Wednesday, June 24, 2026

ಚಲನಚಿತ್ರಗಳ ರಾಜಕೀಯ ನೆರಳುಗಳು - 06

 

Dancing Shiva - Badami Caves..

ಭರತಖಂಡನಾಟ್ಯಶಾಸ್ತ್ರ

ನಾಟಕೀಯ ನಿರೂಪಣೆ (Dramatic Narrative) ಮತ್ತು Classical Decoupage (ಕ್ಲಾಸಿಕಲ್‌ ಡೆಕ್ಯುಪಾಜ್‌) ಜಾಗತಿಕ ಸಿನಿಮಾರಂಗದಲ್ಲಿ ಪ್ರಬಲ ಮೆಟಾ-ನೆರೇಟಿವ್‌ಗಳಾಗಿವೆ. ಆದರೆ ನಾವು ಭಾರತ ದೇಶದ ಚಲನಚಿತ್ರಗಳಿಗೆ ನಮ್ಮನ್ನು ಸೀಮಿತಗೊಳಿಸಿದರೆ, ನಾಟ್ಯಶಾಸ್ತ್ರ ಆಧರಿತ ನಿರೂಪಣಾ ಶೈಲಿಗಳೇ ಪ್ರಬಲವಾಗಿವೆ.

ನಮ್ಮ ಸಿನಿಮಾಗಳು ಜಗತ್ತಿನ ಹೆಚ್ಚಿನ ಸಿನಿಮಾಗಳಂತೆ ಹಾಲಿವುಡ್‌ ಜನಪ್ರಿಯಗೊಳಿಸಿದ Classical Decoupage ವಿಧಾನವನ್ನೇ ತಮ್ಮದಾಗಿಸಿಕೊಂಡಿವೆ. ಆದರೆ ನಿರೂಪಣಾ ಶೈಲಿಯಲ್ಲಿ ಕ್ರಿಯೆಯ ಏಕತೆ (Unity of Action) ಕಂಡುಬಂದರೂ, ಏಕತೆಯನ್ನು ಭಂಗಗೊಳಿಸುವಂತಹ ಅನೇಕ ಘಟನೆಗಳು ನಮ್ಮ ಸಿನಿಮಾಗಳಲ್ಲಿ ನಡೆಯುತ್ತಲೇ ಇರುತ್ತವೆ.

ಉದಾಹರಣೆಗಳು:

·  ಮುಖ್ಯ ಕಥೆಗೆ ಭಿನ್ನವಾಗಿ ನಿಲ್ಲುವ ನಾಟ್ಯಶಾಸ್ತ್ರದ ವಿದೂಷಕ ಪಾತ್ರ ಆಧರಿತ ಕಾಮಿಡಿ ಟ್ರ್ಯಾಕ್‌ಗಳು (Comedy Tracks).

·     ಕೈಶಿಕಿ ವೃತ್ತಿ ಆಧರಿತ ಶೃಂಗಾರ ಪ್ರಧಾನ ಸಂಗೀತನೃತ್ಯಗಳಿಂದ ಕೂಡಿದ ಲಾಸ್ಯ ಶೈಲಿಯ ಬಳಕೆ, ಮತ್ತು ಅದರ ಒರಟು ರೂಪವಾದ ಐಟಂ ನಂಬರ್‌ಗಳು (Item Numbers).

·    ನಾಟ್ಯದಲ್ಲಿ ಎಲ್ಲವೂ ಇರುತ್ತದೆಎಂಬ ನಾಟ್ಯಶಾಸ್ತ್ರದ ಸೂಕ್ತಿಯಂತೆ, ಒಂದೇ ಸಿನಿಮಾದಲ್ಲಿ ಹಲವಾರು ರಸಗಳ ಸೂಕ್ತ ಮಿಶ್ರಣ.

ಇವು, ನಮ್ಮ ಸಿನಿಮಾಗಳಲ್ಲಿ ಕೇಂದ್ರಾಪಗಾಮಿ (Centrifugal) ಪ್ರವೃತ್ತಿಯನ್ನು ಸೂಚಿಸುತ್ತವೆ. ಜಾಗತಿಕ ಸಿನಿಮಾದ ಪ್ರಮುಖ ಪ್ರವೃತ್ತಿ ಹೆಚ್ಚಾಗಿ ಕೇಂದ್ರಾಭಿಮುಖ (Centripetal) ಆಗಿರುವುದರಿಂದ, ಹೋಲಿಕೆಯಲ್ಲಿ ನಮ್ಮ ಪರಂಪರೆ ವಿಶ್ವ ಮಟ್ಟದಲ್ಲಿ ಒಂದು Micro Narrative (ಲಘು ನಿರೂಪಣೆ) ಆಗಿ ಕಾಣಿಸುತ್ತದೆ.

ನಾಟ್ಯಶಾಸ್ತ್ರದ ಸಂದರ್ಭ:

ಭಾರತೀಯ ಸಿನಿಮಾ ಪೂರ್ವನಿಯೋಜಿತವಾಗಿ (by default) ಬಳಸುತ್ತಿರುವ ನಾಟ್ಯಶಾಸ್ತ್ರದ ಭಾಷೆ ಯಾವ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡಿತು? ನಾಟ್ಯಶಾಸ್ತ್ರದ ಮೊದಲ ಅಧ್ಯಾಯವೇ ಹೇಳುತ್ತದೆಕೃತಯುಗ ಮುಗಿದು ತ್ರೇತಾಯುಗ ಆರಂಭವಾಗುತ್ತಿದ್ದಾಗ, ಧರ್ಮ ಪಾಲನೆಯಾಗದೆ ಜನರು ಸುಖದುಃಖ, ಅಸೂಯೆ ಮತ್ತು ಅತಿಯಾದ ಆಸೆಗಳಿಗೆ ಒಳಗಾಗಿದ್ದರು. ಜನರ ಗಮನ ಬೇರೆಡೆ ಸೆಳೆಯಲು ಮನರಂಜನೆಗಾಗಿ ಬ್ರಹ್ಮನು ನಾಲ್ಕು ವೇದಗಳಿಂದ ಅಂಶಗಳನ್ನು ತೆಗೆದುನಾಟ್ಯವೇದವನ್ನು ರಚಿಸಿದನು.

ಎಲ್ಲಾ ವರ್ಣಗಳಿಗೆ (ಈಗಿನ ಸಂದರ್ಭಜಾತಿ) ವೇದಗಳು ಲಭ್ಯವಿರದ ಕಾರಣ, ನಾಟ್ಯವೇದದ ಮೂಲಕ, ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳಲ್ಲಿ ಮನರಂಜನೆಯ ಜೊತೆಗೆ ವೇದಗಳಲ್ಲಿರುವ ಮೌಲ್ಯಗಳ ಬಗ್ಗೆಯೂ ಶಿಕ್ಷಣ ನೀಡಬಹುದು ಎಂಬ ಆಶಯ ಕೂಡಾ ಇತ್ತು. ವೇದಗಳನ್ನು ಎಲ್ಲಾ ವರ್ಣಗಳಿಗೆ ನಿಜವಾಗಿಯೂ ತೆರೆದಿಡದೆ, ಮನೋರಂಜನೆಯ ಮೂಲಕ ಅವುಗಳ ಸಾರಾಂಶವನ್ನು ಮಾತ್ರ ಜನರಿಗೆ ತಲುಪಿಸುವ ಹುನ್ನಾರ ಈ ನಾಟ್ಯಶಾಸ್ತ್ರದ್ದು. ಇಲ್ಲಿ ನಮಗೆ ನಿಜವಾಗಿಯೂ ಕಾಣಸಿಗುವುದು ಅವಕಾಶವಾದದ ಪೊಳ್ಳು ಔದಾರ್ಯ, ತಾರತಮ್ಯ, ಪ್ರಚಾರ ಹಾಗೂ ಗುಣ / ಜಾತಿ ಶ್ರೇಣೀಕರಣ.

ಪೂರ್ವನಿಯೋಜಿತವಾಗಿ Black and White:

ಬ್ರಹ್ಮನು ಭರತನಿಗೆ ವಹಿಸಿಕೊಟ್ಟ ಮೊದಲ ರಂಗಪ್ರದರ್ಶನವು ಅಸುರರು ಮತ್ತು ದಾನವರ ಮೇಲೆ ದೇವತೆಗಳ ವಿಜಯಕ್ಕೆ ಸಂಬಂಧಿಸಿದೆ. ಕಾರಣಕ್ಕಾಗಿ ನೊಂದ ದೈತ್ಯರು, ದಾನವರು ಹಾಗೂ ಇತರ ಅಸುರರು ಬ್ರಹ್ಮನಿಗೆ ದೂರುತ್ತಾರೆ – “ಹೊಸದಾಗಿ ಪರಿಚಯಿಸಿದ ನಾಟ್ಯಕಲೆ ದೇವತೆಗಳಿಗೆ ಮಾತ್ರ ಒಲವು ತೋರುತ್ತಿದೆ. ನಾವೆಲ್ಲರೂ ನಿಮ್ಮ (ಬ್ರಹ್ಮನ) ಮಕ್ಕಳಾಗಿರುವುದರಿಂದ ಇಂತಹ ತಾರತಮ್ಯ ಮಾಡಬಾರದು.”

ಅವರಿಗೆ ಸಾಂತ್ವನ ನೀಡುವ ನೆಪದಲ್ಲಿ ಬ್ರಹ್ಮನು ಹೇಳುತ್ತಾನೆ – “ನಾಟ್ಯವೇದದಲ್ಲಿ ಎಲ್ಲವೂ ಇದೆ, ಎಲ್ಲರ ಅನುಕರಣೆಯೂ ಆಗುತ್ತದೆ. ಅದು ದೇವತೆ ಮತ್ತು ಅಸುರರ ಒಳ್ಳೆಯಕೆಟ್ಟ ಆಲೋಚನೆಗಳನ್ನೂ ಒಳಗೊಂಡಿದೆ.” ಆದರೆ, ದೈತ್ಯರು ನೊಂದ ಪರಿಯನ್ನು ಗಮನಿಸಿದರೆ ಹಾಗೂ ಅವರು ಭರತನ ಮೊದಲ ಪ್ರದರ್ಶನಕ್ಕೆ ವಿಘ್ನಗಳನ್ನು ಒಡ್ಡಲು ಮಾಡಿದ ಪ್ರಯತ್ನಗಳನ್ನು ಪರಿಗಣಿಸಿದರೆ, ಅಸುರರ ದೃಷ್ಟಿಕೋನವನ್ನು ನಾಟ್ಯಶಾಸ್ತ್ರದಲ್ಲಿ ಪ್ರತಿನಿಧಿಸಲಾಗಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಹೀಗಾಗಿ, ಪೂರ್ವನಿಯೋಜಿತವಾಗಿ ಒಂದು ಸಾಂಸೃತಿಕ ಕಥನ (narrative) ಸಿದ್ಧವಾಗಿದೆದೈತ್ಯರು, ದಾನವರು, ವಿಘ್ನ ಒಡ್ಡುವವರು ಹಾಗೂ ಇತರ ಅಸುರರು ಧರ್ಮ ಪಥಕ್ಕೆ ಅಡ್ಡಿ ಮಾಡುವವರಾಗಿರುತ್ತಾರೆ. ಅವರ ಸೋಲಿನಲ್ಲೇ ಇರುವುದು ಧರ್ಮದ ಫಥ, ೀ ಸೋಲಿನಿಂದಲೇ ಋತ ಚಲನೆಗೆ ಮತ್ತೆ ಸಮತೋಲನ ಬರುವುದು. ಈ ಸಾಂಸೃತಿಕ ಕಥನ (narrative)ದಲ್ಲಿ ಬ್ರಹ್ಮನು ದೈತ್ಯರಿಗೆ ಆಶ್ವಾಸನೆ ಕೊಟ್ಟಂತೆ ಅಸುರರ ಒಳ್ಳೆಯ ಗುಣಗಳಿಗೆ ಪ್ರಾತಿನಿಧ್ಯ ಎಲ್ಲಿ ಬಂತು? ದೇವತೆಗಳ ಕೆಟ್ಟ ಗುಣ ಎಲ್ಲಿ ಬಂತು? ಎಲ್ಲವೂ black and white ಆಗಿ ಉಳಿದು ಬಿಟ್ಟಿದೆ.

ಅಸುರರು – ಒಂದು Micro Narrative (ಲಘು ನಿರೂಪಣೆ):

ಆರಂಭಿಕ ಋಗ್ವೇದದಲ್ಲಿ ಅಸುರ ಎಂಬುದು ದೇವತೆಗಳಿಗೆ ನೀಡುವ ಗೌರವಯುತ ಪದವಾಗಿತ್ತು. ಇದರರ್ಥಬಲಶಾಲಿಅಥವಾಪ್ರಭು”. ಇರಾನಿ ಪುರಾತನ ಧರ್ಮಗ್ರಂಥ ಅವೆಸ್ತಾಲ್ಲಿ ಸರ್ವೋಚ್ಚ ದೇವನನ್ನು ಅಹುರ ಮಜ್ದಾ (Ahura Mazda) ಎಂದು ಕರೆಯಲಾಗುತ್ತದೆ. ಭಾಷಾವಿಜ್ಞಾನಿಗಳ ಪ್ರಕಾರ ವೈದಿಕ ಸಂಸ್ಕೃತ ಮತ್ತು ಅವೆಸ್ತನ್ ಭಾಷೆಗಳುಇಂಡೋಇರಾನಿಯನ್ಮೂಲದ ಒಂದೇ ಕುಟುಂಬಕ್ಕೆ ಸೇರಿವೆ. ಹೀಗಾಗಿ ಸಂಸ್ಕೃತದಅಸುರಮತ್ತು ಪರ್ಷಿಯನ್‌ಅಹುರ ಸಮಾನಾಂತರ ಪದಗಳಾಗಿವೆ.

ಇತಿಹಾಸಕಾರರ ಅಭಿಪ್ರಾಯಗಳು:

ಇತಿಹಾಸಕಾರ ರೊಮಿಲಾ ಥಾಪರ್ ತಮ್ಮ Ancient Indian Social History: Some Interpretations ಸೇರಿದಂತೆ ಅನೇಕ ಕೃತಿಗಳಲ್ಲಿ, ವೈದಿಕ ಸಾಹಿತ್ಯವು ಇತರರನ್ನು ಕಪ್ಪು ಚರ್ಮದವರು, ವಿದೇಶಿ ಭಾಷೆಗಳನ್ನು ಮಾತನಾಡುವವರು ಮತ್ತು ಯಾವುದೇ ಆಚರಣೆಗಳನ್ನು ಹೊಂದಿರದವರು ಎಂದು ವಿವರಿಸುತ್ತದೆ ಎಂದು ಗಮನ ಸೆಳೆದಿದ್ದಾರೆ. ವಿವರಣೆಗಳಿಂದ ನಂತರ ಅವರನ್ನುರಾಕ್ಷಸರಾಗಿಶೈಲೀಕರಿಸಲಾಗಿರಬಹುದು ಎಂಬ ಅರ್ಥೈಸುವಿಕೆಯನ್ನು ನೀಡುತ್ತಾರೆ.

ಅಸುರರು ಮತ್ತು ರಾಕ್ಷಸರು ಅಲೌಕಿಕ ಜೀವಿಗಳಲ್ಲ, ಬದಲಾಗಿ ನಿಜವಾದ ಮಾನವ ಸಮುದಾಯಗಳುಬುಡಕಟ್ಟು ಜನಾಂಗದವರು. ವೈದಿಕ ಬರಹಗಾರರು ತಮ್ಮ ಕಥೆಗಳಲ್ಲಿ ಅವರನ್ನು ಅಂಚಿನಲ್ಲಿಡಲುರಾಕ್ಷಸರಾಗಿಪರಿವರ್ತಿಸಿದರು ಎಂದು ಅಂಬೇಡ್ಕರ್ ತಮ್ಮ Who Were the Shudras? ಕೃತಿಯಲ್ಲಿ ನಿರ್ದಿಷ್ಟವಾಗಿ ವಾದಿಸುತ್ತಾರೆ.

ಮುಂದುವರಿಯುವುದು...

ಭಾಗ ೦೭

ಚಲನಚಿತ್ರಗಳ ರಾಜಕೀಯ ನೆರಳುಗಳು - 07

 

Dhurandhar

ದುರಂಧರ್ ಸಿನಿಮಾ

ಇತ್ತೀಚೆಗೆ ಬಿಡುಗಡೆಯಾದ ದುರಂಧರ್ ಸಿನಿಮಾ ಇದೇ ರೀತಿಯ othering ಕೆಲಸವನ್ನು ಉಗ್ರ ರಾಷ್ಟ್ರವಾದ ಹೆಸರಿನಲ್ಲಿ ಮಾಡುತ್ತದೆ. ನಾಟ್ಯಶಾಸ್ತ್ರದ ಧರ್ಮ ಪಾಲನೆಯ ಸಂದರ್ಭ (context) ಈ ಚಲನಚಿತ್ರದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ.

ಚಿತ್ರದಲ್ಲಿ ಒಂದು ದೇಶವಿದೆ – ಒಂದು ದೇವ ಲೋಕ. ಈ ಲೋಕದಲ್ಲೊಂದು ಧರ್ಮ ಜೀವಿ ಇರುತ್ತಾನೆ – ದೇಶದ ಬೇಹುಗಾರಿಕೆ ವಿಭಾಗದ ಮುಖ್ಯಸ್ಥ. ಈ ದೇವ ಲೋಕವನ್ನು ಛಿದ್ರಗೊಳಿಸಲು ದಾನವರು ಪ್ರಯತ್ನಿಸುತ್ತಿರುವುದನ್ನು ನೋಡಿ ಈ ಧರ್ಮ ಜೀವಿ ಹತಾಶೆಗೊಂಡಿರುತ್ತಾನೆ. 

ಇನ್ನೊಂದೆಡೆ, ಒಂದು ವೈರಿ ದೇಶವಿದೆ. ಅದು ದಾನವರ ಲೋಕ”, ಅದರೊಳಗಿವುವರೆಲ್ಲರೂ ಕ್ರೂರ ರಾಕ್ಷಸರು ಅಂತ ಮೊದಲೇ ನಿರ್ಧರಿಸಲಾಗಿದೆ. ಈ ʼದಾನವ ಲೋಕʼದಲ್ಲಿ ಕಾಣುವ ಎಲ್ಲಾ ಸದಸ್ಯರು:

  • ತಮ್ಮ ಸ್ವಾರ್ಥಕ್ಕಾಗಿ ಒಬ್ಬರಿಗೊಬ್ಬರು ದ್ರೋಹ  ಬಗೆಯುವವರು,
  • ಸಂಬಂಧಿಕರನ್ನೂ ಸ್ವಂತ ಲಾಭಕ್ಕೆ ಉಪಯೋಗಿಸುವವರು,
  • ಅಮಾಯಕ ಹುಡುಗರನ್ನು ಉಗ್ರ ಮೂಲಭೂತವಾದಿಗಳಾಗಿ ಪರಿವರ್ತಿಸುವವರು,
  • ಕಾರಣವಿಲ್ಲದೆ ನೆರೆ ರಾಷ್ಟ್ರದೊಳಗೆ ನುಸುಳಿ ಹಿಂಸಾತ್ಮಕ ಆತಂಕ ಬಿತ್ತರಿಸುವವರು,
  • ನೆರೆ ರಾಷ್ಟ್ರಗಳ ಆರ್ಥಿಕ ಭದ್ರತೆಗೆ ಭಂಗ ತರುವವರು,
  • ಒಬ್ಬರನ್ನೊಬ್ಬರು ಕೊಲ್ಲುವವರು,
  • ಭೀಕರ ಹಿಂಸೆ ನಡೆಸುವವರುತಲೆಗಳನ್ನು ಚೂರು ಮಾಡುವವರು, ಮುಖದ ಚರ್ಮವನ್ನು ಕೀಳುವವರು, ಬೆರಳುಗಳನ್ನು ಕೊಚ್ಚುವವರು, ರಕ್ತವನ್ನು ಕಾರಂಜಿಯ ಹಾಗೆ ಹರಿಸುವವರು.

ಸಂಕ್ಷಿಪ್ತವಾಗಿ, ದಾನವ ಲೋಕ ಸದಸ್ಯರನ್ನು ನಮ್ಮ ಪುರಾಣಗಳಲ್ಲಿ ಇರುವ ಹಾಗೆ ಧರ್ಮವನ್ನು ಪಾಲಿಸದ ರಾಕ್ಷಸ / ಅಸುರ ಗುಣಗಳನ್ನು ಹೊಂದಿರುವವರಂತೆ ಚಿತ್ರಿಸಲಾಗಿದೆ.

ಇಂತಹ ಭೀಕರ ಲೋಕವನ್ನು ಒಳಗಿನಿಂದ ಭೇದಿಸಲು, ʼದೇವ ಲೋಕʼದ ಆ ಧರ್ಮ ಜೀವಿ - ಬೇಹುಗಾರಿಕೆಯ ಮುಖ್ಯಸ್ಥ - ತನ್ನ ಪ್ರತಿನಿಧಿಯನ್ನು (ನಾಯಕನನ್ನು) ನೇಮಿಸುತ್ತಾನೆ. ಈ ನಾಯಕನು ದಾನವರ ಮನೆಯ ಅಂಗಳದೊಳಗೆ ದಾನವನಾಗಿ ನುಸುಳಿ, ಅವರ ಭೀಕರ ಆಟಗಳನ್ನು ಅವರ ಜೊತೆಗೇ ಆಡಿ, ಅವರ ಅಧಿಕಾರ ಶ್ರೇಣಿಯಲ್ಲಿ ದಾನವನಾಗಿಯೇ ಬೆಳೆದು, ಕೊನೆಗೆ ತನ್ನ ನಿಜ ಸ್ವರೂಪ ತೋರಿಸಿ, ಅಲ್ಲಿದ್ದ ದಾನವರನ್ನೇ ನಾಶಮಾಡಲು ಸಿದ್ಧನಾಗುತ್ತಾನೆ. ಅಂದರೆ, ಧರ್ಮ ಪಾಲನೆಗೆ ತನ್ನ ಪಾಲಿನ ಕರ್ಮ (action) ಮಾಡಲು ಸಿದ್ದನಾಗುತ್ತಾನೆ. ದುರಂಧರ್‌ ೧ ದರಲ್ಲಿ ಹೀಗೆ ಸಜ್ಜಾದ ನಮ್ಮ ನಾಯಕ ದುರಂಧರ್ ರಡರಲ್ಲಿ ದಾನವರನ್ನೆಲ್ಲ ಸಂಪೂರ್ಣವಾಗಿ ಸಂಹರಿಸಿ ಧರ್ಮವನ್ನು ತನ್ನ ಕರ್ಮದ ಮೂಲಕ ಸೂಕ್ತ ರೀತಿಯಲ್ಲಿ ಪಾಲಿಸುತ್ತಾನೆ, ಪರೋಕ್ಷವಾಗಿ ಮೇಲೆ ಹೇಳಿದ ಋತವನ್ನು ಸಂತುಲನಕ್ಕೆ  ತರುತ್ತಾನೆ.

ಸಮಯದ ಅಭಾವದ ಕಾರಣ ಇಲ್ಲಿದುರಂಧರ್ ಬಗ್ಗೆ ಹೆಚ್ಚು ಪ್ರಸ್ತಾಪ ಇರುವುದಿಲ್ಲ. ಆದರೆ, ದುರಂಧರ್‌ ಫ್ರಾಂಚೈಸಿ (Durandhar Franchise) ಬಂದ ಮೇಲೆ ಒಂದಂತೂ ಸ್ಪಷ್ಟವಾಗಿದೆ – ಪಾತ್ರಗಳು ಮೊಬೈಲ್ ಹಿಡಿದು ಪ್ಯಾಂಟು-ಶರ್ಟು ಧರಿಸಿ ಆಧುನಿಕ ಯುಗಕ್ಕೆ ಕಾಲಿಟ್ಟರೂ, ಭಾರತೀಯ ಸಿನಿಮಾ ತನ್ನ ಪೌರಾಣಿಕ ರೂಪದಿಂದ ಹೊರ ಬರಲೇ ಇಲ್ಲ.  

ಮೂಲ ʼಧಾರ್ಮಿಕʼ ಅಸಹಜ ಹಸ್ತಕ್ಷೇಪ (Nefarious Manipulation):

ಕಥೆ ಆರಂಭವಾಗುವ ಮೊದಲು ಸಿನಿಮಾ ಭಗವದ್ಗೀತೆಯ ಅಧ್ಯಾಯ , ಶ್ಲೋಕ ೪೭ ಅನ್ನು ತೋರಿಸುತ್ತದೆ:

“Your duty is to uphold dharma. Never to claim the reward. Let not the lure of victory guide you. The battlefield summons, be relentless in action.” (“ಧರ್ಮ ಸಂರಕ್ಷಣೆಯೇ ನಿನ್ನ ಕರ್ತವ್ಯ. ಫಲಾಪೇಕ್ಷೆಯನ್ನು ಬಿಡು. ವಿಜಯದ ಆಕರ್ಷಣೆ ಮಾರ್ಗದರ್ಶಕವಾಗದಿರಲಿ. ರಣಭೂಮಿ ಆಹ್ವಾನಿಸುತ್ತಿದೆ, ಪಟ್ಟುಹಿಡಿದು ಕರ್ಮ ನಿರ್ವಹಿಸು.”)

ಡಾ. ಎಸ್. ರಾಧಾಕೃಷ್ಣನ್‌ (Dr. S. Radhakrishnan) ಅವರ ಅನುವಾದ ಹೀಗಿದೆ:

“To action alone thou have a right and never at all to its fruits, let not the fruits of action be thy motive, neither let there be in thee any attachment to inaction.” (“ಕರ್ಮಕ್ಕೆ ಮಾತ್ರ ನಿನಗೆ ಅಧಿಕಾರವಿದೆ, ಅದರ ಫಲಗಳಿಗೆ ಎಂದಿಗೂ ಅಲ್ಲ. ಕರ್ಮದ ಫಲವೇ ನಿನ್ನ ಪ್ರೇರಣೆಯಾಗದಿರಲಿ, ಅಕರ್ಮದಲ್ಲಿ ನಿನಗೆ ಯಾವುದೇ ಆಸಕ್ತಿ ಇರಬಾರದು.”)

 ಮೂಲ ಶ್ಲೋಕವು ಕೇವಲಅಕರ್ಮದಲ್ಲಿ ಆಸಕ್ತಿ ಬಿಡುಎಂದು ಎಚ್ಚರಿಸುತ್ತದೆ,  “ಪಟ್ಟುಹಿಡಿದು ಕರ್ಮ ನಿರ್ವಹಿಸುಎಂಬ ನಾಟಕೀಯ ಕರೆಯನ್ನು ನೀಡುತ್ತಿಲ್ಲ. ದುರಂಧರ್  ಚಿತ್ರದಲ್ಲಿ ಅನುವಾದ ಉತ್ಸಾಹಭರಿತrelentless in action’ ಅಂತಿದೆ. ಮುಂದೆ ನಾವು ನೋಡುವ ಹಾಗೆ ಈ ಹಸ್ತಕ್ಷೇಪಕ್ಕೆ ʼಮರುಕವಿಲ್ಲದೇ ಕರ್ಮ ನಿರ್ವಹಿಸುʼ ಎಂಬ ಅರ್ಥ ವಿವರಣೆ (interpretation) ಬಂದರೆ, ಅದು ಸಂಪೂರ್ಣವಾಗಿ ತಪ್ಪಾಗದು. ಈ ಕರೆ ಚಿತ್ರದ ಬೇಹುಗಾರಿಕೆಯುದ್ಧ ಶೈಲಿಗೆ ಸರಿಹೊಂದುವಂತೆ ಸೇರಿಸಿದ, ಸತ್ಯಕ್ಕೆ ದೂರವಾದ ಕುಯುಕ್ತಿಯಿಂದ ಕೂಡಿದ ಅನುವಾದವಾಗಿದೆ. ದುರಂಧರ್  ಸಿನಿಮಾದ ಸಂದರ್ಭದಲ್ಲಿ ಈ ಕರೆ ಮೂಲ ಶ್ಲೋಕಕ್ಕೆ ದಕ್ಕೆ ತರಿಸುವಂತ ಪ್ರತೀಕಾರದ ಕರೆಯಾಗಿದೆ.   

ಧರ್ಮ ಹೆಸರಿನಲ್ಲಿ ಮೂಲ ಕಪಟತನವೇ ಚಿತ್ರದಲ್ಲಿ ಬರುವ ಬೇರೆ ಕುತಂತ್ರಗಳಿಗೆ ನಾಂದಿ ಹಾಡಿದಂತಿದೆ.

ಅನ್ಯ ಅಸಹಜ ಹಸ್ತಕ್ಷೇಪಗಳು (Nefarious Manipulation):

ದುರಂಧರ್ ಚಿತ್ರದ ಏಕಕ್ರಿಯೆಯಲ್ಲಿ ಎರಡು ಎಳೆಗಳಿವೆ:

1.     ದೇವಲೋಕದ ಬೇಹುಗಾರ ವೈರಿ ದಾನವ ಲೋಕ ಗುಂಪಿನ ನಿಷ್ಠೆಯನ್ನು ಸಂಪಾದಿಸಿ, ಅದರೊಳಗೆ ನುಸುಳಿ ಅದರ ನಿಯಂತ್ರಣವನ್ನು ಪಡೆದುಕೊಳ್ಳುತ್ತಾನೆ.

2.     ದೇವಲೋಕದ ಬೇಹುಗಾರ ದಾನವ ಲೋಕದಿಂದ ಗುಪ್ತ ಮಾಹಿತಿಗಳನ್ನು ಸಂಗ್ರಹಿಸಿ ತನ್ನ ಬಣಕ್ಕೆ ರವಾನಿಸುವಲ್ಲಿ ವಿಫಲನಾಗುತ್ತಾನೆ. ಇದರ ಪರಿಣಾಮವಾಗಿ ತನ್ನ ದೇಶದಲ್ಲಿ – ದೇವಲೋಕದಲ್ಲಿ - ಎಂದೂ ಕಾಣದಂತಹ ಒಂದು ಭೀಕರ ಭಯೋತ್ಪಾದಕ ದಾಳಿ ನಡೆಯುತ್ತದೆ.

ಈ ಎರಡನೇಯ ಏಳೆ ಚಲನಚಿತ್ರದಲ್ಲಿ ಗೌಣ ಎಳೆಯಾದರೂ, ನಿಜವಾಗಿಯೂ ದೇವಲೋಕದ ನಾಯಕನಿಗೆ ವೈರಿ ದೇಶ ʼದಾನವ ಲೋಕʼದಲ್ಲಾದ ಅತಿ ದೊಡ್ಡ ವೈಫಲ್ಯ. ಈ ವೈಫಲ್ಯವನ್ನು ದುರಂಧರ್ ಹೇಗೆ ಮರೆಮಾಚುತ್ತದೆ?

ದೇವಲೋಕದಲ್ಲಿ ಭಯೋತ್ಪಾದಕ ದಾಳಿ ನಡೆಯುತ್ತಿರುವಾಗ ದಾನವರ ಲೋಕದಲ್ಲಿ ಅದರ T.V. life feed ನೋಡಿ ಯಶಸ್ಸಿನಲ್ಲಿ ಹಿಗ್ಗಿ ಮೆರೆಯುತ್ತಿರುವ ದಾನವರ ನಡುವೆ ನಮ್ಮ ಬೇಹುಗಾರ ನಾಯಕ ಆಘಾತಗೊಂಡಿರುವುದನ್ನು ನಾವು ಹತ್ತಿರದಿಂದ (Close up) ನೋಡುತ್ತೇವೆ. ಅಷ್ಟರಲ್ಲಿ ಕಣ್ಣು ಮಿಟುಕಿಸುವಷ್ಟೂ ಸಮಯ ಕೊಡದೆ ಒಂದು ಅತೀ ಸಣ್ಣ ಪರ್ಯಾಯ ದೃಶ್ಯ ಜೋಡಣೆ (intercut sequence) ಬಂದು ಮಾಯವಾಗುತ್ತದೆ. ಈ ದೃಶ್ಯದಲ್ಲಿ ಬೇರೊಂದು ಕಾಲದಲ್ಲಿ (ಪ್ರಾಯಷಃ ಅದು ಗತಕಾಲ – flash back), ಪ್ರಾಯಷಃ ತನ್ನದೇ ದೇಶದಲ್ಲಿ ಅಪರಿಚಿತ ಮನುಷ್ಯನೊಬ್ಬನು ನೇಣಿನ ಬಿಗಿತದಿಂದ ಸಾಯುತ್ತಿರುವುದನ್ನು ಹತ್ತಿರದಿಂದ (Close up) ನೋಡಿ, ನಾಯಕನು ಇದೇ ರೀತಿ ಆಘಾತಗೊಳ್ಳುತ್ತಾನೆ. ಮಿಂಚಿನಂತೆ ನಾವು ವರ್ತಮಾನಕ್ಕೆ ಮತ್ತೆ ಮರಳಿದಾಗ ನಾಯಕ ಬೇಹುಗಾರ ಚೇತರಿಸಿಕೊಂಡು ಎಲ್ಲರ ಜೊತೆ ಸಂತೋಷದ ಕೇಕೆ ಹಾಕುತ್ತಾ, ಸಂಭ್ರಮದ ನಟನೆ ಮಾಡುತ್ತಾನೆ.

ಪರ್ಯಾಯ ದೃಶ್ಯದ ವಿವರಣೆಯು ಚಿತ್ರದ ಕೊನೆಯಲ್ಲೇ ಬರುವುದರಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಪೂರ್ಣತೆಯ ಭಾವನೆ ಅಲ್ಲಿಯ ವರೆಗೆ ಉಳಿದು ಬಿಡುತ್ತದೆ. ನಿರ್ದೇಶಕ ಇಲ್ಲಿ ಇಂತಹ suspense ಸೃಷ್ಟಿ ಮಾಡಿರುದರಿಂದ, ಪ್ರೇಕ್ಷಕರು ನಾಯಕ ವೈಫಲ್ಯದ ವಿಮರ್ಶೆಯನ್ನು ಮಾಡಲು ಮರೆತು ಬಿಡುತ್ತಾರೆ, distract ಆಗುತ್ತಾರೆ.

ವೈಫಲ್ಯದ ಮರೆಮಾಚುವಿಕೆ – ಇನ್ನೊಂದು ಬಗೆ :

ಚಿತ್ರವುಸತ್ಯಕಥೆಆಧರಿತ ಎಂದು ಸಾರಿದ ಮೇಲೆ, ಭಯೋತ್ಪಾದಕ ದಾಳಿ ನಡೆದಿದೆ ಎಂದು ತೋರಿಸಲೇಬೇಕು, ಯಾಕೆಂದರೆ ನಿಜ ಜೀವನದಲ್ಲಿ ಆ ದಾಳಿಯನ್ನು ಇಡೀ ವಿಶ್ವವೇ live TV coverage ನಲ್ಲಿ ನೋಡಿದೆ. ಹೀಗೆ ತೋರಿಸಿದ ಮೇಲೆ ಇದು ಬೇಹುಗಾರಿಕೆಯ ವೈಫಲ್ಯ ಎಂದು ಒಪ್ಪಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ವೈಫಲ್ಯದ ವಿಮರ್ಶೆಯನ್ನೇನಾದರೂ ಮಾಡಿದರೆ ದುರಂಧರ್ ಸಿನಿಮಾದ ಉಗ್ರ ರಾಷ್ಟ್ರವಾದದ ಆಶಯಕ್ಕೇ ದೊಡ್ಡ ದಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ, ನಿರ್ದೇಶಕ ಕುತಂತ್ರದಿಂದ ಕಥೆಯನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುತ್ತಾರೆ.

ಬೇಹುಗಾರ ತನ್ನ ಸೋಲನ್ನು ಮನಸ್ಸಿಗೆ ಹಚ್ಚಿಕೊಂಡು, ಅದನ್ನು ತನ್ನ ವೈಯಕ್ತಿಕ ವೈಫಲ್ಯವೆಂದು ಪರಿಗಣಿಸಿ ಸೇಡು ತೀರಿಸಿಕೊಳ್ಳುವ ಹೊಂಚು ಹಾಕುತ್ತಾನೆ. ಚಿತ್ರದ ಕೊನೆಯಲ್ಲಿ ಮೇಲಿನ ಪರ್ಯಾಯ ದೃಶ್ಯ ಜೋಡಣೆಗೆ (Inter cut sequence) ಅಲ್ಪ-ಸ್ವಲ್ಪ ವಿವರಣೆ ಬಂದಾಗ ಪ್ರತೀಕಾರದ ಈ ಆಂತರಿಕಗೊಳಿಸುವಿಕೆ (Internalisation) ಸ್ಪಷ್ಟವಾಗುತ್ತದೆ.

ಆ ವಿವರಣೆ ಸ್ಲಲ್ಪ ಹೀಗಿದೆ - ನಾಯಕ ಬೇಹುಗಾರಿಕೆ ಮಾಡುವ ಮೊದಲು ತನ್ನ ದೇಶದಲ್ಲಿ ಏನೋ ಒಂದು ಘೋರ ಅಪರಾಧ ಎಸಗಿಸಿ ಗಲ್ಲುಶಿಕ್ಷೆಯೋ, ಜೀವಾವಧಿ ಶಿಕ್ಷೆಯೋ ಪಡೆದಿರುತ್ತಾನೆ. ಆಗ ದೇವ ಲೋಕದ ಬೇಹುಗಾರಿಕೆಯ ಮುಖ್ಯಸ್ಥ ಮೂಲ ಧರ್ಮಪಾಲಕಅವನಿಗೆ ಒಂದು ಪ್ರಸ್ತಾಪವಿಟ್ಟಿರುತ್ತಾನೆ: “ವೈರಿ ದೇಶ ʼದಾನವ ಲೋಕʼಕ್ಕೆ ಹೋಗಿ ಬೇಹುಗಾರಿಕೆಯಲ್ಲಿ ತೊಡಗಿಸಿಕೊ, ಮುಕ್ತಿ ಪಡೆ. ಅಲ್ಲಿ ಹೊಡಿ, ಬಡಿ, ಕೊಲ್ಲು, ಕೊಚ್ಚು, ರಕ್ತ ಚಿಮ್ಮಿಸು, ಸುಳ್ಳು ಹೇಳು, ಆದರೆ ಪ್ರತೀಕಾರ ತೆಗೆದುಕೊ - ಇಲ್ಲವಾದರೆ ನೀನಿಲ್ಲಿ ಗಲ್ಲುಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಅನುಭವಿಸು.” ಪ್ರತೀಕಾರ ದೇಶದ ಹೆಸರಿನಲ್ಲಿ ಇದ್ದರೂ ಅದು ಈ ಮೂಲ ಧರ್ಮಪಾಲಕನ ವಯಕ್ತಿಕ ಪ್ರತೀಕಾರವೂ ಆಗಿರುತ್ತದೆ. ಚಿತ್ರದ ಕೊನೆಯಲ್ಲಿ ಅದು ನಮ್ಮ ನಾಯಕನ ವಯಕ್ತಿಕ ಪ್ರತೀಕಾರವೂ ಆಗಿಹೋಗುತ್ತದೆ.

ಇಂತಹ ಒಂದು ಒಪ್ಪಂದಕ್ಕೆ ಸಾಮಾನ್ಯ ಪರಿಭಾಷೆಯಲ್ಲಿ entrapment (ಸಿಕ್ಕಿಸಿ ಹಾಕುವಿಕೆ) ಎಂದು ಕರೆಯುತ್ತಾರೆ. ದುರಂಧರ್‌ ಚಿತ್ರದ ಮೂಲ ಧರ್ಮಪಾಲಕನು ಇದಕ್ಕೆ ಕಾನೂನಿನ ಅನುಮೋದನೆಯನ್ನೇನೋ ಪಡೆದಿರಬಹುದು. ಆದರೆ ಇಲ್ಲಿ ಮತ್ತೊಂದು ಪ್ರಶ್ನೆ ಬರುತ್ತದೆ. ದೈತ್ಯರು, ದಾನವರು ಹಾಗೂ ಅಸುರರು ಕೂಡ ತಮ್ಮ-ತಮ್ಮ ಕೃತ್ಯಗಳಿಗೆ ತಮ್ಮದೇ ಆದ ಕಾನೂನಿನ ಪರವಾನಗಿ ಪಡೆದಿರಬಹುದಲ್ಲವೆ?

ಇದು ಸರಿ ಅಂತಾದರೆ, ಅದೂ ಸರಿ ಅಲ್ಲವೆ? ಅದು ತಪ್ಪಾದರೆ, ಇದೂ ತಪ್ಪಲವೇ?

ಪೂರ್ಣ ವೃತ್ತ

ಮಾತು ಅಲ್ಲಿಗೇ ಬಂದು ನಿಂತಿದೆ – “ನಮ್ಮ ಕಾನೂನು, ನಿಮ್ಮ ಕಾನೂನು.” … ಇವೆರಡರ ತಿಕ್ಕಾಟವೇ ರಾಜಕೀಯ.

ಸಂಶ್ಲೇಷಣೆ (Synthesis) ಸಾಧ್ಯವೇ? … ಅದು ಕೂಡ ರಾಜಕೀಯ.

ದುರಂಧರ್  ಸಿನಿಮಾಗಳು ಏಕಮುಖಿಯಾಗಿದ್ದು ಸಹಬಾಳ್ವೆಯನ್ನು ತಿರಸ್ಕರಿಸುತ್ತವೆ. ಹೀಗಾಗಿ ಅವು Anti-Social (ಸಾಮಾಜ ವಿರೋಧಿ) ಸಿನಿಮಾಗಳಾಗಿವೆ.

ದುರಂಧರ್‌ ಬರೀ ಬೇಹುಗಾರಿಕೆಯ ಬಗ್ಗೆ ಹೇಳುತ್ತಿಲ್ಲ, ಬರೀ ಆತಂಕವಾದ ಅಥವಾ ಭಯೋತ್ಪಾದನೆ ವಿರೋಧಿ ಕ್ರಮಗಳ ಬಗ್ಗೆ ಹೇಳುತ್ತಿಲ್ಲ, ಬರೀ ಪ್ರೀತಿಯ ಬಗ್ಗೆ ಹೇಳುತ್ತಿಲ್ಲ. ಇವೆಲ್ಲದರ ಬಗ್ಗೆ ಹೇಳುತ್ತಲೇ ಇದು ಮುಖ್ಯವಾಗಿ ನಮ್ಮ ನಿಯಮಗಳೇ ಶ್ರೇಷ್ಠಎಂಬ ರಕ್ತಮಯ ಉಗ್ರ ರಾಷ್ಟ್ರವಾದದ ವಿಚಾರಧಾರೆಯ ಹುಸಿ ಕೃತಾರ್ಥತೆಯನ್ನು (ತೃಪ್ತಿ / Gratification) ಬಿಂಬಿಸುತ್ತದೆ.

ಹೀಗಾಗಿ ಈ ಸಿನಿಮಾ ರಾಜಕೀಯ ಪ್ರಚಾರದ ಸಿನಿಮಾವೇ ಆಗಿದೆ. ಜೊತೆಗೆ ಪ್ರಚಾರವನ್ನು ಅನೈತಿಕ / ಅಸಹಜ ಹಸ್ತಕ್ಷೇಪಗಳ ಮೂಲಕ ಮಾಡಿರುವುದರಿಂದ ಇದು ದುಷ್ಪ್ರಚಾರ ಸಿನಿಮಾದ ಉದಾಹರಣೆಯೂ ಹೌದು.

 ಮುಕ್ತಾಯ.