Wednesday, June 24, 2026

ಚಲನಚಿತ್ರಗಳ ರಾಜಕೀಯ ನೆರಳುಗಳು - 03

 

Indian Meta Narrative


ಭಾರತೀಯ ಮೆಟಾ-ನೆರೇಟಿವ್‌ (Meta Narrative – ಮಹಾ ಕಥನ)

ಇಷ್ವರವರೆಗೂ ನಾವು ಜಾಗತಿಕ ಮೆಟಾ-ನೆರೇಟಿವ್‌ಗಳನ್ನು (Meta Narrative / ಮಹಾ ಕಥನ) ಸ್ಥೂಲವಾಗಿ ಅವಲೋಕಿಸಿದ್ದೇವೆ. ಅಲ್ಲಿ ಸಮಾಜ ಒಟ್ಟಾಗಿ ಹೇಗೆ ಬದುಕಬೇಕು ಮತ್ತು ಅದರೊಳಗಿನ ಸದಸ್ಯರು ಎಷ್ಟರ ಮಟ್ಟಿಗೆ ತಮ್ಮತನವನ್ನು ಉಳಿಸಿಕೊಳ್ಳಬೇಕು ಎಂಬುದುಸದಸ್ಯರು ತಮ್ಮ ಕುಲಮುಖಂಡನೊಂದಿಗೆ, ರಾಜನೊಂದಿಗೆ, ಸಾಮಂತನೊಂದಿಗೆ ಅಥವಾ ಧಾರ್ಮಿಕ ಗುರುಗಳೊಂದಿಗೆ ಮಾಡಿಕೊಂಡ ಸಾಮಾಜಿಕ ಒಪ್ಪಂದವಾಗಿತ್ತು. ಆದರೆ ಭಾರತಖಂಡದಲ್ಲಿ ಕಥೆ ಸ್ವಲ್ಪ ಬೇರೆಯಾಗುತ್ತದೆ. ಇಲ್ಲಿ ಸಾಮಾಜಿಕ ಒಪ್ಪಂದವು ನೇರವಾಗಿ ಸರ್ವವ್ಯಾಪಿ ಬ್ರಹ್ಮನೊಂದಿಗೆ ಇರುತ್ತದೆ.

ವೇದ:

ಸಾಮಾನ್ಯ ಯುಗ ಪೂರ್ವ ಸುಮಾರು ೧೫೦೦೧೦೦೦ರ ಅವಧಿಯಲ್ಲಿ ರಚನೆಗೊಂಡ ಋಗ್ವೇದ ೧೦ನೇ ಮಂಡಲದ ೧೯೦ನೇ ಸೂಕ್ತವು ಋತ (Ṛta) ಮತ್ತು ಸತ್ಯ (Truth) ತತ್ವಗಳ ಬಗ್ಗೆ ಹೇಳುತ್ತದೆ. ಋಗ್ವೇದದ 10ನೇ ಮಂಡಲದ, 190ನೇ ಸೂಕ್ತದ, 1ನೇ ಸೂತ್ರ ಸಾರಾಂಶ ಹೀಗಿದೆ.

ತಪಸ್ಸಿನಿಂದ (ಜ್ಞಾನಾಗ್ನಿ / Primordial Cosmic Energy) ಋತ ಮತ್ತು ಸತ್ಯ ಜನ್ಮತಾಳಿದವು.

ತದನಂತರ ಕತ್ತಲೆಯಾದ ರಾತ್ರಿ ಹುಟ್ಟಿತು,

ನಂತರ ಗರ್ಜಿಸುವ ಮಹಾಸಾಗರ ಉಂಟಾಯಿತು. 

ಆ ಮಹಾಸಾಗರದಿಂದಲೇ ಕಾಲಚಕ್ರ ಜನಿಸಿತು.

ಇದು ಹಗಲು-ರಾತ್ರಿ ಗಳನ್ನು ವ್ಯವಸ್ಥಿತಗೊಳಿಸಿತು.

ಈ ಕಾಲಚಕ್ರಕ್ಕೆ ಕಣ್ಣು ಮಿಟುಕಿಸುವ ಎಲ್ಲದರ ಮೇಲೂ ನಿಯಂತ್ರಣವಿದೆ.

ಋತ ಎಂದರೆ ಇಡೀ ಬ್ರಹ್ಮಾಂಡದ ನಿಯಮಿತ ಚಲನೆ, ಕ್ರಮಬದ್ಧತೆ ಮತ್ತು ಸಾಮರಸ್ಯ (Cosmic Movement, Order and Harmony). ಸತ್ಯ ಎಂದರೆ ಬದಲಾಗದ, ಶಾಶ್ವತವಾದ ಅಸ್ತಿತ್ವ ಅಥವಾ ಚೇತನ (Eternal Being or Consciousness). ಇದು ಋತ ಸ್ಥಿರ ರೂಪ.

ಋಗ್ವೇದ ಸೂಕ್ತದ ಮೂರನೇ ಭಾಗ ಇದಕ್ಕೆ ಇನ್ನೊಂದು ಆಯಾಮ ನೀಡುತ್ತದೆ: 

ಸೃಷ್ಟಿಕರ್ತನು (ವಿಧಾತ) ಸೂರ್ಯ-ಚಂದ್ರರನ್ನು,

ಹಿಂದಿನ ಕಲ್ಪದಂತೆಯೇ ಮತ್ತೆ ಸೃಷ್ಟಿಸಿದನು.

ಅದರಂತೆ ಸ್ವರ್ಗ, ಭೂಮಿ ಮತ್ತು ಆಕಾಶಗಳನ್ನು ವ್ಯವಸ್ಥಿತಗೊಳಿಸಿದನು.

ಅಂದರೆ, ಋತ ತಪಸ್ಸಿನಿಂದ (Primordial Cosmic Energy) ಮೂಡಿ ಬಂದರೂ, ಋತ ಮೂಲಕ ವಿಶ್ವವನ್ನು ವ್ಯವಸ್ಥೆಗೊಳಿಸುವುದು ವಿಧಾತ ಕೆಲಸ. ಋತ ನಿಯಮವಾದರೆ, ವಿಧಾತ ನಿಯಮವನ್ನು ಜಾರಿಗೊಳಿಸುತ್ತದೆ.

ಉಪನಿಷತ್ತುಗಳು:

ಕ್ರಮೇಣ ಉಪನಿಷತ್‌ಗಳ ಕಾಲ ಬಂದಾಗಅಂದರೆ ಸಾಮಾನ್ಯ ಯುಗ ಪೂರ್ವ ಸುಮಾರು 700–200 ಅವಧಿಯಲ್ಲಿ ವಿಧಾತ ಯಾರಿಗೂ ಗೋಚರಿಸದ, ಸರ್ವಶಕ್ತ, ಸರ್ವವ್ಯಾಪಿಯಾದ ಬ್ರಹ್ಮನ್‌ ಆಗಿ ಪರಿವರ್ತಿತಗೊಳ್ಳುತ್ತದೆ.

ಮುಂಡಕ ಉಪನಿಷತ್ತಿ 1.1.9 ಶ್ಲೋಕವು ಸರ್ವೋಚ್ಚ ಬ್ರಹ್ಮನ ಸ್ವರೂಪವನ್ನು ವಿವರಿಸುತ್ತದೆ:

ಯಾರು ಸರ್ವಜ್ಞರೋ, ಜ್ಞಾನಸ್ವರೂಪರೋ, ಯಾರ ಜ್ಞಾನವೇ ತಪಸ್ಸಾಗಿದೆಯೋ, ಅದರಿಂದ ಬ್ರಹ್ಮ (ಹಿರಣ್ಯಗರ್ಭ), ನಾಮ, ರೂಪ, ಅನ್ನ ಜನಿಸುತ್ತವೆ.”

ಶ್ಲೋಕದ ಮೊದಲ ಭಾಗವು ನಿರ್ಗುಣ / ಅನಂತ ಬ್ರಹ್ಮ (Absolute Reality) ಹಾಗೂ ಜ್ಞಾನಾಗ್ನಿಯಾಗಿ (ತಪಸ್ಸು / Primordial Cosmic Energy) ಸೂಚಿಸಿದರೆ, ಎರಡನೇ ಭಾಗವು ಪರಬ್ರಹ್ಮನಿಂದ ಹುಟ್ಟಿಕೊಂಡ ಕಾರ್ಯಬ್ರಹ್ಮ / ಸಗುಣ ಬ್ರಹ್ಮವನ್ನು ಸೂಚಿಸುತ್ತದೆ.

ಋಗ್ವೇದ ಶ್ಲೋಕದಲ್ಲಿ ಋತವು ತಪಸ್ಸಿನಿಂದ ಸೃಷ್ಟಿಯಾಗಿದೆ ಎಂದು ಹೇಳಿದರೆ, ಉಪನಿಷತ್ತುಗಳಲ್ಲಿ ಅದನ್ನು ಪರಮಬ್ರಹ್ಮನೇ ಸೃಷ್ಟಿಸಿದನು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಧರ್ಮ:

ಋತ ಕ್ರಮಬದ್ಧತೆಯನ್ನು ನಡೆಸಿಕೊಂಡು ಬರಬೇಕಾದರೆ ಸ್ವರ್ಗದಲ್ಲಿ ದೇವತೆಗಳು ಹಾಗೂ ಭೂಲೋಕದಲ್ಲಿ ಮನುಷ್ಯರು ಧರ್ಮವನ್ನು ಪಾಲಿಸಬೇಕು. ಇಲ್ಲಿ ಧರ್ಮ  ಅಂದರೆ ಕರ್ತವ್ಯದ ಕ್ರಿಯೆಗಳು ಎಂಬ ಅರ್ಥದಲ್ಲಿ ಇದೆ, religion ಎಂಬ ಅರ್ಥದಲ್ಲಿ ಅಲ್ಲ.

ಬ್ರಹ್ಮಾಂಡದ ಋತ ಸ್ಥಿರವಾಗಿರಲು, ದೇವತೆಗಳು ಹೋಮ ಇತ್ಯಾದಿಗಳನ್ನು ಮಾಡಬೇಕು;  ಅಲ್ಲದೇ, ಭೂಲೋಕದಲ್ಲಿರುವ ಸಮಾಜ ಕೂಡಾ ಸ್ಥಿರವಾಗಿರಬೇಕು. ಸಮಾಜ ಸ್ಥಿರವಾಗಿರಲು ಅದರೊಳಗಿನ ಸದಸ್ಯರು ತಮ್ಮ ತಮ್ಮ ಧರ್ಮವನ್ನು ಪಾಲಿಸಬೇಕು. ಸ್ಥೂಲವಾಗಿ, ದೇವತೆಗಳು ಋತು, ಮಳೆ, ಗಾಳಿ, ನದಿ, ಸೂರ್ಯ, ನಕ್ಷತ್ರ ಇತ್ಯಾದಿಗಳ ಸಂಬಂಧಿತ ಬ್ರಹ್ಮಾಂಡದ ಮೂಲಭೂತ ನಿಯಮಗಳನ್ನು ಪಾಲಿಸಬೇಕು; ಮನುಷ್ಯನಿಗೆ ಧರ್ಮವೆಂದರೆ ನೈತಿಕ ಮತ್ತು ಸಾಮಾಜಿಕ ಕರ್ತವ್ಯಗಳ ಪಟ್ಟಿಯಾಗಿದೆ.

ನಿಯಮಗಳು ನಮ್ಮ ಸಾಮಾಜಿಕ ವರ್ತನೆಯನ್ನು ನಿಯಂತ್ರಿಸುತ್ತವೆ. ಅವು ವಯಸ್ಸು, ಲಿಂಗ, ಕೌಟುಂಬಿಕ ಸಂಬಂಧ, ಸ್ವಭಾವ, ವೃತ್ತಿ ಇತ್ಯಾದಿಗೆ ಅನುಗುಣವಾಗಿರುತ್ತವೆ. ಮುಖ್ಯವಾಗಿ ಇವೆಲ್ಲವೂ ವರ್ಣ ಪದ್ಧತಿಯ ಅನುಸಾರ ವ್ಯಾಖ್ಯಾನಗೊಂಡು, ಉಸಿರುಗಟ್ಟುವ ಜಾತಿ ಪದ್ಧತಿಯಲ್ಲಿ ವಿಕೃತಗೊಂಡಿವೆ.

ಬ್ರಾಹ್ಮಣರು ಮಾನವ ಮತ್ತು ದೈವಿಕ ಲೋಕಗಳ ನಡುವೆ ಬೇರೆಯಾರಿಗೂ ಲಭ್ಯವಿರದ ವೈದಿಕ ಮಂತ್ರಗಳ ಮಾರ್ಗಗಳನ್ನು ತೆರೆದಿಡುತ್ತಾರೆ. ಯಜ್ಞಹೋಮಗಳನ್ನು ಮಾಡಿ ಋತವನ್ನು ಪೂಜಿಸುವವರು. ಕ್ಷತ್ರಿಯರು ನ್ಯಾಯಯುತ ಆಳ್ವಿಕೆ ಮತ್ತು ಜನರ ರಕ್ಷಣೆಯ ಮೂಲಕ ಧರ್ಮವನ್ನು ಎತ್ತಿಹಿಡಿಯುತ್ತಾರೆ. ಮಳೆ ಸಕಾಲಕ್ಕೆ ಬಂದಾಗ, ಬೆಳೆಗಳು ಬೆಳೆದಾಗ, ಋತ ಸ್ಪಷ್ಟವಾಗಿ ಗೋಚರಿಸುತ್ತದೆ. ವೈಶ್ಯ ಕೃಷಿ ಮತ್ತು ವ್ಯಾಪಾರವು ಋತ ಭೌತಿಕ ಅಭಿವ್ಯಕ್ತಿಯನ್ನು ಕಾಯ್ದುಕೊಳ್ಳುತ್ತದೆ. ಶೂದ್ರ ಧರ್ಮವೆಂದರೆ ಪರಿಚರ್ಯೆ (ಸೇವೆ).

ಗುಣಗಳ ಆಧಾರದ ಮೇಲೆ ಆರಂಭವಾದ ವಿಂಗಡನೆ, ನಂತರ ಹುಟ್ಟಿನ ಆಧಾರಕ್ಕೆ ತಿರುಗಿ, ತನ್ನ ಕುಲಕಸುಬುಗಳನ್ನು ಬದಲಿಸಲಾಗದೇ, ಸಮಾಜವೇ ಶ್ರೇಣೀಕರಣಗೊಂಡಿತು. ಇದು ಋತ ಹೆಸರಿನಲ್ಲಿ ಮನುಷ್ಯ ಮನುಷ್ಯನ ಮೇಲೆ ನಡೆಸಿದ ಮಹಾನ್‌ ದ್ರೂಹ! ಇದು ಅಧರ್ಮ, ಯಾಕೆಂದರೆ ಇಲ್ಲಿ ಧರ್ಮದ ಹೆಸರಿನಲ್ಲಿ ಋತವನ್ನೇ ಉಲ್ಲಂಘಿಸಲಾಗಿದೆ.

ಭಾರತೀಯ ಸಿನಿಮಾಗಳ ಮೆಟಾ-ನೆರೇಟಿವ್‌ (Meta Narrative – ಮಹಾ ಕಥನ):

ನಮಗೆಲ್ಲರಿಗೂ ಗೊತ್ತಿರುವಂತೆ, ಇಂತಹ ಒಂದು ಸಾಮಾಜಿಕ ಕ್ರಮ (Social Order) ನಮ್ಮಲ್ಲಿ ಪ್ರಬಲ ಸಿದ್ಧಾಂತವಾಗಿದೆ- ಭಾರತದ Meta Narrative. ಅದಕ್ಕೆ ತದ್ವಿರುದ್ಧವಾಗಿ ತೋರುವ ಬೌದ್ಧ, ಜೈನ, ಬಸವ, ಸಿಖ್‌, ಮೂಲನಿವಾಸಿ ಮುಂತಾದವರ ತತ್ವಗಳು ಮತ್ತು ಅವುಗಳ ಸಾಮಾಜಿಕ ಕ್ರಮಗಳು Minor Narratives ಆಗಿ ಉಳಿದುಬಿಟ್ಟಿವೆ.

ಭಾರತೀಯ ಸಿನಿಮಾ ಭರತಖಂಡದ ಮೂಲಭೂತ ರಾಜಕೀಯವನ್ನು ಎಷ್ಟರ ಮಟ್ಟಿಗೆ ಹಿಡಿದು ತೋರಿಸಿದೆ ಎಂಬುದು ಒಂದು ಪ್ರಶ್ನೆ. “ಎಷ್ಟರ ಮಟ್ಟಿಗೆಅನ್ನುವುದಕ್ಕಿಂತಯಾವ ರೀತಿಯಲ್ಲಿಎಂದು ಕೇಳುವುದು ಹೆಚ್ಚು ಸೂಕ್ತ.

ಬಹುಶಃ ನಾವು ತಯಾರಿಸುವ 99% ಸಿನಿಮಾಗಳು ಪ್ರಬಲ ಸಿದ್ಧಾಂತವನ್ನು ಬಲಪಡಿಸುವ ಚಲನಚಿತ್ರಗಳೇ ಆಗಿವೆ. ಕೊಮೊಲ್ಲಿ ಮತ್ತು ನಾರ್ಬೋನಿ (Comolli and Narboni) ಇಂತಹ ಸಿನಿಮಾಗಳನ್ನು ತಮ್ಮ ವಿಂಗಡನೆಯ ಮೊದಲ ವಿಭಾಗದಲ್ಲೇ ಪರಿಚಯಿಸಿದ್ದಾರೆಪ್ರಬಲ ಸಿದ್ಧಾಂತವನ್ನು ಬಲಪಡಿಸುವ ಚಲನಚಿತ್ರಗಳು.”

ಈವಾ ಮಝಿಯರ್ಸ್ಕಾ (Ewa Mazierska) ಇವುಗಳನ್ನು ಅನುಸರಣಾತ್ಮಕ (Conformist) ಸಿನಿಮಾಗಳು ಎಂದು ಕರೆಯುತ್ತಾರೆ.

ಮುಂದುವರಿಯುತ್ತದೆ...

ಭಾಗ ೦೪


No comments:

Post a Comment