಡಿ ಮಾಡುವವರಾಗಿರುತ್ತಾರೆ. ಅವರ ಸೋಲಿನಲ್ಲೇ ಇರುವುದು ಧರ್ಮದ ಫಥ, ೀ ಸೋಲಿನಿಂದಲೇ ಋತದ ಚಲನೆಗೆ ಮತ್ತೆ ಸಮತೋಲನ ಬರುವುದು. ಈ ಸಾಂಸೃತಿಕ ಕಥನ (narrative)ದಲ್ಲಿ ಬ್ರಹ್ಮನು ದೈತ್ಯರಿಗೆ ಆಶ್ವಾಸನೆ ಕೊಟ್ಟಂತೆ ಅಸುರರ ಒಳ್ಳೆಯ ಗುಣಗಳಿಗೆ ಪ್ರಾತಿನಿಧ್ಯ ಎಲ್ಲಿ ಬಂತು? ದೇವತೆಗಳ ಕೆಟ್ಟ ಗುಣ ಎಲ್ಲಿ ಬಂತು? ಎಲ್ಲವೂ black and white ಆಗಿ ಉಳಿದು ಬಿಟ್ಟಿದೆ.

ಅಸುರರು – ಒಂದು Micro Narrative (ಲಘು ನಿರೂಪಣೆ):

ಆರಂಭಿಕ ಋಗ್ವೇದದಲ್ಲಿ “ಅಸುರ” ಎಂಬುದು ದೇವತೆಗಳಿಗೆ ನೀಡುವ ಗೌರವಯುತ ಪದವಾಗಿತ್ತು. ಇದರರ್ಥ “ಬಲಶಾಲಿ” ಅಥವಾ “ಪ್ರಭು”. ಇರಾನಿನ ಪುರಾತನ ಧರ್ಮಗ್ರಂಥ ಅವೆಸ್ತಾದಲ್ಲಿ ಸರ್ವೋಚ್ಚ ದೇವನನ್ನು “ಅಹುರ ಮಜ್ದಾ” (Ahura Mazda) ಎಂದು ಕರೆಯಲಾಗುತ್ತದೆ. ಭಾಷಾವಿಜ್ಞಾನಿಗಳ ಪ್ರಕಾರ ವೈದಿಕ ಸಂಸ್ಕೃತ ಮತ್ತು ಅವೆಸ್ತನ್ ಭಾಷೆಗಳು “ಇಂಡೋ–ಇರಾನಿಯನ್” ಮೂಲದ ಒಂದೇ ಕುಟುಂಬಕ್ಕೆ ಸೇರಿವೆ. ಹೀಗಾಗಿ ಸಂಸ್ಕೃತದ “ಅಸುರ” ಮತ್ತು ಪರ್ಷಿಯನ್‌ “ಅಹುರ” ಸಮಾನಾಂತರ ಪದಗಳಾಗಿವೆ.

ಇತಿಹಾಸಕಾರರ ಅಭಿಪ್ರಾಯಗಳು:

ಇತಿಹಾಸಕಾರ ರೊಮಿಲಾ ಥಾಪರ್ ತಮ್ಮ Ancient Indian Social History: Some Interpretations ಸೇರಿದಂತೆ ಅನೇಕ ಕೃತಿಗಳಲ್ಲಿ, ವೈದಿಕ ಸಾಹಿತ್ಯವು “ಇತರರನ್ನು” ಕಪ್ಪು ಚರ್ಮದವರು, ವಿದೇಶಿ ಭಾಷೆಗಳನ್ನು ಮಾತನಾಡುವವರು ಮತ್ತು ಯಾವುದೇ ಆಚರಣೆಗಳನ್ನು ಹೊಂದಿರದವರು ಎಂದು ವಿವರಿಸುತ್ತದೆ ಎಂದು ಗಮನ ಸೆಳೆದಿದ್ದಾರೆ. ಈ ವಿವರಣೆಗಳಿಂದ ನಂತರ ಅವರನ್ನು “ರಾಕ್ಷಸರಾಗಿ” ಶೈಲೀಕರಿಸಲಾಗಿರಬಹುದು ಎಂಬ ಅರ್ಥೈಸುವಿಕೆಯನ್ನು ನೀಡುತ್ತಾರೆ.

ಅಸುರರು ಮತ್ತು ರಾಕ್ಷಸರು ಅಲೌಕಿಕ ಜೀವಿಗಳಲ್ಲ, ಬದಲಾಗಿ ನಿಜವಾದ ಮಾನವ ಸಮುದಾಯಗಳು – ಬುಡಕಟ್ಟು ಜನಾಂಗದವರು. ವೈದಿಕ ಬರಹಗಾರರು ತಮ್ಮ ಕಥೆಗಳಲ್ಲಿ ಅವರನ್ನು ಅಂಚಿನಲ್ಲಿಡಲು “ರಾಕ್ಷಸರಾಗಿ” ಪರಿವರ್ತಿಸಿದರು ಎಂದು ಅಂಬೇಡ್ಕರ್ ತಮ್ಮ Who Were the Shudras? ಕೃತಿಯಲ್ಲಿ ನಿರ್ದಿಷ್ಟವಾಗಿ ವಾದಿಸುತ್ತಾರೆ.

ಮುಂದುವರಿಯುವುದು...

ಭಾಗ ೦೭