Wednesday, June 24, 2026

ಚಲನಚಿತ್ರಗಳ ರಾಜಕೀಯ ನೆರಳುಗಳು - 05

 

The Birth of a Nation

ಪ್ರಬಲ ಸಿದ್ಧಾಂತದ ಸಿನಿಮೀಯ ಭಾಷೆ

ಪ್ರಬಲ ಸಿದ್ಧಾಂತವು ಜನರ ಸಂವೇದನಾಶೀಲತೆಯ lowest common denominator ಅನ್ನು ಬಳಸಿಕೊಂಡು ತನ್ನದೇ ಆದ ಒಂದು ಭಾಷೆಯನ್ನು ರೂಪಿಸಿಕೊಳ್ಳುತ್ತದೆ. ಭಾಷೆಗೆ ಸ್ಪಂದಿಸಲು ಜನರಿಗೆ ಹೆಚ್ಚು ಆಲೋಚನೆ ಮಾಡುವ ಅಗತ್ಯವಿರುವುದಿಲ್ಲ. ಅದಲ್ಲದೆ, ಪ್ರಬಲ ಸಿದ್ಧಾಂತವು ಹೀಗೆ ಬೆಳೆಸಿಕೊಂಡ ಭಾಷೆಯನ್ನು ತನಗೆ ಲಭ್ಯವಿರುವ ಅಪಾರ ಸಾಧನೆ ಹಾಗೂ ಸಂಪನ್ಮೂಲಗಳ ಮೂಲಕ ಜನರ ಮೇಲೆ ಸತತವಾಗಿ ಹೇರುತ್ತಲೇ ಇರುತ್ತದೆ.

ಇದು ಎಲ್ಲಿಯವರೆಗೆ ಬಂದು ತಲುಪಿದೆ ಅಂದರೆ ಭಾಷೆ/ರೂಪವನ್ನು ಬಳಸದೇ ಇರುವ ಚಲನಚಿತ್ರಗಳು, ಚಲನಚಿತ್ರಗಳೇ ಅಲ್ಲ ಎಂಬ ಅಭಿಪ್ರಾಯ ಹುಟ್ಟಿಕೊಂಡ ಪರಿಸ್ಥಿತಿ ಬಂದಿದೆ. ಸಾಮಾನ್ಯವಾಗಿ ಪ್ರಬಲ ಸಿದ್ಧಾಂತದ ಸಿನಿಮಾಗಳ ನಿರೂಪಣೆಯು Dramatic Narrative (ನಾಟಕೀಯ ನಿರೂಪಣೆ) ಶೈಲಿಯಲ್ಲಿದ್ದು, ಅದರ ಸಿನಿಮೀಯ ಭಾಷೆ Classical Decoupage (ಕ್ಲಾಸಿಕಲ್‌ ಡೆಕ್ಯಪಾಜ್‌) ಆಗಿರುತ್ತದೆ.

Dramatic Narrative (ನಾಟಕೀಯ ನಿರೂಪಣೆ):

Dramatic Narrative ಶೈಲಿಯಲ್ಲಿ ಅರಿಸ್ಟಾಟಲ್‌ (Aristotle) ಹೇಳಿರುವ Unity of Action (ಕ್ರಿಯೆಯ ಏಕತೆ) ಅವಲಂಬನೆ ಇದೆ.

ಉದಾಹರಣೆಗೆ, 1972ರಲ್ಲಿ ಬಿಡುಗಡೆಯಾದ Godfather ಚಿತ್ರದ ಏಕ ಕ್ರಿಯೆ ಹೀಗಿದೆತನ್ನ ಕುಟುಂಬದ ಅಕ್ರಮ ವ್ಯವಹಾರಗಳಿಂದ ದೂರವಿರಲು ಬಯಸುವ ಮೈಕಲ್ ಕೊರ್ಲಿಯೋನ್‌ (Michael Corleone), ತನ್ನ ತಂದೆಯ ಮೇಲಿನ ಘಾತಕ ಹಲ್ಲೆಯ ನಂತರ ಅನಿವಾರ್ಯವಾಗಿ ಮಾಫಿಯಾ ಜಗತ್ತನ್ನು ಪ್ರವೇಶಿಸಿ, ಕೊನೆಗೆ ಅತ್ಯಂತ ಕ್ರೂರ ಡಾನ್‌ ಆಗಿ ಪರಿವರ್ತನೆಗೊಳ್ಳುತ್ತಾನೆ.

ಕಟ್ಟುನಿಟ್ಟಿನ ಚೌಕಟ್ಟಿನೊಳಗೆ ಹಲವಾರು ಪುಟ್ಟ ಘಟನೆಗಳು ನಡೆಯುತ್ತವೆ. ಒಂದು ಕ್ರಿಯೆ ಮುಗಿದಾಗ ಅದು ನೇರವಾಗಿ ಮುಂದಿನ ಪರಿಣಾಮವನ್ನು ಸೃಷ್ಟಿಸುತ್ತದೆ; ಪರಿಣಾಮದಿಂದ ಮತ್ತೊಂದು ಕ್ರಿಯೆ ಹುಟ್ಟುತ್ತದೆ; ಮತ್ತದರಿಂದ ಮತ್ತೊಂದು ಪರಿಣಾಮ ಮತ್ತು ಕ್ರಿಯೆ. ಹೀಗೆ Cause and Effect ಸರಪಳಿಯಂತೆ ತಾರ್ಕಿಕವಾಗಿ ಮುಂದುವರಿಯುವ ಘಟನೆಗಳ ಸರಣಿಘರ್ಷಣೆಗಳು ಚಲನಚಿತ್ರದ ಏಕ ಕ್ರಿಯೆ ಕೊನೆಯವರೆಗೆ ಪ್ರೇಕ್ಷಕರನ್ನು ಕೊಂಡೊಯ್ಯುತ್ತವೆ.

ಅದರೊಂದಿಗೆ, ಈ ಪ್ರಗತಿ ಪ್ರೇಕ್ಷಕರಲ್ಲಿ ಭಾವನಾತ್ಮಕ ಅಂಶವನ್ನು ಹಂತ ಹಂತವಾಗಿ ಹೆಚ್ಚಿಸುತ್ತವೆ. ವ್ಯವಸ್ಥೆ ಪ್ರೇಕ್ಷಕರನ್ನು ಅಂಕುಶದಿಂದ ಹಿಡಿದು ಮಾರ್ಗದರ್ಶನ ಮಾಡುತ್ತಾ, ಕೊನೆಯಲ್ಲಿ ಏಕ ಕ್ರಿಯೆ ಮುಗಿದು ಕ್ಯಾಥರ್ಸಿಸ್‌ (Catharsis) /  ಭಾವವಿರೇಚನೆ ಅನುಭವವಾದ ಮೇಲೆಯೇ ಅವರನ್ನು ಬಂಧನಮುಕ್ತರನ್ನಾಗಿ ಮಾಡುತ್ತದೆ.

ಶೈಲಿ ಪ್ರಚಾರ ಸಿನಿಮಾಗಳಿಗೆ (Propaganda Cinema) ಹೇಳಿ ಮಾಡಿಸಿದಂತದ್ದು ಎಂಬ ಅನುಮಾನ ಬಂದರೆ, ಅದು ಸಹಜ. Dramatic Narrative (ನಾಟಕೀಯ ನಿರೂಪಣೆ) ಶೈಲಿಗೆ ಹೊಂದುವಂತಹ ಸಿನಿಮಾ ಭಾಷೆಯೊಂದಿದ್ದರೆ ಅದು Classical Decoupage (ಕ್ಲಾಸಿಕಲ್‌ ಡೆಕ್ಯುಪಾಜ್‌) ಆಗಿರುತ್ತದೆ.

ಡೆಕ್ಯುಪಾಜ್‌ ಪದದ ಮೂಲ:

ಡೆಕ್ಯುಪಾಜ್‌ ಫ್ರೆಂಚ್ ಭಾಷೆಯ ಪದ. "ದೆಕೂಪೆ" (découper) ಎಂದರೆ "ಕತ್ತರಿಸುವುದು" ಅಥವಾ “ವಿಭಜಿಸಿ ತೆಗೆಯುವುದು". ಸಾಮಾನ್ಯ ಬಳಕೆಯಲ್ಲಿ ಡೆಕ್ಯುಪಾಜ್‌ ಅಂದರೆ ವಸ್ತುಗಳನ್ನು ಅಲಂಕರಿಸುವ ಒಂದು ಕಲೆಯಾಗಿದೆ. ಚಿತ್ರಗಳು, ಕಾಗದದ ತುಂಡುಗಳು ಅಥವಾ ತೆಳುವಾದ ಪ್ಲಾಸ್ಟಿಕ್‌ ಹಾಳೆಗಳನ್ನು ಕತ್ತರಿಸಿ ಅವುಗಳನ್ನು ಮರದ, ಗಾಜು, ಲೋಹ, ಪ್ಲಾಸ್ಟಿಕ್ ಮುಂತಾದ ವಸ್ತುಗಳ ಮೇಲೆ ಅಂಟಿಸಿ ನಂತರ ಅವುಗಳನ್ನು ವಾರ್ನಿಷ್ ಮಾಡುವುದು. ಅಂಟಿಸಿದ ಅಲಂಕಾರಿಕ ತುಂಡುಗಳು ಚಿತ್ರ ಬರೆದಂತೆ ಕಾಣುತ್ತವೆ.

ಚಲನಚಿತ್ರಗಳಲ್ಲಿ ಡೆಕ್ಯುಪಾಜ್‌:

ಚಲನಚಿತ್ರಗಳಲ್ಲಿ ಡೆಕ್ಯುಪಾಜ್ ಎಂದರೆ ಚಿತ್ರಕಥೆಯನ್ನು ಚಿತ್ರೀಕರಣಕ್ಕೆ ಸಿದ್ಧಪಡಿಸುವ ಒಂದು ವಿಧಾನ. ಚಿತ್ರಕಥೆಯಲ್ಲಿ ಬರೆದ ಒಂದು ಘಟನೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಾಗೂ ಒಂದು ನಿರ್ದಿಷ್ಟ ಕಾಲದೊಳಗೆ ಘಟಿಸುತ್ತದೆ. ಚಿತ್ರೀಕರಣಕ್ಕೂ ಮುಂಚೆಯೇ ಘಟನೆಗಳನ್ನು ವಿವಿಧ ಶಾಟ್‌ಗಳಾಗಿ (shots) ʼಕತ್ತರಿಸಿʼ ಅಥವಾ ʼವಿಭಜಿಸಿ ತೆಗೆಯುವʼ ಪ್ರಕ್ರಿಯೆಗೆ ಸಿನಿಮಾದ ಪರಿಭಾಷೆಯಲ್ಲಿ ಡೆಕ್ಯುಪಾಜ್ ಎಂದು ಕರೆಯಲಾಗುತ್ತದೆ. ಇಲ್ಲಿ ಕತ್ತರಿಸಿ ತೆಗೆಯುವುದು ಘಟನೆಯ ಉಪ ಘಟಕಗಳನ್ನು (sub-units). ಅಥವಾ ಇನ್ನೊಂದು ಅರ್ಥದಲ್ಲಿ ಘಟನೆ ನಡೆಯುವ ಸ್ಥಳ ಹಾಗೂ ಕಾಲದ ಉಪ ಘಟಕಗಳನ್ನು. ಯಾವ ಶಾಟ್ ಯಾವ ರೀತಿ ತೆಗೆಯಬೇಕು, ಕ್ಯಾಮೆರಾ ಚಲನೆ ಹೇಗಿರಬೇಕು, ನಟರ ಸ್ಥಾನ, ಫ್ರೇಮಿಂಗ್, ಧ್ವನಿಗಳು ಇತ್ಯಾದಿ ಎಲ್ಲವನ್ನೂ ಯೋಚಿಸುವುದೇ ಡೆಕ್ಯುಪಾಜ್.

Classical Decoupage (ಕ್ಲಾಸಿಕಲ್‌ ಡೆಕ್ಯುಪಾಜ್‌):

Classical Decoupage (ಕ್ಲಾಸಿಕಲ್‌ ಡೆಕ್ಯುಪೇಜ್) ಎಂಬುದು ಚಲನಚಿತ್ರ ನಿರ್ಮಾಣದ ಹಾಲಿವುಡ್ ಶೈಲಿಯ ಭಾಷೆ. 1915 ಇಸವಿಯಲ್ಲಿ ಡಿ. ಡಬ್ಲ್ಯೂ. ಗ್ರಿಫಿತ್ (D.W. Griffith) ಎಂಬ ಅಮೇರಿಕನ್‌ ನಿರ್ದೇಶಕ ʼಧಿ ಬರ್ತ್‌ ಆಫ್‌ ಎ ನೇಶನ್‌ʼ (The Birth of a Nation) ಎಂಬ  ವರ್ಣಭೇದ ನೀತಿಯನ್ನು ಪ್ರತಿಪಾದಿಸುವ (Racist) ಚಲನಚಿತ್ರವನ್ನು ತಯಾರಿಸಿ, ಅದರಲ್ಲಿ ಈ ರೀತಿಯ ಸಿನಿಮೀಯ ಭಾಷೆಯ ರೂಪರೇಖೆಗಳನ್ನು ಜನರ ಮುಂದೆ ಬಿಚ್ಚಿಟ್ಟದರು. ಈ ಶೈಲಿಯಲ್ಲಿ ಘಟನೆಯ ವಿಭಜನೆಯು ಹೇಗಿರಬೇಕೆಂದರೆ ವೀಕ್ಷಕರು ಶಾಟ್ ಗಳನ್ನು ಗಮನಿಸಲೇಬಾರದು. ಅವು ಅದೃಶ್ಯವಾಗಿದ್ದರೆ ಮಾತ್ರ ಕಥೆ ಸ್ವಾಭಾವಿಕವಾಗಿ ಮುಂದೆ ಹರಿಯುತ್ತದೆ. ವಿಭಜಿಸಿದ ಘಟನೆಯನ್ನು ಮತ್ತೆ ಜೋಡಿಸಿದಾಗ ಘಟನೆಯ ನಿರಂತರತೆ (Continutiy) ಕಾಪಾಡಿಕೊಂಡಂತಿರಬೇಕು. ನಾವು ನಿಜ ಜೀವನದಲ್ಲಿ ಯಾವ ಆಧಾರದ ಮೇಲೆ ಘಟನೆಗಳ ಕೆಲವೇ ಭಾಗಗಳನ್ನು ನೋಡಿ ಘಟನೆಗಳ ಸಂಪೂರ್ಣತೆಯನ್ನು ಗ್ರಹಿಸುತ್ತೇವೆಯೋ, ಚಲನಚಿತ್ರದ Decoupage (ಡೆಕ್ಯುಪೇಜ್) ಕೂಡಾ ಹಾಗೇ ಮಾಡುವಂತಿರಬೇಕು.

ಮಾನವ ಗುಣದ ಅನುಕರಣೆ:

ನಮ್ಮ ಕಣ್ಣು ಮತ್ತು ಮನಸ್ಸುಗಳು ನಮಗೆ ಆಸಕ್ತಿ ಹುಟ್ಟಿಸುವ ಅಥವಾ ಆಕರ್ಷಿಸುವ ವಿಷಯಗಳನ್ನು ಮಾತ್ರ ನೋಡುತ್ತವೆ ಮತ್ತು ಗ್ರಹಿಸುತ್ತವೆ.; ಘಟನೆಗಳ ಕೆಲವೇ ಭಾಗಗಳನ್ನು ನೋಡಿ ಸಂಪೂರ್ಣತೆಯನ್ನು ಗ್ರಹಿಸುತ್ತೇವೆ. Decoupage ಕೂಡಾ ಅದೇ ರೀತಿಯಲ್ಲಿ ಕೆಲಸ ಮಾಡುತ್ತದೆ.

ಉದಾಹರಣೆಗೆ:

· ಮಾಲ್‌ನಲ್ಲಿ ಜನಸಮೂಹದ ವಿಶಾಲ ದೃಶ್ಯವನ್ನು ನೋಡುತ್ತಿದ್ದರೂ, ಒಬ್ಬಂಟಿಯಾಗಿ ಆಡುತ್ತಿರುವ ಮುದ್ದಾದ ಪುಟ್ಟ ಮಗು ಕಂಡುಬಂದರೆ ನಮ್ಮ ಗಮನ ತಕ್ಷಣ ಮಗುವಿನತ್ತ ಹರಿಯುತ್ತದೆ.

·        ತಾಯಿ ಬಂದು ಮಗುವನ್ನು ಎತ್ತಿಕೊಂಡಾಗ ಗಮನ ತಾಯಿಯತ್ತ ತಿರುಗುತ್ತದೆ.

·        ಅವರು ಹೊರಟು ಹೋದ ನಂತರ ಮತ್ತೆ ಜನಸಮೂಹದ ದೃಶ್ಯಕ್ಕೆ ಗಮನ ಹಿಂತಿರುಗುತ್ತದೆ.

Classical Decoupage ಶೈಲಿಯಲ್ಲಿ ಘಟನೆ ವಿಭಜನೆಯು ಮಾನವ ಸ್ವಭಾವವನ್ನು ಅನುಕರಿಸುತ್ತದೆ. ಹಾಗಾಗಿ ಸಿನಿಮೀಯ ಭಾಷೆ ಪ್ರೇಕ್ಷಕರನ್ನು ಘಟನೆಯೊಳಗೆ ಸಂಪೂರ್ಣವಾಗಿ ತಲ್ಲೀನಗೊಳಿಸುತ್ತದೆ.

ಚಿತ್ರ ತಯಾರಕರು ಪ್ರೇಕ್ಷಕರು ಏನನ್ನು ನೋಡಬೇಕೆಂದು ಬಯಸುತ್ತಾರೋ, ಅದನ್ನು ಅವರು ಸಂಪೂರ್ಣವಾಗಿ ಅನುಭವಿಸುವಂತೆ ಮಾಡುತ್ತಾರೆ. ಹಾಗಾಗಿ, ಈ ಭಾಷೆ ಕೂಡಾ ಪ್ರಚಾರ ಸಿನಿಮಾಗಳಿಗೆ (Propaganda Cinema) ಹೇಳಿ ಮಾಡಿಸಿದಂತಿದೆ.

ಮುಂದುವರಿಯುವುದು...

ಭಾಗ ೦೬

ಚಲನಚಿತ್ರಗಳ ರಾಜಕೀಯ ನೆರಳುಗಳು - 04

 

Carol Hanisch

ಗುರುತಿಸಲ್ಪಟ್ಟ ಸಿನಿಮಾಗಳು:

ಜಾಗತಿಕ ಸಿನಿಮಾರಂಗದಲ್ಲಿ ಅನೇಕ ಪ್ರಭಾವಶಾಲಿ ಚಲನಚಿತ್ರಗಳು ಹಲವು ಭವ್ಯ ನಿರೂಪಣೆಗಳಿಗೆ (ಮೆಟಾ-ನೆರೇಟಿವ್ / ಗ್ರ್ಯಾಂಡ್ ನರೇಟಿವ್ – Jean-François Lyotard, 1979, The Postmodern Condition) ರೂಪ ಕೊಟ್ಟಿವೆ.

·        1905ರಲ್ಲಿ ರಷ್ಯಾ ಮೊದಲ ಕ್ರಾಂತಿಯ ಸಮಯದಲ್ಲಿ ನಡೆದ ಯುದ್ಧನೌಕೆಯ ದಂಗೆಯ ಬಗ್ಗೆ ಸೆರ್ಗೆಯಿ ಐಸೆನ್‌ಸ್ಟೈನ್‌ (Sergei Eisenstein) 1925ರಲ್ಲಿ Battleship Potemkin ತಯಾರಿಸಿದರು.

·        ಗಿಲ್ಲೊ ಪಾಂಟೆಕೊರ್ವೊ (Gillo Pontecorvo) 1966ರಲ್ಲಿ ತಯಾರಿಸಿದ The Battle of Algiers 1950 ದಶಕದಲ್ಲಿ ಅಲ್ಜೀರಿಯಾ ದೇಶವು ಫ್ರಾನ್ಸ್‌ ವಸಾಹತುಶಾಹಿ ಆಡಳಿತದಿಂದ (French colonialism) ಸ್ವಾತಂತ್ರ್ಯ ಪಡೆಯಲು ನಡೆಸಿದ ಹೋರಾಟದ ಕಥೆಯನ್ನು ಹೇಳುತ್ತದೆ.

·        ಬರ್ನಾರ್ಡೊ ಬರ್ಟೊಲುಚ್ಚಿ (Bernardo Bertolucci) ನಿರ್ದೇಶನದ The Last Emperor (1987), ಚೀನಾ ಕೊನೆಯ ಚಕ್ರವರ್ತಿ ಐಸಿನ್-ಜಿಯೋರೋ ಪುಯಿ (Aisin-Gioro Puyi) ಅವರ ಜೀವನವನ್ನು ಆಧರಿಸಿದ ಚಿತ್ರವಾದರೂ, ಇದು ಚೀನಾ ರಾಜ ಪ್ರಭುತ್ವ (Monarchy) ಆಳ್ವಿಕೆಯಿಂದ ಕಮ್ಯುನಿಸ್ಟ್ ರಾಜ್ಯವಾಗಿ ಬದಲಾದ ಐತಿಹಾಸಿಕ ಘಟ್ಟವನ್ನು ಬಿಂಬಿಸುತ್ತದೆ.

·        2021ರಲ್ಲಿ ರೊಮೇನಿಯಾ ರಾಡು ಜುದೇ (Radu Jude) ನಿರ್ದೇಶಿಸಿದ Bad Luck Banging or Loony Porn ಇಂಟರ್ನೆಟ್ ಹಾಗೂ surveillance ಯುಗದಲ್ಲಿ ವೈಯಕ್ತಿಕ ನೈತಿಕತೆ ಮತ್ತು ಸಾಂಸ್ಥಿಕ ನಿರೂಪಣೆಗಳ ನಡುವಿನ ಸಂಘರ್ಷವನ್ನು ಅನ್ವೇಷಿಸುತ್ತದೆ.

ಹೀಗೆ ಹಲವಾರು ಉದಾಹರಣೆಗಳಿವೆ.

ಗುರುತಿಸಲ್ಪಡದ ಸಿನಿಮಾಗಳು:

ಆದರೆ, ರಾಜಕೀಯ ಸಿನಿಮಾ ಅಂದರೆ ಸಿನಿಮಾಗಳ ವಸ್ತುಗಳು ಋತ, ಫ್ರೆಂಚ್‌ ಕ್ರಾಂತಿ, ಜಾಗತೀಕರಣ, ನಿಯೋ-ಲಿಬರಲಿಸಂ ಅಥವಾ ಇತರ ರಾಜಕೀಯ ವಿಷಯಗಳ ಬಗ್ಗೆ ವಾಚ್ಯವಾಗಿ ಇರಲೇಬೇಕೆಂದಿಲ್ಲ.

·        ಕಚೇರಿಯೊಂದರಲ್ಲಿ ಗಂಡುಹೆಣ್ಣಿನ ನಡುವೆ ಬೆಳೆಯುತ್ತಿರುವ ಪ್ರೀತಿ,

·        ಶಾಲೆಯ ಹುಡುಗನೊಬ್ಬನು ತನ್ನ ಸಹಪಾಠಿಯ ಪುಸ್ತಕ ಹಿಂದಿರುಗಿಸಲು ಒಂದು ಸಾಯಂಕಾಲವಿಡೀ ಮಾಡುವ ಮನೆಯ ಹುಡುಕಾಟ,

·        ಅಲೆಮಾರಿ ನಾಯಿಯೊಂದು ಒಂಟಿ, ಅಸಂತುಷ್ಟ ಮನುಷ್ಯನೊಂದಿಗೆ ಬೆಳೆಸುವ ಸ್ನೇಹ ಸಂಬಂಧ,

·        ಗಂಡಹೆಂಡತಿಯರ ಸಾಂಸಾರಿಕ ಜೀವನ

ಇಂತಹ ಹಲವಾರು ಸಾಮಾನ್ಯ ದೈನಂದಿನ ಚಟುವಟಿಕೆಗಳು ಕೂಡಾ ಹೆಚ್ಚಿನ ಚಿತ್ರಗಳ ಕಥಾವಸ್ತುಗಳಾಗಿವೆ. ಮೊದಲ ನೋಟಕ್ಕೆ ಇವು ರಾಜಕೀಯ ರಹಿತವಾದ ಕಥಾವಸ್ತುಗಳಂತೆ ಕಾಣಬಹುದು.

"The Personal Is Political" (ವೈಯಕ್ತಿಕವೇ ರಾಜಕೀಯವಾಗಿದೆ)

1960–70 ದಶಕದ ಅಮೆರಿಕ ದ್ವಿತೀಯ ಅಲೆಯ ಸ್ತ್ರೀವಾದಿ ಚಳುವಳಿಯಲ್ಲಿ ಕ್ಯಾರಲ್ ಹ್ಯಾನಿಷ್‌ (Carol Hanisch) ಅವರ The Personal Is Political ಎಂಬ ಲೇಖನ ವ್ಯಾಪಕವಾಗಿ  ಓದಲ್ಪಟ್ಟಿತು. ಇದರ ತಿರುಳು ಏನೆಂದರೆವೈಯಕ್ತಿಕವೆಂದು ತಿಳಿಯುವಂತಹ ನಮ್ಮ ದೈನಂದಿನ ಜೀವನದ ಸಮಸ್ಯೆಗಳು ಸಮಾಜದ ರಚನೆ, ಅಧಿಕಾರ ಸಂಬಂಧಗಳು ಮತ್ತು ರಾಜಕೀಯದಿಂದಲೇ ಉಂಟಾಗುತ್ತವೆ. ಆದ್ದರಿಂದ ಅವುಗಳನ್ನು ಕೇವಲ ವೈಯಕ್ತಿಕ ಸಮಸ್ಯೆ ಎಂದು ತಳ್ಳಿಹಾಕದೆ, ರಾಜಕೀಯ ಸಮಸ್ಯೆಗಳಾಗಿ ನೋಡಬೇಕು.

ಉದಾಹರಣೆಗೆ, ಮನೆಯಲ್ಲಿ ಹೆಂಗಸರ ಮೇಲಿನ ಹಿಂಸೆಯನ್ನು ಕೇವಲಕುಟುಂಬದ ವಿಷಯಎಂದು ನೋಡದೆ, ಅದು ಪಿತೃಪ್ರಧಾನ ಸಮಾಜದ ರಾಜಕೀಯವೇ ಎಂದು ಗುರುತಿಸುವುದು. ಸಿದ್ಧಾಂತವು ಸ್ತ್ರೀವಾದಕ್ಕೆ (Feminism) ಮಾತ್ರ ಸೀಮಿತವಾಗಿರದೆ, ನಮ್ಮ ದೈನಂದಿನ ಬದುಕಿನ ಎಲ್ಲಾ ಖಾಸಗಿ ನಿರ್ಧಾರಗಳಿಗೆ ಅನ್ವಯಿಸುತ್ತದೆ.

ಸಮಸ್ಯೆಗಳನ್ನು ಬಗೆಹರಿಸಲು ನಾವು ಮೊದಲು ಮಾಡಬೇಕಾದದ್ದು ರಾಜಕೀಯ ವ್ಯವಸ್ಥೆಯೊಂದರೊಳಗಿನ ನಮ್ಮ ಇರುವಿಕೆಯನ್ನು (Being) ಗಮನಿಸಿ ಗುರುತಿಸಿಕೊಳ್ಳುವುದು. ಉದಾಹರಣೆಗೆ:

·        ಕೆಲಸದ ಸ್ಥಳದಲ್ಲಿ ಅಸಮಾನ ವೇತನ ಅಥವಾ ಕಚೇರಿಯಲ್ಲಿ ಕಿರುಕುಳವನ್ನು, ಕಚೇರಿ ವ್ಯವಸ್ಥೆಯಲ್ಲಿನ ನ್ಯೂನತೆಯಾಗಿ ನೋಡುವುದು.

·        ನಮ್ಮ ಜೀವನಶೈಲಿನಾವು ಏನು ತಿನ್ನುತ್ತಿದ್ದೇವೆ ಹಾಗೂ ಬಳಸುತ್ತಿದ್ದೇವೆ ಎಂಬುದು ಪರಿಸರದ (Environment) ಮೇಲೆ ಪರಿಣಾಮ ಬೀರುತ್ತದೆ ಎಂದು ಗ್ರಹಿಸುವುದು.

·        ಒಬ್ಬ ವ್ಯಕ್ತಿಯ ಹೆಸರು, ಆಹಾರ ಪದ್ಧತಿ, ವಾಸಸ್ಥಳ, ಮಾನಸಿಕ ಸ್ಥಿತಿ ಅಥವಾ ಮದುವೆ ನಿರ್ಧಾರಗಳು ಸಾಮಾಜಿಕ ಜಾತಿ ಶ್ರೇಣೀಕರಣದಿಂದ (Caste System) ಪ್ರಭಾವಿತವಾಗಿರುವುದು.

·        ಲಿಂಗ ಗುರುತನ್ನು (Gender Identity) ಬಚ್ಚಿಟ್ಟುಕೊಳ್ಳಬೇಕಾದ ಸನ್ನಿವೇಶ ಕಾನೂನಿನಿಂದಲೇ ಉದ್ಭವವಾಗಿರುವುದು.

ವೈಯಕ್ತಿಕವಾದದ್ದು ರಾಜಕೀಯವೇ ಎಂದು ನಾವು ಅರ್ಥಮಾಡಿಕೊಂಡರೆ, ಎಲ್ಲಾ ಸಿನಿಮಾಗಳೂ ರಾಜಕೀಯದಿಂದಲೇ ತುಂಬಿರುತ್ತವೆ ಎಂಬ ತೀರ್ಮಾನಕ್ಕೆ ಬರಲೇಬೇಕಾಗುತ್ತದೆ.

ಎಲ್ಲಾ ಸಿನಿಮಾಗಳೂ ರಾಜಕೀಯವಾಗಿವೆ ಎಂದಾದರೆ, ಮುಂದಿನ ತಾರ್ಕಿಕ ಹಂತಸಿನಿಮಾಗಳಲ್ಲಿ ಕಾಣಸಿಗುವ ರಾಜಕೀಯದ ಬಗ್ಗೆ ಸಿನಿಮಾದ ತಯಾರಕರ ನಿಲುವು ಏನೆಂಬುದನ್ನು ಗುರುತಿಸುವುದು. ಇಂತಹ ನಿಲುವುಗಳು ನಿರ್ದೇಶಕರ ಪ್ರಜ್ಞಾಪೂರ್ವಕವಾಗಿ ಸಿನಿಮಾದ ಪಠ್ಯದೊಳಗೆ ಬಿಂಬಿಸಿರಬಹುದು ಅಥವಾ ಸುಪ್ತಪ್ರಜ್ಞೆಯಿಂದ ತಾನಾಗಿಯೇ ವ್ಯಕ್ತವಾಗಿರಬಹುದು.

ಇಲ್ಲಿ ಪಠ್ಯ ಅಂದರೆ ಬರೀ ಸಿನಿಮಾದ ಕಥೆ, ಪ್ಲಾಟ್‌ ಅಥವಾ ಘಟನೆಗಳ ಉಲ್ಲೇಖವಲ್ಲ; ಅವುಗಳನ್ನು ಹೇಳುವ ಶೈಲಿ, ರೂಪ ಮತ್ತು ಒಟ್ಟು ಸಿನಿಮಾ ಭಾಷೆಯೂ ಆಗಿದೆ. “ನಾವು ಏನನ್ನು ಹೇಳುತ್ತಿದ್ದೇವೆಮತ್ತುಅದನ್ನು ಹೇಗೆ ಹೇಳುತ್ತಿದ್ದೇವೆ” – ಇವೆರಡಕ್ಕೂ ಸಂಬಂಧವಿದೆ. ಕೊಮೊಲ್ಲಿ (Comolli) ಮತ್ತು ನಾರ್ಬೋನಿ (Narboni) ಕೂಡಾ ಭಾಷೆಯ ಬಳಕೆಯಲ್ಲೇ ರಾಜಕೀಯ ಅಡಗಿದೆ ಎಂದು ಹೇಳಿದ್ದಾರೆ. ಈವಾ ಮಝಿಯರ್ಸ್ಕಾ (Ewa Mazierska) ಮಾಡಿರುವ ವಿಂಗಡನೆಯಲ್ಲಿಯೂ ಭಾಷೆಯೇ ಪ್ರಮುಖ ಮಾನದಂಡವಾಗಿದೆ.

ಮುಂದುವರಿಯುವುದು...

ಭಾಗ - 05