Wednesday, June 24, 2026

ಚಲನಚಿತ್ರಗಳ ರಾಜಕೀಯ ನೆರಳುಗಳು - 01

 

The Voice of Hind Rajab

ಬರ್ಲಿನ್‌ ಚಲನಚಿತ್ರೋತ್ಸವದ ವಿವಾದ:

ಜರ್ಮನಿಯಲ್ಲಿ ಪ್ರತಿ ವರ್ಷವೂ ಬರ್ಲಿನ್‌ ನಗರದಲ್ಲಿ ಪ್ರತಿಷ್ಠಿತ ಚಲನಚಿತ್ರೋತ್ಸವ ಆಯೋಜಿಸಲಾಗುತ್ತದೆ. ಚಿತ್ರೋತ್ಸವ ಆರಂಭವಾಗುವ ಮೊದಲು ಸ್ಪರ್ಧಾತ್ಮಕ ವಿಭಾಗಗಳ ತೀರ್ಪುಗಾರರ ಮಂಡಳಿಯ ಸದಸ್ಯರನ್ನು (jury) ಪತ್ರಿಕಾಗೋಷ್ಠಿಯಲ್ಲಿ ಪರಿಚಯಿಸುವ ಪದ್ಧತಿ ಇದೆ. ವರ್ಷ ಫೆಬ್ರವರಿ 2026ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಜ್ಯೂರಿ ಅಧ್ಯಕ್ಷರಾದ ಹಿರಿಯ ಜರ್ಮನ್ ನಿರ್ದೇಶಕ ವಿಮ್ ವೆಂಡರ್ಸ್ (Wim Wenders) ಅವರನ್ನು ಪ್ರಶ್ನಿಸಿದರು – “ಬರ್ಲಿನ್‌ ಚಿತ್ರೋತ್ಸವವನ್ನು ನಡೆಸುವ ಜರ್ಮನ್‌ ಸರ್ಕಾರವು ಇರಾನ್‌ (Iran) ಹಾಗೂ ಉಕ್ರೇನ್‌ (Ukraine) ದೇಶಗಳಲ್ಲಾದ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಸಹಾನುಭೂತಿ ತೋರಿಸಿದಷ್ಟು ಪ್ಯಾಲೆಸ್ಟೈನ್‌ ನರಹತ್ಯೆಗೆ ತೋರಿಸಿಲ್ಲ. ಬಗ್ಗೆ ನಿಮ್ಮ ಅಭಿಪ್ರಾಯವೇನು?”

ಜಾಗತಿಕ ಚಿತ್ರರಂಗಕ್ಕೆ Alice in the Cities, Kings of the Road, Paris Texas, Wings of Desire, Perfect Days ಮುಂತಾದ ಪ್ರಭಾವೀ ಸಿನಿಮಾಗಳನ್ನು ನೀಡಿದ ವಿಮ್ ವೆಂಡರ್ಸ್‌ (Wim Wenders) ಅವರ ಉತ್ತರ ಸಿನಿಮಾ ಜಗತ್ತಿಗೇ ಆಶ್ಚರ್ಯವನ್ನು ಉಂಟು ಮಾಡಿತು: “ನಾವು ರಾಜಕೀಯದಿಂದ ದೂರ ಉಳಿಯಬೇಕು. ರಾಜಕೀಯಕ್ಕೆ ಮೀಸಲಾಗಿರುವ ಚಲನಚಿತ್ರಗಳನ್ನು ಮಾಡಿದರೆ, ನಾವು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತೇವೆ. ನಮ್ಮ ಕೆಲಸ ರಾಜಕೀಯ ಕೆಲಸವಲ್ಲ. ನಾವು ಜನರ ಕೆಲಸವನ್ನು ಮಾಡಬೇಕು, ರಾಜತಾಂತ್ರಿಕರ ಕೆಲಸವನ್ನಲ್ಲ.”

ಜ್ಯೂರಿ ಸದಸ್ಯೆಯಾದ ಹಿರಿಯ ಪೋಲಿಷ್‌ ನಿರ್ಮಾಪಕಿ ಇವಾ ಪುಸ್ಕ್ಝಿನ್ಸ್ಕ (Ewa Puszczyńska) ಅವರು ವೆಂಡರ್ಸ್‌ ಅವರನ್ನು ಸಮರ್ಥಿಸಿ, “ಸಿನಿಮಾ ಎಂಬುದು ಮಾನವೀಯ ನೆಲೆಯಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಮತ್ತು ಅನುಭೂತಿ ಸೃಷ್ಟಿಸಲು ಬಳಸುವ ಮಾಧ್ಯಮ ಅರ್ಥದಲ್ಲಿ ಮಾತ್ರ ಅದು ರಾಜಕೀಯವಾಗುತ್ತದೆಎಂದು ಹೇಳಿದರು.

ಒಂದೆರಡು ದಿನಗಳಲ್ಲಿ ಜಗತ್ತಿನ ಸುಮಾರು ೮೦ಕ್ಕೂ ಹೆಚ್ಚು ಚಿತ್ರ ನಿರ್ದೇಶಕರುನಾವು ವಿಮ್ ವೆಂಡರ್ಸ್ (Wim Wenders) ಅವರ ನಿಲುವನ್ನು ಒಪ್ಪುವುದಿಲ್ಲಎಂದು ಒಂದು ಬಹಿರಂಗ ಪತ್ರ ಬರೆದು ಪ್ರಕಟಿಸುತ್ತಾರೆ. ಚಿತ್ರೋತ್ಸವದಲ್ಲಿ ಪ್ಯಾಲೆಸ್ಟೈನ್ (Palestine) ನಲ್ಲಿ ಅಪಹರಣಗೊಂಡು ಸಾಯಿಸಲ್ಪಟ್ಟ ಪುಟ್ಟ ಹುಡುಗಿಯೊಬ್ಬಳ ಕಥೆಯನ್ನು ಹೊಂದಿದ್ದ ತುನೀಷಿಯಾ (Tunisia) ದೇಶದ Voice of Hind Rajab ಎಂಬ ಚಿತ್ರಕ್ಕೆ ಒಂದು ಪ್ರಶಸ್ತಿ ಸಿಕ್ಕಾಗ ನಿರ್ದೇಶಕಿ ಕೌಥರ್ ಬೆನ್ ಹನಿಯಾ (Kaouther Ben Hania) ಅದನ್ನು ತಿರಸ್ಕರಿಸುತ್ತಾರೆ. ಭಾರತದ ಅರುಂಧತಿ ರಾಯ್ ಬರ್ಲಿನ್ ಚಿತ್ರೋತ್ಸವವನ್ನು ಬಹಿಷ್ಕರಿಸುತ್ತಾರೆ. ಸಿನಿಮಾ ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ (social media) ಚರ್ಚೆಗಳು‌ ಹರಿದಾಡುತ್ತವೆ.

ಗೊಂದಲ ಯಾಕೆ?:

ಮೂಲಭೂತವಾಗಿ ಇಲ್ಲಿ ಪ್ರಶ್ನೆ ಏನೆಂದರೆಯಾವುದು ರಾಜಕೀಯ ಚಲನಚಿತ್ರ ಮತ್ತು ಯಾವುದು ಅಲ್ಲ ಎಂಬುದು.

ರಾಜಕೀಯ ಚಲನಚಿತ್ರಕೆಲವು ವ್ಯಾಖ್ಯಾನಗಳು

ವಿಮ್ ವೆಂಡರ್ಸ್ (Wim Wenders) ಅವರ ಹಳೆಯ ವ್ಯಾಖ್ಯಾನ:

ವಿಮ್ ವೆಂಡರ್ಸ್ (Wim Wenders) ಅವರು 1988ರಲ್ಲಿ ಪ್ರಕಟಿಸಿದ ತಮ್ಮ The Logic of Images: Essays and Conversations ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ – “ಎಲ್ಲಾ ಸಿನಿಮಾಗಳೂ ರಾಜಕೀಯವಾಗಿವೆ. ರಾಜಕೀಯವಲ್ಲವೆಂದು ನಟಿಸುವಮನರಂಜನಾ ಸಿನಿಮಾಗಳುಎಲ್ಲಕ್ಕಿಂತ ಹೆಚ್ಚು ರಾಜಕೀಯವಾಗಿವೆ. ಏಕೆಂದರೆ ಅವು ಬದಲಾವಣೆಯ ಸಾಧ್ಯತೆಯನ್ನು ನಿರಾಕರಿಸುತ್ತವೆ. ಪ್ರತಿ ಫ್ರೇಮ್‌ನಲ್ಲೂ ಅವುಎಲ್ಲವೂ ಹಾಗೆಯೇ ಸರಿಯಾಗಿದೆಎಂಬ ಸಂದೇಶ ನೀಡುತ್ತವೆ. ಅವುಗಳು ವರ್ತಮಾನ ಸ್ಥಿತಿಗೆ (Status Quo) ನಿರಂತರವಾದ ಜಾಹೀರಾತುಗಳಾಗಿವೆ.”

ವಿಮ್ ವೆಂಡರ್ಸ್ (Wim Wenders) ತಮ್ಮ ನಿಲುವನ್ನು ಯಾಕೆ ಸಡಿಲಗೊಳಿಸಿದರು ಎಂಬುದು ಬೇರೆ ಪ್ರಶ್ನೆ.

ಜೀನ್-ಲೂಯಿಸ್ ಕೊಮೊಲ್ಲಿ (Jean-Louis Comolli) ಮತ್ತು ಜೀನ್ ನಾರ್ಬೋನಿ (Jean Narboni) ಅವರ ವ್ಯಾಖ್ಯಾನ:

ಫ್ರಾನ್ಸ್‌ನಲ್ಲಿ 1960 ದಶಕದಲ್ಲಿ ಕೈಯರ್ಸ್ ದು ಸಿನೆಮಾ (Cahiers du cinéma) ಎಂಬ ಪ್ರತಿಷ್ಠಿತ ಹಾಗೂ ಪ್ರಭಾವಶಾಲಿ ಸಿನಿಮಾ ಪತ್ರಿಕೆ ಹೊರಬರುತ್ತಿತ್ತು. 1969 ಅಕ್ಟೋಬರ್‌ ಸಂಚಿಕೆಯಲ್ಲಿ ಆಗಿನ ಸಂಪಾದಕರಾದ ಜೀನ್-ಲೂಯಿಸ್ ಕೊಮೊಲ್ಲಿ (Jean-Louis Comolli) ಮತ್ತು ಜೀನ್ ನಾರ್ಬೋನಿ (Jean Narboni) ಅವರು ತಮ್ಮ Cinéma/idéologie/critique ಎಂಬ ಸಂಪಾದಕೀಯ ಲೇಖನದಲ್ಲಿ ವಿಷಯವನ್ನು ಮೊದಲು ಪ್ರಸ್ತಾಪಿಸಿದರು. ಅವರು ಬರೆದಿದ್ದು ಹೀಗಿದೆ – “ಚಲನಚಿತ್ರಗಳು ಅವುಗಳನ್ನು ನಿರ್ಮಿಸುವ (ಅಥವಾ ಅದರೊಳಗೆ ನಿರ್ಮಿಸಲಾದ) ಸಿದ್ಧಾಂತಗಳಿಂದ ನಿರ್ಧರಿಸಲ್ಪಡುತ್ತವೆ. ಹಾಗಾಗಿ ಎಲ್ಲಾ ಚಿತ್ರಗಳು ರಾಜಕೀಯವಾಗುತ್ತವೆ.”

ಅಂದರೆ, “ಸಿದ್ಧಾಂತದೊಳಗಿನಿಂದ ಚಲನಚಿತ್ರಗಳು ಹುಟ್ಟಿಕೊಳ್ಳುತ್ತವೆಮತ್ತುಚಲನಚಿತ್ರಗಳೊಳಗೆ ಸಿದ್ಧಾಂತಗಳು ಹುಟ್ಟಿಕೊಳ್ಳುತ್ತವೆ” – ಎರಡೂ ಸಮಾನವಾಗಿ ಸತ್ಯ.

ಕೊಮೊಲ್ಲಿ (Comolli) ಹಾಗೂ ನಾರ್ಬೋನಿ (Narboni) ಜರ್ಮನಿಯ ಪ್ರಭಾವಶಾಲಿ ನಾಟಕಕಾರ, ಕವಿ ಮತ್ತು ರಂಗ ನಿರ್ದೇಶಕ ಬರ್ಟೋಲ್ಟ್ ಬ್ರೆಕ್ಟ್ (Bertolt Brecht) ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಭಾಷೆ / ರೂಪ / ನಿರೂಪಣೆ ನಿಜ ಜೀವನವನ್ನು ಕನ್ನಡಿಯಂತೆ ಬಿಂಬಿಸುವುದಿಲ್ಲ, ಬದಲಾಗಿ ಅದನ್ನು ಸೃಷ್ಟಿಸುತ್ತದೆ ಎಂಬ ತತ್ವವನ್ನು ಅವರು ಅಳವಡಿಸಿಕೊಂಡಿದ್ದರು. ಹಾಗಾಗಿ, ರಾಜಕೀಯ ಸಿದ್ಧಾಂತಗಳು ಚಲನಚಿತ್ರಗಳ ವಿಷಯಗಳಲ್ಲಿ ಎಷ್ಟು ಕಾಣಿಸಿಕೊಳ್ಳಬಹುದೋ, ಅಷ್ಟೇ ಗಾಢವಾಗಿ ಚಲನಚಿತ್ರಗಳ ಸಿನಿಮೀಯ ಭಾಷೆಯಲ್ಲೂ ಅಡಗಿವೆ ಎಂದು ಅವರು ನಂಬಿದರು.

ಕೊಮೊಲಿ (Comolli) ಹಾಗೂ ನಾರ್ಬೋನಿ (Narboni) ಅವರ ಚಲನಚಿತ್ರಗಳ ವಿಂಗಡನೆ:

ಇಂತಹ ನಿಲುವಿನ ಆಧಾರದ ಮೇಲೆ ಕೊಮೊಲಿ (Comolli) ಹಾಗೂ ನಾರ್ಬೋನಿ (Narboni) ಸಿನಿಮಾಗಳನ್ನು ಏಳು ವರ್ಗಗಳಲ್ಲಿ ವಿಂಗಡಿಸಿದರು:

  1. ಪ್ರಬಲ ಸಿದ್ಧಾಂತವನ್ನು ಬಲಪಡಿಸುವ ಚಲನಚಿತ್ರಗಳುಇವು ಬಳಸುವ ಭಾಷೆಯೂ ಪ್ರಬಲ ಸಿದ್ಧಾಂತದ್ದೇ ಆಗಿರುತ್ತದೆ. ಇವು ಸ್ಥಾಪಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವೀಕರಿಸುತ್ತವೆ.
  2. ಪ್ರಬಲ ಸಿದ್ಧಾಂತವನ್ನು ವಿರೋಧಿಸುವ ಚಲನಚಿತ್ರಗಳುಇವು ಬಳಸುವ ನಿರೂಪಣೆ/ಭಾಷೆ ಪ್ರಬಲ ಸಿದ್ಧಾಂತದ್ದಾಗಿರುವುದಿಲ್ಲ, ಬೇರೆಯೇ ರೀತಿಯಲ್ಲಿರುತ್ತದೆ.
  3. ರಾಜಕೀಯವೆಂದು ಪರಿಗಣಿಸಲ್ಪಡುವ ವಿಷಯಗಳನ್ನು ಹೊಂದಿರದ, ಆದರೆ ಪ್ರಬಲ ಸಿದ್ಧಾಂತದ ರೂಪ/ನಿರೂಪಣೆ/ಭಾಷೆಯನ್ನು ತಿರಸ್ಕರಿಸುವ ಚಲನಚಿತ್ರಗಳು.
  4. ಪ್ರಬಲ ಸಿದ್ಧಾಂತವನ್ನು ವಿರೋಧಿಸುವ, ಆದರೆ ಸಾಂಪ್ರದಾಯಿಕ ರೂಪ/ನಿರೂಪಣೆ/ಭಾಷೆ ಹೊಂದಿರುವ ಚಲನಚಿತ್ರಗಳು.
  5. ಸಾಂಪ್ರದಾಯಿಕವಾಗಿ ಕಾಣುವ, ಆದರೆ ಪ್ರಬಲ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಚಲನಚಿತ್ರಗಳು. ಮೊದಲ ನೋಟಕ್ಕೆ ಇವು ಮುಖ್ಯವಾಹಿನಿಗೆ ಹೊಂದಿಕೆಯಾಗುವಂತೆ ಕಾಣುತ್ತವೆ, ಆದರೆ ಅವುಗಳ ಆಂತರಿಕ ವಿರೋಧಾಭಾಸಗಳ ಮೂಲಕ ಪ್ರಬಲ ಸಿದ್ಧಾಂತವನ್ನು ಒಳಗಿನಿಂದ ಅಡ್ಡಿಪಡಿಸುತ್ತವೆ.
  6. ಪ್ರಬಲ ಸಿದ್ಧಾಂತದ ಚಿತ್ರಣ ವಿಧಾನಗಳನ್ನು/ಸಿನಿಮೀಯ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಸಾಕ್ಷ್ಯಚಿತ್ರಗಳು. ಇವುಗಳ ವಿಷಯ ಪ್ರಬಲ ಸಿದ್ಧಾಂತದ ವಿರುದ್ಧವಾಗಿಯೂ ಇರಬಹುದು.
  7. ಪ್ರಬಲ ಸಿದ್ಧಾಂತಕ್ಕೆ (ರೂಪ ಮತ್ತು ವಿಷಯ) ವಿರುದ್ಧವಾಗಿರುವ ಸಾಕ್ಷ್ಯಚಿತ್ರಗಳು.

ಥಿಯೋಡರ್ ಅಡೋರ್ನೋ (Theodor Adorno) ಮತ್ತು ಮ್ಯಾಕ್ಸ್ ಹಾರ್ಕ್ಹೈಮರ್ (Max Horkheimer) ಅವರ "ಸಂಸ್ಕೃತಿ ಉದ್ಯಮ":

ನಾವು ಗಮನಿಸಿದಂತೆ, ವರ್ಗೀಕರಣದ ಆಧಾರವು ಪ್ರಬಲ ಸಿದ್ಧಾಂತ ಹಾಗೂ ಪ್ರಬಲವಲ್ಲದ ಸಿದ್ಧಾಂತಗಳ ನಡುವಿನ dialectical ತಿಕ್ಕಾಟದ ಮೇಲೆ ನಿಂತಿದೆ. ಎಲ್ಲಾ ಸಿನಿಮಾಗಳೂ ರಾಜಕೀಯವಾಗಿವೆ ಎಂದರೆಎಲ್ಲಾ ಸಿನಿಮಾಗಳಲ್ಲೂ ತಿಕ್ಕಾಟ ಕಾಣಿಸಿಕೊಳ್ಳುತ್ತದೆ.

ಜರ್ಮನಿಯ ಚಿಂತಕರಾದ ಥಿಯೋಡರ್ ಅಡೋರ್ನೋ (Theodor Adorno) ಮತ್ತು ಮ್ಯಾಕ್ಸ್ ಹಾರ್ಕ್‌ಹೈಮರ್ (Max Horkheimer) ತಿಕ್ಕಾಟದ ಇನ್ನೊಂದು ಆಯಾಮವನ್ನು ತೆರೆದಿಡುತ್ತಾರೆ. ಅವರ ಪ್ರಕಾರ, ಕಲೆ ಮೊದಲು ಮನುಷ್ಯನ ಮನಸ್ಸಿನಿಂದ ಸಹಜವಾಗಿ ಹುಟ್ಟಿಬರುತ್ತಿತ್ತು, ಸಮಾಜದ ತಪ್ಪುಗಳನ್ನು ಪ್ರಶ್ನಿಸುತ್ತಿತ್ತು. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಂಸ್ಕೃತಿಯೂ ಒಂದು profit-oriented ಕಾರ್ಖಾನೆಯ ಉತ್ಪನ್ನವಾಗಿಬಿಟ್ಟಿದೆ.

ಅಷ್ಟೇ ಅಲ್ಲ, "ಸಂಸ್ಕೃತಿ ಉದ್ಯಮ" ಜನರ ಯೋಚನೆಯನ್ನೇ ರೂಪಿಸುತ್ತದೆ. ದಿನವಿಡೀ ದುಡಿದ ಜನರು ಮನರಂಜನೆ ಪಡೆಯುತ್ತಾರೆ, ಆದರೆ ಮರುದಿನ ಮತ್ತೆ ಯಥಾಸ್ಥಿತಿಯಲ್ಲಿ ದುಡಿಯಲು ಸಿದ್ಧರಾಗುತ್ತಾರೆ. “ ವ್ಯವಸ್ಥೆ ಯಾಕೆ ಹೀಗಿದೆ?” ಎಂದು ಪ್ರಶ್ನಿಸುವ ಶಕ್ತಿ ಅವರಲ್ಲಿ ಉಳಿಯುವುದಿಲ್ಲ.

ಹೀಗೆ ಮುಂದುವರಿದು, ಅಡೋರ್ನೋ ಮತ್ತು ಹಾರ್ಕ್‌ಹೈಮರ್ (Adorno and Horkheimer) ರಾಜಕೀಯ ಕಲೆಯ ಪ್ರಣಾಲಿಯನ್ನು ಹೀಗೆ ವಿವರಿಸುತ್ತಾರೆರಾಜಕೀಯ ಕಲೆಯ ಉದ್ದೇಶವೇ ʼಸಾಂಸ್ಕೃತಿಕ ಉದ್ಯಮದʼ ಉತ್ಪನ್ನಗಳ ಪ್ರಾಬಲ್ಯವನ್ನು ದುರ್ಬಲಗೊಳಿಸುವುದು.

ಕೊಮೊಲಿ ಹಾಗೂ ನಾರ್ಬೋನಿ (Comolli and Narboni) ಮಾಡಿರುವ ವರ್ಗೀಕರಣವೂ ಇದೇ ಪಥದಲ್ಲಿ ಸಾಗುತ್ತದೆ.

ಈವಾ ಮಜಿಯರ್ಸ್ಕಾ (Ewa Mazierska) ಅವರ ವ್ಯಾಖ್ಯಾನ:

ಕೊಮೊಲಿ ಹಾಗೂ ನಾರ್ಬೋನಿ (Comolli and Narboni) ಅವರು ಪ್ರಯತ್ನಿಸಿದ ಸವಿಸ್ತಾರವಾದ ವಿಂಗಡನೆಯು ಸ್ವಲ್ಪ ಜಟಿಲವಾಗಿದೆ ಎಂದು ಅನಿಸಿದರೆ, ನಾವು ಪೊಲ್ಯಾಂಡ್‌ನ (Poland) ಸಿನಿಮಾ ಚಿಂತಕಿ ಈವಾ ಮಝಿಯರ್ಸ್ಕಾ (Ewa Mazierska) ನೀಡಿರುವ ಸರಳ ವರ್ಗೀಕರಣವನ್ನು ಪರಿಗಣಿಸಬಹುದು.

ಅವರ ಪ್ರಕಾರ, ಎಲ್ಲಾ ರಾಜಕೀಯ ಸಿನಿಮಾಗಳನ್ನು ಅನುಸರಣಾತ್ಮಕ (Conformist) ಅಥವಾ ವಿರೋಧಾತ್ಮಕ (Oppositional) ಎಂದು ವಿಂಗಡಿಸಬಹುದು. ಅಥವಾ ಅವುಗಳನ್ನು ಗುರುತಿಸಲ್ಪಟ್ಟ (Marked) ಅಥವಾ ಗುರುತಿಸಲ್ಪಡದ (Unmarked) ಚಲನಚಿತ್ರಗಳೆಂದು ವಿಂಗಡಿಸಬಹುದು.

·        ಅನುಸರಣಾತ್ಮಕ ಸಿನಿಮಾಗಳು ಇರುವ ರಾಜಕೀಯ ಸ್ಥಿತಿಯನ್ನು ಅಂಗೀಕರಿಸುತ್ತವೆ.

·        ವಿರೋಧಾತ್ಮಕ ಸಿನಿಮಾಗಳು ಅದನ್ನು ತಿರಸ್ಕರಿಸುತ್ತವೆ.

· ಗುರುತಿಸಲ್ಪಟ್ಟ ಸಿನಿಮಾಗಳು ತಾವು ಪೂಜಿಸುವದೇವರನ್ನುವೀಕ್ಷಕರ ಮುಂದೆ ಬಹಿರಂಗವಾಗಿ ತೋರಿಸುತ್ತವೆ.

·     ಗುರುತಿಸಲ್ಪಡದ ಸಿನಿಮಾಗಳು ಅದನ್ನು ನಮ್ಮಿಂದ ಮರೆಮಾಡಲು ಪ್ರಯತ್ನಿಸುತ್ತವೆ.

ಅಂದರೆ, ಎಲ್ಲಾ ಚಲನಚಿತ್ರಗಳಲ್ಲಿಯೂ ರಾಜಕೀಯ ಸ್ಥಿತಿಯ ಉಲ್ಲೇಖ ಇದ್ದೇ ಇರುತ್ತದೆ.

ಮುಂದುವರಿಯುತ್ತದೆ....

ಭಾಗ ೦೨

Tuesday, November 4, 2025

ಕಿಲ್ ಥ‌ ಫಾದರ್


ಬಿ. ವಿ. ಕಾರಂತ‌
ಹೀಗೊಂದು - ನನ್ನ ತಂದೆ ಮೃತರಾಗಿ ಹಲವಾರು ವರುಷಗಳಾಗಿವೆ. ಅವರು ಜೋಪಾನವಾಗಿ ಇಟ್ಟಿದ್ದ ಕೆಲ ವಸ್ತುಗಳಲ್ಲಿ ಅವರ ಹಲವಾರು ಡೈರಿಗಳಿವೆ. ಅವುಗಳಲ್ಲಿ ʼಅಡುಗೆ ಮನೆಗೆ ಬೆಂಕಿ ಪೆಟ್ಟಿಗೆ – 50 ಪೈಸೆʼ ಇಂದ ಹಿಡಿದು ʼಇವತ್ತು ರಾಮಚಂದ್ರ ಬಂದʼ ಅಂತ ಹಲವಾರು ವರುಷಗಳ ಹಲವಾರು ಸಣ್ಣ-ಪುಟ್ಟ ಬೇಕು-ಬೇಡದ ದಿನ ನಿತ್ಯದ ಎಂಟ್ರಿಗಳಿವೆ. ಅದ್ಯಾಕೋ ಇದ್ದ ಎಲ್ಲಾ ಡೈರಿಗಳನ್ನು ದೂಳು ಹಿಡಿದು ಗೆದ್ದಲು ಬರುವ ವರೆಗೆ ನಾನು ಕೂಡಾ ಹಾಗೇ ಇಟ್ಟುಕೊಂಡಿದ್ದೆ. ಇನ್ನೊಂದೇನಂದ್ರೆ, ಜಗತ್ತಿನ ಪ್ರಭಾಶಾಲಿ ಮನೋವಿಜ್ಞಾನಿ ಎಂದೆಣಿಸಿಕೊಂಡ Sigmund Freud ಹೇಳುತ್ತಾರೆ, ʼKill the father’…..

ಈ ಹಿಂದೆ, ಅರವತ್ತರ ದಶಕದಲ್ಲಿ ಅಮೇರಿಕಾದ ಸೇನಾಪಡೆ ತಾವು ಸೃಜಿಸಿದ ವಿಯೆಟ್ನಾಮ್ ಯುದ್ಧದಲ್ಲಿ ನಾಪಾಮ್ ಬಾಂಬ್‌ಗಳನ್ನು ಬಹಳ ಮಾರಕವಾಗಿ ಬಳಸಿಕೊಂಡಿತ್ತು. ಈ ಬಾಂಬುಗಳ ಮುಖ್ಯ ಗುಣವೇನೆಂದರೆ, ಆದ ಸ್ಪೋಟಗಳಿಂದ ತಗಲುವ ಬೆಂಕಿ ಬಹಳಷ್ಟು ಹೊತ್ತು ಉರಿಯುತ್ತಿರುತ್ತೆ‌. ಅಮೇರಿಕಾದ DOW ಕೆಮಿಕಲ್ ಬಹುರಾಷ್ಟ್ರೀಯ ಕಂಪೆನಿಗೆ ನಾಪಾಮ್ ಬಾಂಬಿನ ರಿಸರ್ಚ್ ಹಾಗೂ ತಯಾರಿಕೆಯ ಉಸ್ತುವಾರಿಯನ್ನು ಕೊಡಲಾಗಿತ್ತು.

ಈ ಬಗ್ಗೆ ೧೯೬೯ರಲ್ಲಿ ಜರ್ಮನಿ ಮೂಲದ ನಿರ್ದೇಶಕರು ಹಾರುನ್ ಫಾರೂಕಿ 'The Inextinguishable Fire' ಎಂಬ ೩೮ ನಿಮಿಷಗಳ ಸಿನಿಮಾವೊಂದನ್ನು, ಅಮೇರಿಕಾಕ್ಕೂ ಹೋಗದೆ, ವಿಯೆಟ್ನಾಮಿಗೂ ಹೋಗದೆ ತಮ್ಮ ದೇಶದಲ್ಲೇ ಕೂತು, ವಿಮರ್ಶಾತ್ಮಕ‌ವಾಗಿ ಹೊರ ತಂದಿದ್ದರು. ರಾಜ್ಯ-ವ್ಯವಸ್ಥೆ, ವಿಜ್ಞಾನ-ವ್ಯವಸ್ಥೆ ಹಾಗೂ ಯುದ್ದ-ಉದ್ಯಮಗಳ ಸಂಬಂಧವನ್ನು‌ ತಾರ್ಕಿಕವಾಗಿ ಎತ್ತಿ ತೋರಿಸುವ ಈ ಸಿನಿಮಾ, ಸಾಕ್ಷ್ಯಚಿತ್ರಗಳ ಪರಿಭಾಷೆಯನ್ನೇ ವಿಸ್ತರಿಸಿತ್ತು‌ ಅಂತ‌ ಹೇಳಿದರೆ ತಪ್ಪಾಗದು.

ಹಾರುನ್ ಫಾರೂಕಿ
ಚಿತ್ರದ‌ ಮೊದಲ ಶಾಟಿನಲ್ಲಿ ನಿರ್ದೇಶಕ ಫಾರೂಕಿ ಕಾಣಿಸಿಕೊಂಡು ನಪಾಮ್‌ ಬಾಂಬಿನಿಂದ ಸುಟ್ಟು ತೀವ್ರವಾಗಿ ಗಾಯಗೊಂಡ ವಿಯಟ್ನಾಮೀ ಹೆಂಗಸಿನ ಪ್ರಮಾಣ ಹೇಳಿಕೆಯನ್ನು ಯತಾವತ್ತಾಗಿ ಓದುತ್ತಾರೆ. ಬಳಿಕ ಅಲ್ಲೇ ಮೇಜಿನ ಮೇಲಿದ್ದ ಎಶ್‌ಟ್ರೆಯ ಮೇಲೆ ಇಟ್ಟಿದ್ದ ಉರಿಯುತ್ತಿರುವ ಸಿಗರೇಟ್ ತುಂಡಿನ ಬೆಂಕಿಯನ್ನು ತಮ್ಮ ಕೈಗೆ ಅಚಾನಕ್ ಆಗಿ ಚುಚ್ಚಿಸಿಕೊಂಡು ತಮ್ಮ ಚರ್ಮವನ್ನೇ ಉರಿಸಿಕೊಳ್ಳುತ್ತಾರೆ. 'ಸಿಗರೇಟ್‌ ೩೦೦ ಡಿಗ್ರಿಯಲ್ಲಿ ಸುಡುತ್ತದೆ‌. ನಾಪಾಮ್ ಬಾಂಬು ೩,೦೦೦ ಡಿಗ್ರಿಯಲ್ಲಿ ಸುಡುತ್ತದೆ',ಅಂತ‌ ಕ್ಯಾಮರಾ ನೋಡಿ ಭಾವುಕರಾಗದೇ ಹೇಳುತ್ತಾರೆ.

ಸಾಕ್ಷ್ಯಚಿತ್ರಗಳೆಂದರೆ ವಾಸ್ತವ ಜಗತ್ತಿನ ನನಗೆ‌ ಗೊತ್ತಿದ್ದ ಆದರೆ ನಿಮಗೆ ಗೊತ್ತಿರದ ಘನವಾದ  ವಿಷಯಗಳನ್ನು ವಸ್ತು ನಿಷ್ಠೆ ಹಾಗೂ ಎಲ್ಲರಿಗೂ ಸರಿ ಹೊಂದಿದ - ದೇವಲೋಕದಿಂದಲೋ ಎಂಬಂತೆ - top angle ನೋಟವನ್ನು ತಾಳುತ್ತಾ, ತಿಳಿ ಹೇಳುವ ಒಂದು ಅಹಂ ಬರಿತ ಪರಿ‌ ಎಂದು ನಂಬಿದ್ದ ಕಾಲದಲ್ಲಿ, ಫಾರೂಕಿಯ ಈ ಚಿತ್ರ ಒಂದು ಖಚಿತವಾದ ಜನಪರ ನಿಲುವನ್ನು ಪರೋಕ್ಷವಲ್ಲದ‌ ರೀತಿಯಲ್ಲಿ ಯಾವುದೇ  ಹಿಗ್ಗು‌‌-ಮುಗ್ಗು ಇಲ್ಲದೆ ರಚಿಸಿತ್ತು. ವ್ಯಕ್ತಿ ನಿಷ್ಠ ಅನುಭವಗಳು ಕೂಡಾ ಪರಿಶೀಲಿಸಬಹುದಾದ ಪುರಾವೆಗಳಷ್ಟೆ ಮಾನ್ಯತೆ ಹೊಂದಿವೆ ಅಂತ ಸಾರಿ ಹೇಳಿದ ಕಲ್ಟ್ ಅಂತ ಎನಿಸಿಕೊಳ್ಳುವ ಚಿತ್ರವಿದು.‌

ಇದೆ ವರ್ಷ ಸೆಪ್ಟೆಂಬರಿನಲ್ಲಿ ತೀರಿಕೊಂಡ ಹಿರಿಯ ಅಮೇರಿಕನ್ ಚಿತ್ರ ನಿರ್ದೇಶಕಿ ಜಿಲ್‌ ಗಾಡ್ಮಿಲೋವ್, ಹಾರುನ್‌ ಫಾರೂಕಿಯ ಚಲನಚಿತ್ರಗಳಿಂದ ಮತ್ತವರ ಜನಪರ ವಿಶ್ವನೋಟದಿಂದ ಪ್ರೇರಿತಗೊಂಡವರು. ಎಂಬತ್ತರ ದಶಕದಲ್ಲಿ ಪೊಲ್ಯಾಂಡಿನಲ್ಲಿ ನಡೆದ Solidarity Movement ನ ಬಗ್ಗೆ ಒಂದು‌ ಚಲನಚಿತ್ರ ಮಾಡಲು ಹೊರಟಾಗ ಅವರಿಗೆ ಆ ದೇಶಕ್ಕೆ ಹೋಗಲು ವೀಸಾ ಸಿಗಲ್ಲಿಲ್ಲ. ದೃಡ ಗೆಡದೇ ಪೊಲ್ಯಾಂಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕೆಲ ಕಾರ್ಮಿಕರ ಸಂದರ್ಶನಗಳನ್ನು ಅಮೇರಿಕಾದಲ್ಲೇ ವಾಸವಾಗಿದ್ದ ಕೆಲ ಪೊಲಿಶ್ ನಟರನ್ನು ಬಳಸಿಕೊಂಡು ಯತಾವತ್ತಾಗಿ ಅದೇ ಸಂದರ್ಶನಗಳನ್ನು ಮರು ಸೃಷ್ಟಿಸಿ ಚಿತ್ರಿಸಿಕೊಂಡರು. ಜೊತೆಗೆ ಹಾಗೆ ಚಿತ್ರಿಸಿ ಕೊಂಡದ್ದನ್ನೂ ಚಿತ್ರಿಸಿಕೊಂಡು ಅವುಗಳನ್ನು ತಮ್ಮ ಚಿತ್ರ 'Far From Poland' ನಲ್ಲಿ ಬ್ರೆಕ್ಟ್ ನ  ಎಲಿನಿಯೇಶನ್‌ ಎಫೆಕ್ಟ್ ರೀತಿಯಲ್ಲಿ ಬಳಸಿಕೊಂಡರು.

೧೯೯೮ರಲ್ಲಿ ಜಿಲ್‌ ಗಾಡ್ಮಿಲೋವ್ 'What I Learnt from Farockiʼ ಅಂತ ಇನ್ನೊಂದು ಚಿತ್ರವನ್ನು ತಯಾರಿಸಿದರು. ಆಶ್ಚರ್ಯವೆಂದರೆ‌ ಈ ಚಿತ್ರ ಹಾರುನ್‌ ಫಾರೂಕಿಯ 'The Inextinguishable Fire' ಚಿತ್ರದ ಹೂ-ಬ-ಹೂ ನಕಲಾಗಿತ್ತು, ಭಾಷೆ ಇಂಗ್ಲೀಶ್ ಮತ್ತು ಕಲರ್‌ನಲ್ಲಿರುವುದನ್ನು ಬಿಟ್ಟರೆ. ಫಾರೂಕಿಯ ಚಿತ್ರದಲ್ಲಿದ್ದ ಪ್ರತಿಯೊಂದು ಇಮೇಜ್ ಸೈಸ್, ಶಾಟುಗಳ ಕಾಲ ಹಾಗೂ ಲಯ, ಕ್ಯಾಮೆರಾ‌ ಚಲನೆ, ಧ್ವನಿಗಳ ಬಳಕೆ, ನಟರ ಚಲನೆ ವಲನೆ- ಎಲ್ಲವೂ ಯತಾವತ್ತಾಗಿತ್ತು. ೨೮‌ ನಿಮಿಶಗಳು ಮುಗಿದ ಬಳಿಕ ಕ್ಯಾಮರಾದ ಮುಂದೆ ಸ್ವತಃ ಗಾಡ್ಮಿಲೋವ್ ಬಂದು ನಾನು ಫಾರೂಕಿಯ ಸಿನಿಮಾ ಮಾಡುವ ಬಗೆಯನ್ನು study ಮಾಡಲು ಹೀಗೊಂದು ಚಿತ್ರ ಮಾಡಿದ್ದೇನೆ ಅಂತ ಹೇಳಿ, ಇದು ಅವರಿಗೆ ಸಲ್ಲಿಸಿರುವ ಗೌರವ ಅಂತ ಸ್ಪಷ್ಟೀಕರಣಕೊಟ್ಟರು.

ಜಿಲ್‌ ಗಾಡ್ಮಿಲೋವ್

ಈಗ ಮತ್ತೂ ಒಂದೇನೆಂದರೆ, ಹೋದ ವಾರ ಬೆಂಗಳೂರಿನ ಬೆನಕ‌ ತಂಡ ಮುಂಬಯಿಯಲ್ಲಿ ಮೂರು ನಾಟಕಗಳ ಪ್ರದರ್ಷನಗಳನ್ನು ಕೊಟ್ಟಿತು - 'ಹಯವದನ', 'ಸತ್ತವರ‌ ನೆರಳು' ಹಾಗೂ 'ಗೋಕುಲ ನಿರ್ಗಮನ'. ಇವುಗಳ ಸಂಗೀತ ಹಾಗೂ ನಿರ್ದೇಶನ ಬಿ. ವಿ. ಕಾರಂತ‌ ಹಾಗೂ 're-presentionʼ ಅಥವಾ 'ಮರು-ಪ್ರಸ್ತುತೀಕರಣ', ಟಿ. ಎಸ್. ನಾಗಾಭರಣರದ್ದು. ‌ಇವುಗಳಲ್ಲಿ ನಾನು‌ ನೋಡಿದ್ದು ಪು. ತಿ. ನರಸಿಂಹಾಚಾರ್ ಬರೆದ ಹಳೆ ಕನ್ನಡದ ಗೀತ ರೂಪಕ 'ಗೋಕುಲ ನಿರ್ಗಮನ'.ಈ ನಾಟಕದ ʼಸಹ ಮರು-ಪ್ರಸ್ತುತೀಕರಣ' ಕಾರರಾಗಿ ಬಿ. ವಿ‌. ಶ್ರುಂಗ, ಶ್ರೀಲಕ್ಷ್ಮೀ ಭಾಗವತರ್ ಹಾಗೂ ವಸುಕಿ ವೈಭವ್ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಇಡೀ ತಂಡ ರಂಗಸ್ಥಳದಲ್ಲಿ ತೋರಿದ ಅಸಾದಾರಣ ವೃತ್ತಪರತೆಯು ಇವರುಗಳು ತಮ್ಮ ತಾಲೀಮುಗಳಲ್ಲಿ ಮಾಡಿರಬಹುದಾದ ಪ್ರಯತ್ನ ಹಾಗೂ ಅವರ ರಂಗಬದ್ಧತೆಯ ಪ್ರತೀಕದಂತಿದೆ‌.

ಬಿ. ವಿ. ಕಾರಂತರು ಭಾರತ ದೇಶದ ಮೇರು ಕಲಾವಿದರಲ್ಲಿ ಒಬ್ಬರು.‌ ಅವರ ಸುದೀರ್ಘ ಜೀವನದಲ್ಲಿ ಸೃಷ್ಟಿಸಿದ 'ಬರ್ನಮ್‌‌ ವನ', 'ಅಂಧ‌ ಯುಗ್', 'ಮಾಲವಿಕಾಗ್ನಿ ಮಿತ್ರ','ಏವಂ ಇದ್ರಜೀತ್', 'ತುಗ್ಲಕ್', 'ಚಂದ್ರಗುಪ್ತ್', 'ಘಾಸಿರಾಮ ಕೋತ್ವಾಲ್', 'ಪಂಜರಶಾಲೆ', 'ಹಯವದನ', 'ಚಂಡಿಪ್ರಿಯ', 'ಜೋಕುಮಾರ‌ಸ್ವಾಮಿ', 'ಸಂಕ್ರಾಂತಿ', 'ಗೋಕುಲ ನಿರ್ಗಮನ'‌ ಇತ್ಯಾದಿ ನಾಟಕಗಳು ಭಾರತೀಯ ರಂಗಭೂಮಿಗೆ ಒಂದು ಹೊಸಾ ತಿರುವು ಕೊಟ್ಟಿತು ಅಂತ‌ ಹೇಳಿದರೆ, ಅತಿಶಯವಾಗದು.‌ ಭಾರತದ‌ ಸುತ್ತ ಒಬ್ಬ missionaryಯ ರೀತಿಯಲ್ಲಿ ತಿರುಗಾಡಿ ಕಾರಂತರು ಎಲ್ಲೆಲ್ಲಿ  ರಂಗಕರ್ಮಿಗಳನ್ನು ತಯಾರಿಸಿದ್ದರೋ ಅಲ್ಲಲಿ ರಂಗಭೂಮಿ ಇನ್ನೂ ಜೀವಂತವಾಗಿದೆ.

ಕಾರಂತರು ತಯಾರಿಸಿದ ಒಂದು ಪೀಳಿಗೆಯ ರಂಗ ಕಲಾವಿದರು ಋಣದಿಂದ ವಿವಿಧ ರೀತಿಯಲ್ಲಿ ಅವರನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಅಂತವರಲ್ಲಿ ಕೆಲವರು ಕಾರಂತರು ಆಡಿಸಿದ‌ ನಾಟಕಗಳನ್ನು ಚಾಚೂ ತಪ್ಪದೆ ನೆನಪಿನಲ್ಲಿಟ್ಟುಕೊಂಡು ಅವುಗಳನ್ನು ಯತಾವತ್ತಾಗಿ - ಜಿಲ್‌ ಗಾಡ್ಮಿಲೋವ್ 'What I Learnt from Farockiʼದಲ್ಲಿ ಮಾಡಿದಂತೆ - ಮರುಸೃಷ್ಟಿಸಿದ್ದಾರೆ. ಭೋಪಾಲದಲ್ಲಿ 'ಘಾಸಿರಾಮ‌ ಖೋತ್ವಾಲ್' ಅಥವ documentation ಸಲುವಾಗಿ‌ ೨೦೧೪(?)ರಲ್ಲಿ ನಿನಾಸಂ ತಂಡ ಮತ್ತೆ ಕಟ್ಟಿದ 'ಗೋಕುಲ ನಿರ್ಗಮನ' ನೆನಪಿಗೆ‌ಬರುತ್ತದೆ‌. ಆದರೆ‌ ಕಾರಂತರು ನಿರಂತರವಾಗಿ ಸ್ಮರಣೆ ಆಗುತ್ತಿರುವುದು ಟಿ ಎಸ್.‌ನಾಗಾಭರಣರ‌ ಸಾರಥ್ಯದಲ್ಲಿ ಬೆನಕ ತಂಡದ‌‌ ನಾಟಕಗಳ ಪ್ರದರ್ಶನಗಳಲ್ಲಿ. ಅವರ 'ಸತ್ತವರ‌ನೆರಳು'‌, 'ಹಯವದನ' ಹಾಗೂ 'ಗೋಕುಲ ನಿರ್ಗಮನ' ನಾಟಕಗಳಿಗೆ ನೂರಾರು ಪ್ರಯೋಗಗಳಾಗಿವೆ‌.

ಈಗ ಹೀಗೊಂದು ಗೊಂದಲ - ಜಿಲ್‌ ಗಾಡ್ಮಿಲೋವ್ 1998 ರಲ್ಲಿ ಮಾಡಿದ 'What I Learnt from Farockiʼ ಚಿತ್ರವನ್ನು ನೋಡುತ್ತಿರಬೇಕಾದರೆ ನಾವು ಎರಡು ದಶಕಗಳಷ್ಟು ಹಿಂದಿನ ಫಾರೂಕಿಯ 'The Inextinguishable Fire' ನೋಡುತ್ತಿದ್ದೇವೆ ಅಂತ ಭಾವಿಸಬೇಕೆ? ಇಂದು ಮೂರು ದಶಕಗಳ‌ ಬಳಿಕ, ಸುಮಾರು ಎರಡು ದಶಕಗಳ ಹಿಂದೆ ದಿವಂಗತರಾದ ಬಿ. ವಿ. ಕಾರಂತರ ʼಗೋಕುಲ ನಿರ್ಗಮನʼ ನೋಡುತ್ತಿರಬೇಕಾದರೆ ನಾವು ೧೯೯೩ರಲ್ಲಿ ನಿನಾಸಂ ತಿರುಗಾಟ ತಂಡಕ್ಕೆ ಬಿ. ವಿ. ಕಾರಂತರು ಮೊದಲ ಬಾರಿಗೆ ಕಟ್ಟಿ‌ಕೊಟ್ಟ ʼಗೋಕುಲ ನಿರ್ಗಮನʼ ನೋಡುತ್ತಿದ್ದೇವೆ ಎಂದು ಭಾವಿಬೇಕೆ? ಯಾಕಿಲ್ಲ? - ಅದೇ ಸಂಗೀತ, ಅದೇ ತಾಳ, ಅವೇ ಹೆಜ್ಜೆಗಳು, ಅಂತಹುದೇ ವಸ್ತ್ರ ವಿನ್ಯಾಸ, ಹಾಗಿದ್ದೇ ನೃತ್ಯ, ಪ್ರಾಯಶಃ ಸರಿಸಮಾನ ಅದೇ ಬೆಳಕು ಸಂಯೋಜನೆ, ರಂಗಸಜ್ಜಿಕೆ – ಮುಖ್ಯವಾಗಿ ಪಠ್ಯದ ಅದೇ ಇಂಟರ್ಪ್ರಿಟೇಶನ್‌ ಹಾಗೂ ಅದೇ ಲೋಕ ದೃಷ್ಟಿ.

The Inextinguishable Fire


What I Learnt from Farocki

ಹಾಗಿದ್ದಲ್ಲಿ, ನಾವು ಕಲೆಯನ್ನು ಅಂತಹಃ ಒಂದು fossilized ಸ್ಥಿತಿಯಲ್ಲಿ ನೋಡುತ್ತಿದ್ದೇವೆಯೇ? 1998ಯ ‘What I Learnt from Farockiʼ ಚಲಚಿತ್ರದಲ್ಲಿ ಹಾರುನ್‌ ಫಾರೂಕಿಯ ಹಾಗೆ ಕಾಣುವ ವ್ಯಕ್ತಿಯೊಬ್ಬನು ಉರಿಯುತ್ತಿರುವ ಸಿಗರೇಟಿನ ತುಂಡನ್ನು ತನ್ನದೇ ಕೈಗೆ ಉರಿಸಿಕೊಂಡಾಗ ಅಥವಾ ಅಂದಿನ ಬಿ.ವಿ. ಕಾರಂತ ನಿರ್ದೇಶಿತ ಇಂದಿನ ʼಗೋಕುಲ ನಿರ್ಗಮನʼ ನಾಟಕದಲ್ಲಿ ರಂಗ ಕತ್ತಲಾಗಿ ಹಲವಾರು ಉರಿಸಿದ ಊದುಬತ್ತಿಗಳ ಬೆಳಕಿನ ವಿನ್ಯಾಸಗಳನ್ನು ನಾವು ನೋಡಿ ಸವಿಸುತ್ತಿರಬೇಕಾದರೆ ಅಸಲಿನಲ್ಲಿ ನಾವು ʼಕಾರ್ಬನ್‌ ಡೇಟಿಂಗ್‌ʼ ಪ್ರಕೃಯೆಯಲ್ಲಿ ತೊಡಗಿಸಿಕೊಂಡಿದ್ದೆವೆಯೆ? ಒಂದು ಮ್ಯಸಿಯಂನಲ್ಲಿರುವ ಬಳಕೆಯಲ್ಲಿಲ್ಲದ ನಿರ್ಜೀವ‌ ವಸ್ತುಗಳನ್ನು ನೋಡುವ ರೀತಿಯಲ್ಲೇ ಗತಿಸಿ ಹೋದ, ಸ್ಥಿರ ಗೊಂಡ, ತಿದ್ದುಪಡಿಗೊಳಗಾಗದ ರಿಜಿಡ್‌ ʼಇಮೇಜ್‌ʼಗಳನ್ನು (ಬಿಂಬಗಳನ್ನು) ನಮ್ಮ ಮನದಲ್ಲಿ ಹುಟ್ಟಿಸಿ ಕೊಳ್ಳುತ್ತಿದ್ದೇವೆಯೇ?

ಗಾಡ್ಮಿಲೋವ್, ನಾಗಾಭರಣ ಅಥವಾ ಭೋಪಾಲದಲ್ಲಿ ʼಘಾಸಿರಾಮ್‌ ಕೋತ್ವಾಲ್‌ʼ ನಾಟಕವನ್ನು ಮರು ಸೃಷ್ಟಿಸಿದ ಸಜ್ಜನರು – ಇವರ್ಯಾರೂ ಇವು ತಮ್ಮದೇ ಸೃಜನಶೀಲತೆ  ಅಂತ ಖಂಡಿತ ಹೇಳಿಕೊಳ್ಳುತ್ತಿಲ್ಲ. ಹಾಗಾದರೆ ಈ ಸ್ವಾಮ್ಯತೆ ಯಾವ ಬಗೆಯದ್ದು?

ನಾವು ಕೇಳಿ ತಿಳಿದುಕೊಂಡ ಹಾಗೆ ಸ್ವತಃ ಬಿ. ವಿ, ಕಾರಂತರೇ ತಮ್ಮ ನಾಟಕಗಳ ಪ್ರದರ್ಶನಗಳಲ್ಲಿ ಅನಿಶ್ಚತತೆಯ ಅಂಶಗಳನ್ನು ಬಳಸಿ ಪ್ರದರ್ಶನಗಳಲ್ಲಿ ಹೊಸತನವನ್ನು ಹೇಗೆ ತರಬೇಕೆಂದು ಸದಾ ಚಿಂತಿಸುತ್ತಿದ್ದರಂತೆ. ‘What I Learnt from Farockiʼ ಬಿಟ್ಟರೆ ಮುಂದೆಂದೂ ಗಾಡ್ಮಿಲೋವ್ ಈ ರೀತಿಯ ಮರುಸೃಷ್ಟಿಗೆ ಕೈ ಹಚ್ಚಲಿಲ್ಲ. ಟಾಮ್‌ ಗನ್ನಿಂಗ್‌ ಎಂಬ ಸಿನಿಮಾ ಥಿಯರಿಟಿಶಿಯನ್‌ ಜಿಲ್ ಗಾಡ್ಮಿಲೋವ್‌ ಅವರ ಈ ಪ್ರಯತ್ನ ಒಂದು ʼAct of remembering… not for nostalgia… but for learning… the fact that film can break reality’, ಎಂಬಂತೆ ಅಭಿಪ್ರಾಯ ಪಟ್ಟಿದ್ದಾರೆ.

ನೆನಪಿಗಾಗಿ ರಂಗಾಯಣದ ಹಿರಿಯ ಕಲಾವಿದರು ಅಥವಾ ಭೋಪಾಲದ ನಿಷ್ಕಿಯಗೊಂಡ ರಂಗಮಂಡಲದ ಹಳೆಯ ಕಲಾವಿದರೂ ಬಿ. ವಿ. ಕಾರಂತರ ಒಂದೆರದು ನಾಟಕಗಳನ್ನು ಇನ್ನೂ ಆಡುತ್ತಿರಬಹುದು ಅಥವಾ ಕಾರಂತರು ಸಂಯೋಜಿಸಿದ ಹಾಡುಗಳನ್ನು ಸ್ಮರಣೆಗಾಗಿ ಅಥವಾ documentation ಗಾಗಿ ಇನ್ನೂ ಹಾಡುತ್ತಿರಬಹುದು. ಆದರೆ ಈ ಕಲಾವಿದರು ಕಾರಂತರ ಶೈಲಿಯನ್ನು ಸಂಪೂರ್ಣವಾಗಿ ಅರಗಿಸಿಕೊಂಡು ಅದನ್ನು ಸಮರ್ಥವಾಗಿ  ಪ್ರದರ್ಶಿಸಿ ಅದರಿಂದಾಚೆ ಕೂಡಾ ಹೋಗಿ ಹೊಸಾದಾರಿಗಳನ್ನು ಹುಡುಕಿಕೊಂಡಿದ್ದಾರೆ.

ಬೆನಕ ತಂಡದ ಅಂದಿನ ಬಿ. ವಿ. ಕಾರಂತ ನಿರ್ದೇಶಿತ ಹಾಗೂ ಇಂದು ಟಿ. ಎಸ್.‌ ನಾಗಾಭರಣರ ಪ್ರಸ್ತುತೀಕರಣವಿದ್ದ ʼಗೋಕುಲ ನಿರ್ಗಮನʼ, ಒಂದು ಚೊಕ್ಕ ಹಾಗೂ ಸಮರ್ಥ ಪ್ರದರ್ಶನ. ಈ ತಂಡದ ಪ್ರತಿಯೊಬ್ಬ ಸದಸ್ಯರ professionalism ನಿಂದ ನೋಡಿ ಕಲಿಯುವುದು ತುಂಬಾ ಇದೆ. ನಾಟಕ ಮುಗಿದ ಮೇಲೆ ನಾಗಾಭರಣರು ಪ್ರೇಕ್ಷಕ ವರ್ಗಕ್ಕೆ ತಮ್ಮ ಆಶಯಗಳನ್ನು ತೆರೆದಿಟ್ಟರು - ಇತ್ತೀಚೆಗೆ physical theatre ಅಂತ ಏನೇನೋ ಬಂದಿವೆ. ಅದೇನಂದ್ರೂ ಪ್ರಾಯೋಗಿಕ ಮಟ್ಟದಲ್ಲೇ ಇದ್ದು, ಒಂದೆರಡು ಪ್ರದರ್ಶನಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ನಾವು ಗೀತೆ ನಾಟಕಗಳನ್ನು ಆಡಬೇಕು, ನೀವು ಅವುಗಳನ್ನು ಪ್ರೋತ್ಸಾಹಿಸ ಬೇಕು, ಯಾಕೆಂದ್ರೆ ಅದು ನಮ್ಮ ನಾಟ್ಯಶಾಸ್ತ್ರ ಪರಂಪರೆಯಿಂದ ಬಂದಿದೆ - ಅಂತ.

ಈಗ ಮಗದೊಂದು - ನಾಟ್ಯಶಾಸ್ತ್ರದ ಮೊದಲ ಅಧ್ಯಾಯದಲ್ಲೇ ಸ್ವಷ್ಟವಾಗಿ ಅದರ ಆಶಯವಿದೆ. ಭೂಲೋಕದಲ್ಲಿ ಅರಾಜಕತೆ ಹರಡಿದ ಸಂದರ್ಭದಲ್ಲಿ ಇಂದ್ರ ಹಾಗೂ ಇತರ ದೇವತೆಗಳು ಸರ್ವಶಕ್ತ ಭಗವಂತ ಬ್ರಹ್ಮನ ಬಳಿ ಬಂದು ಪರಿಹಾರವನ್ನು ಕೇಳುತ್ತಾರೆ. ಆಗ ಬ್ರಹ್ಮನು ಧರ್ಮಪಾಲನೆಗೆ ಅಣವು ಮಾಡಿಕೊಡಲು ಲೋಕದಲ್ಲಿರುವ ಅರಾಜಕತೆಯ  ಕಾರಣಕರ್ತರಿಗೆ ವೇದಗಳ ಸತ್ವಗಳನ್ನು ರಸವತ್ತಾಗಿ ಕಥೆ, ಸಂಗೀತ, ನೃತ್ಯ, ನಾಟಕಗಳ ಮೂಲಕ ತಿಳಿ ಹೇಳಲು ನಾಟ್ಯವೇದವನ್ನು ರಚಿಸಿದನು. ಮನುಸ್ಮೃತಿಯು ವೇದಗಳನ್ನು ೊಂದೇ ವರ್ಣ-ಜಾತಿಗೆ ಲಭ್ಯವಾಗಿಸಿ ಉಳಿದವರಿಗೆ ಕಡಿವಾಣ ಹಾಕ್ಕಿದ್ದು ನಮಗೆಲ್ಲರಿಗೂ ತಿಳಿದಿದೆ. ಈ ಪೌರಾಣಿಕ ಕಥೆಯಲ್ಲಿ  ತಮಗೆ ಲಭ್ಯವಿಲ್ಲದಿರುವ ವೇದಗಳನ್ನು ಓದದಿರುವವರೇ ಈ ಲೋಕದ ಅಧರ್ಮಕ್ಕೆ ಕಾರಣರು, ಎಂಬು ವಿಷಯ ಸುಪ್ತವಾಗಿ ಅಡಗಿದೆ. ನಾಟ್ಯಶಾಸ್ತ್ರದ castist ನಿಲುವುಗಳನ್ನು ಕೈ ಬಿಟ್ಟು ನಾವು ಅದನ್ನು ಅರ್ಥೈಸಿಕೊಳ್ಳಬೇಕು ಅಂತ ಹಲವಾರು ಆಧುನಿಕ ನಾಟಕ ತಜ್ಞರು ಹಲವು ಭಾರಿ ಹೇಳಿಕೊಂಡಿದ್ದಾರೆ.

ʼಗೋಕುಲ ನಿರ್ಗಮನʼ ನಾಟಕ ಮುಗಿದ ಮೇಲೆ, ಕೊನೆಯಲ್ಲಿ, ಪ್ರಾಯೋಜಕರ ಕಡೆಯಿಂದ ತೀರಾ ಹಿರಿಯ ವ್ಯಕ್ತಿಯೊಬ್ಬರು ಮೈಕ್ ಹಕ್ಕಿನಿಂದ ಕೇಳಿಕೊಂಡು, ಪಡೆದು ತಮ್ಮ ಮುಂದಿದ್ದ ಪ್ರೇಕ್ಷಕರಿಗೆಲ್ಲಾ ಬುದ್ದಿವಾದವನ್ನು  ಹೇಳಿದರು - ನಾವು ಬರೀ ಹಾಡು-ಕುಣಿತ ಅಂತ ಖುಷಿ ಪಡದೆ, ಲೇಖಕ ಪು. ತಿ. ನರಸಿಂಹಾಚಾರ್ ಅವರ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು.ಅವರು ಮಹಾನ್ ಉಪನಿಷತ್ತು ಹಾಗೂ ಅದ್ವೈತ ವಿದ್ವಾಂಸರು. 'ಗೋಕುಲ ನಿರ್ಗಮನ' ಪಠ್ಯದಲ್ಲಿ ನಾವು ಈ ಅದ್ವೈತ ತತ್ವವನ್ನು ಗುರುತಿಸಬೇಕೆಂದು ಸ್ವಲ್ಪ ಜಾನ್ಞ ಪಸರಿಸಿದರು.

ಪು. ತಿ. ನರಸಿಂಹಾಚಾರ್

1993ರಲ್ಲಿ ಬಿ. ವಿ. ಕಾರಂತರು ನಾಟಕ ಕಟ್ಟಲು 'ಗೋಕುಲ ನಿರ್ಗಮನ' ಪಠ್ಯ ಎತ್ತಿ ಕೊಂಡದ್ದು ಅದರೊಳಗೆ ಸುಪ್ತವಿದ್ದ ಅದ್ವೈತ ತತ್ವಕ್ಕೋ, ಅದು ಒದಗಿಸುವ ನಾಟಕೀಯ ಸಾಧ್ಯತೆಗಳಿಗೋ ಅಥವಾ‌ ಮತ್ತಾವುದಕ್ಕೋ ನಾನರಿಯೆ. ಆದರೆ, ಹೋದ ವಾರ ನಾನು‌ ನೋಡಿದ ಬಿ.ವಿ. ಕಾರಂತರ‌ ಒರಿಜಿನಲ್‌ ಎಂದೆಣಿಸಿಕೊಂಡ 'ಗೋಕುಲ ನಿರ್ಗಮನ' ಹಲವಾರು ವ್ಯಾಖ್ಯಾನಗಳ ಸಾಧ್ಯತೆಗಳನ್ನು ತೆರೆದಿಟ್ಟಿದೆ - ʼಎಂತೊರೆದರೇನಮ್ಮ ಹೆಣ್ಣಳಲಿಗೆಣೆಯುಂಟೆʼ ಎಂದು ಸಾರುವ ಹೆಣ್ತನ ಹಾಗು ಪುರುಷತ್ವ ನಡುವಿನ ಆದಿ ಸ್ಥಿತಿಯ ದ್ವಂದ್ವ, ಗ್ರಾಮೀಣ–ನಗರಗಳ ಗುಣಾತ್ಮಕತೆಯ ತೊಯಿದಾಟ, ಮುಗ್ಧ ಯುವಕನೊಬ್ಬನು  ತನ್ನ ಕಂಫರ್ಟ್‌ ವಲಯವನ್ನು ಕಷ್ಟದಿಂದ ತೊರೆದು ಪೌರುಷದ ಕವಚವನ್ನು ಧರಿಸಿ ಮನು ಧರ್ಮ ಪಾಲನೆಗೆ (ಯುದ್ಧ?) ಹೊರಟ coming of age  ಕತೆ ಅಥವಾ ಜಾತಿ-ವರ್ಗ-ಲಿಂಗ ಎಂಬ ಭೇದವಿಲ್ಲದೇ ಜಗವಲ್ಲ ಸರ್ವ ಶಕ್ತಿಯೊಂದರೊಳಗೆ ಮೀಲೀನಗೊಳ್ಳಬೇಕೆನ್ನುವ ತೀವ್ರ ಬಯಕೆ… ಹೀಗೆ ಇನ್ನೂ…

ಇತ್ತೀಚೆಗೆ, ಅವರ legacy ಬಗ್ಗೆ ಮಾತನಾಡುತ್ತಾ ರಂಗಕರ್ಮಿ ರಘುನಂದನ, ಬಿ.  ವಿ. ಕಾರಂತರು ನೆಹರೂ ಯುಗದ ಕೊಡುಗೆ ಅಂತ ಅಭಿಪ್ರಾಯ ಪಡುತ್ತಾರೆ. ನೆಹರೂ ಹಾಗೂ ಇತರರು ಹೊಸ ದೇಶ ಕಟ್ಟಿದ ಹಾಗೆ, ಕಮಲಾದೇವಿ ಚಾಟ್ಟೋಪದ್ಯಾಯ, ನೇಮಿಚಂದ್ರ ಜೈನ್‌, ಅಲ್ಕಾಜಿ, ಬಾದಲ್‌ ಸರ್ಕಾರ್‌, ಕೆ. ಎನ್.‌ ಪನ್ನಿಕರ್‌, ವಿಜಯ್‌ ತೆಂಡೂಲ್ಕರ್‌, ಡಿ. ಡಿ. ಕೊಸಂಬಿ, ಹಬೀಬ್‌ ತನ್ವೀರ್‌, ಬಿ. ವಿ. ಕಾರಂತ್‌ ಮುಂದಾದವರು ದೇಶದ ಸ್ವಾತಂತ್ರ  ನಂತರದ  ಅವಧಿಯಲ್ಲಿ ಆಧುನಿಕ ಭಾರತವನ್ನು ಸಾಂಸೃತಿಕವಾಗಿ ಕಟ್ಟಿದವರು.

ಒಂದು ಕಡೆ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಕಾರಂತರ ನಾಟಕಗಳು ʼಹಿಂದುʼ ಎಂದೆಣಿಸಿ ಕೊಳ್ಳುವ ಹಾಗಿವೆ ಅಂತ ಹೇಳುತ್ತಾರೆ. ಇನ್ನೊಂದೆಡೆ, ಬನಾರಸ್‌ ಸಮಯದಿಂದಲೂ ಕಾರಂತರಿಗೆ ಆಪ್ತರಾಗಿದ್ದ ಕಮ್ಯನಿಸ್ಷ್‌ ಎಂದೆಣಿಸಿಕೊಳ್ಳುವ ಹಿಂದಿ ಸಾಹಿತಿ ದಿ. ವಿಷ್ಣುಚಂದ್ರ ಶರ್ಮರು ಕಾರಂತರಿಗೆ ಬಲಪಂಥೀ ಸಂಘೀಯರ ತರ್ಕದ ಪ್ರತಿ ಅಸನನೆ ಇತ್ತು ಅಂತ ಸಾರುತ್ತಾರೆ. ಮತ್ತೆ, ಪ್ರಾಯಷಃ ತಮ್ಮನ್ನು ತಾವು ಸಂಪ್ರದಾಯವಾದಿ regime ಜೊತೆಗೆ ಗುರುತಿಸಿಕೊಂಡ ನಾಗಾಭರಣರು, ಇಂದು ಕಾರಂತ ಸ್ಮರಣೆಗೆಂದೇ ತಯಾರಿಸಿದ ಅಂದಿನ ಕಾರಂತ ನಿರ್ದೇಶಿತ ನಾಟಕಗಳ ಸುಮಾರು ೪೦೦-೫೦೦ರಕ್ಕೂ ಹೆಚ್ಚು ಶೋಗಳಿಗೆ ಕಾರಣರಾಗಿದ್ದಾರೆ. And ಮೊನ್ನೆ ಮುಂಬಯಿಯಲ್ಲಿ ಹಿರಿಯ ಸಜ್ಜನರೊಬ್ಬರು ಪರೋಕ್ಷವಾಗಿ ಬಿ. ವಿ. ಕಾರಂತರನ್ನು ಅದ್ವೈತ ತತ್ವದ ಪ್ರತಿಪಾದಕ ಅಂತ ಅಭಿಪ್ರಾಯ ಪಟ್ಟೇ ಬಿಟ್ಟಂತೆ ಕಂಡರು.

ಎಂತಿದು ಕಾರಂತರ ಕೊಳಲಿನ ಆಟ? ಎತ್ತ ಸಾಗಿದೆ ಇಂದು ಅದರ ಪಯಣ?

ಈಗ ಮತ್ತೆ ಹೀಗೊಂದು - ನನ್ನ ತಂದೆ ಮೃತರಾಗಿ ಹಲವಾರು ವರುಷಗಳಾಗಿವೆ. ಅವರು ಜೋಪಾನವಾಗಿಟ್ಟಿದ್ದ ಕೆಲ ವಸ್ತುಗಳಲ್ಲಿ ಅವರ ಹಲವಾರು ಡೈರಿಗಳಿವೆ. ಅವುಗಳಲ್ಲಿ ʼಬೇವಿನ ಸೊಪ್ಪು – ೨ ರೋಪಾಯಿʼ ಇಂದ ಹಿಡಿದು ʼಇವತ್ತು ಶೇಖರ ಮಾಡು ಕಟ್ಟಲು ಶುರು ಮಾಡಿದʼ ಅಂತ ಹಲವಾರು ವರುಷಗಳ ಹಲವಾರು ಸಣ್ಣ-ಪುಟ್ಟ ಬೇಕು-ಬೇಡದ ದಿನ ನಿತ್ಯದ ಎಂಟ್ರಿಗಳಿವೆ. ಅದ್ಯಾಕೋ ಇದ್ದ ಎಲ್ಲಾ ಡೈರಿಗಳನ್ನು ದೂಳು ಹಿಡಿದು ಗೆದ್ದಲು ಬರುವವರೆಗೆ ನಾನು ಕೂಡಾ ಹಾಗೇ ಇಟ್ಟು ಕೊಂಡಿದ್ದೆ. ಅದೇ ಇನ್ನೊಂದೇನಂದ್ರೆ, ಜಗತ್ತಿನ ಪ್ರಭಾಶಾಲಿ ಮನೋವಿಜ್ಞಾನಿ ಎಂದೆಣಿಸಿಕೊಂಡ Sigmund Freud ಹೇಳುತ್ತಾರೆ, ʼKill the father’. ಒಂದೆರಡು ವರುಷಗಳ ಹಿಂದೆ ತಂದೆಯ ಅರ್ಧದಷ್ಟು ಡೈರಿಗಳನ್ನು ಕಸದ ಬುಟ್ಟಿಗೆ ಎಸೆದೆ. ಇನ್ನು ಉಳಿದದ್ದನ್ನು ಹಾಗೇ ಇಟ್ಟಿದ್ದೇನೆ, ಎಷ್ಟು ದಿನ ಅಂತ ನೋಡಬೇಕು. ಫಿಚ್ಚರ್‌ ಖಂಡಿತಕ್ಕೂ ಅಭಿ ಭೀ ಬಾಕಿ ಹೈ.

Tuesday, December 10, 2024

ಪ್ರತ್ಯೇಕವಾದಿಗಳು


ಇವ‌ ನಮ್ಮವನಲ್ಲ, ಅವ್ಳು ನಮ್ಮವಳಲ್ಲ
An A.I Image

ಪೇಜಾವರ ಮಠದ ಮುಖ್ಯಸ್ಥರು 'ನಮಗೆ ಗೌರವಿಸುವ ಸಂವಿಧಾನ ಬರಲಿ' ಅಂತ ಹೇಳಿಕೆ ಕೂಟ್ಟಿದ್ದಾರೆಂದು ವರದಿಯಾಗಿತ್ತು. ನಂತರ ಅವರು 'ನಾನು ಸಂವಿಧಾನ ಬದಲಿಸಬೇಕು ಅಂತ ಹೇಳಲಿಲ್ಲ, ಆದರೆ - ನಮಗೆ ಗೌರವ ಕೊಡಿವ ಸರ್ಕಾರ‌ ಬೇಕು ಅಂತ ಹೇಳಿದ್ದು ಹೌದು', ಎಂದು ಹೇಳಿಕೆ ಕೊಟ್ಟಿದ್ದಾರೆ.
 
ಅಳಿಯ ಅಲ್ಲ, ಮಗಳ ಗಂಡ. ಇರಲಿ.‌

ಈ ಎರಡೂ ಹೇಳಿಕೆಗಳಲ್ಲಿ 'ನಾವು' ಅಂದರೆ ಯಾರು? ಮಠದ ಮುಖ್ಯಸ್ಥರ ನಿಲುವಿಗೆ ತಕ್ಕಂತೆ ಈ 'ನಾವು' ಅಂದ್ರೆ ಹಿಂದು ಧರ್ಮವನ್ನು ಪಾಲಿಸುವವರು. ನಮ್ಮ ಸಂವಿಧಾನವು ಭಾರತ ದೇಶದೊಳಗಿರುವ ಸಮಸ್ತ ಜನರು‌ ಮಾಡಿರುವ ಒಂದು ಒಪ್ಪಂದ. ಇದು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಂತ‌ ಒಂದು ಒಪ್ಪಂದ. ಇಂತಹ ಸಂವಿಧಾನದಲ್ಲಿ 'We the people agree to.. ' ಅಂತಿದೆ ಹೊರತು, 'We the Hindu people agree too...' ಅಂತಿಲ್ಲ.‌ ಸಂವಿಧಾನ ಗೌರವ ಕೊಡುವುದು ಸಮಸ್ತ ಜನರಿಗೆ‌. ಹಾಗಾಗಿ ಯಾರಾದರೂ ಸಂವಿಧಾನ ಹಿಂದುಗಳಿಗೆ ಗೌರವ ಕೊಡುವುದಿಲ್ಲ ಅಂತ ಹೇಳಿದರೆ ಅದು ತರ್ಕವಿಲ್ಲದ ನಿಲುವು. ಸರಕಾರ ಹುಟ್ಟಿದ್ದು ಸಂವಿಧಾನದಿಂದ. ಹಾಗಾಗಿ, ಅದಕ್ಕೂ ಕೂಡಾ ಸಮಸ್ತ ಜನರಿಗೆ ಗೌರವ ಕೊಡಿವ ಮೆಂಡೇಟ್ ಇದೆ.‌

ಒಂದು ಕ್ಷಣ ಈ ದೇಶ ಹಿಂದೂ ಧರ್ಮವನ್ನು ಪಾಲಿಸುವವರದ್ದೇ ಅಂತ ಅಂದು ಕೊಳ್ಳುವ. ಮಠದ ಮುಖ್ಯಸ್ಥರು ಹೇಳಿ ಕೊಂಡಿರುವ 'ನಾವು' - ಇದರೊಳಗೆ ಹಿಂದುಗಳು ಅಂತ ಅನ್ನಿಸಿ ಕೊಳ್ಳುವವರು ಸಮಸ್ತರೂ ಒಳಗೊಂಡಿರ ಬೇಕು, ಅಲ್ಲವೇ? ಆದರೆ ಇವರ 'ನಾವು' ಪದದ ಪರಿಮಿತಿಯಲ್ಲಿ ದೇಶದಲ್ಲಿರುವ ಎಲ್ಲಾ ಹಿಂದುಗಳು ನಿಜವಾಗಿಯೂ ಒಳಗೊಂಡಿದ್ದಾರ?

ಇವ‌ ನಮ್ಮವನಲ್ಲ, ಅವ್ಳು ನಮ್ಮವಳಲ್ಲ ಅಂತಂದು ನಾವೇ ನಮ್ಮವರಲ್ಲದೇ ಇರುವವರಿಗೆ ಸ್ವಲ್ಪ ಕೂಡಾ ಗೌರವವನ್ನು ತೋರಿಸದೆ, ಜೊತೆ ಕೂತು ಊಟ ಕೂಡಾ ಮಾಡಲು ಇಚ್ಚಿಸುವುದಿಲ್ಲ, ಅಲ್ಲವೇ? ಇನ್ನು ಗರ್ಭಗುಡಿಯ ಒಳಗೆ ಪ್ರವೇಶದ ವಿಷಯ ಬಿಡಿ. ಹೀಗೆ ಯಾವ ಗೌರವವನ್ನೂ ಕೊಡದೆ ನಾವು ಹೊರ‌ಹಾಕಿ ಅಥವಾ ದೂರ ಸರಿಸಿದ ಹಿಂದುಗಳ ಸಂಖ್ಯೆ ಹೆಚ್ಚು ಕಡಿಮೆ ಶೇಕಡ ೯೫℅ ರಷ್ಟಿದೆಯೋ ಏನೋ. ಹಾಗಿದ್ದಲ್ಲಿ, ಪೇಜಾವರ ಮಠದ ಮುಖ್ಯಸ್ಧರು ಯಾರ ಗೌರವದ‌ ಬಗ್ಗೆ ಮಾತನಾಡುತ್ತ ಇದ್ದಾರೆ ಎಂಬ ಪ್ರಶ್ನೆ ಬರುತ್ತದೆ‌.
 
ಹೊರತುಪಡಿಸುವಿಕೆ ನಮ್ಮ ಧಾರ್ಮಿಕ ಹಕ್ಕು, ಅದಕ್ಕೆ ಶಾಸ್ತ್ರಗಳ ಅನುಮೋದನೆ‌ ಇದೆ ಅಂತ ಯಾರಾದರೂ ೧೯೪೭ರ ನಂತರ ಹೇಳಿದರೆ, ಅದು ಭಾರತದ ಸಮಸ್ತ ಜನರು ಸೇರಿ ಮಾಡಿ ಒಪ್ಪಿರುವ ಸಂವಿಧಾನದ ಉಲ್ಲಂಘನೆ ಆಗುತ್ತದೆ. ಗೊಡ್ಡು ಹಟಮಾರಿತನದಿಂದ ಒಪ್ಪದೇ ಇರುವವರನ್ನು ನಾವು ಪ್ರತ್ಯೇಕವಾದಿಗಳು ಅಂತ ಕರೆಯತ್ತೇವೆ‌.

Monday, July 1, 2013

ಗುಡಿಗೇರಿ ಕಂಪೆನಿ


ಕರ್ನಾಟಕದಲ್ಲಿರುವ ನಾಟಕ ’ಕಂಪೆನಿ’ಗಳಲ್ಲೊಂದಾದ ಗುಡಿಗೇರಿ ಕಂಪೆನಿಯ ಬಗ್ಗೆ ಒಂದು ಸಾಕ್ಷ್ಯಾ ಚಿತ್ರ


ಗುಡಿಗೇರಿ ಕಂಪೆನಿ - ’ನಾಟಕ ಕಂಪೆನಿ’ಗಳ ಒಂದು ಇಣುಕು ನೋಟ
೨೪ ನಿಮಿಷಗಳು / ೨೦೧೧ / ಕನ್ನಡ
ನಿರ್ದೇಶನ: ರಾಮಚಂದ್ರ ಪಿ ಎನ್

Wednesday, May 8, 2013

ದೋಸೆಯ ಶಕಲ್

ನಿನ್ನೆ ಮನೆಯಲ್ಲಿ ’ಛೇ, ಈ ದೋಸೆಯ ಶಕಲ್’ ಸರಿಯಾಗಲಿಲ್ಲ’ ಅಂತ ಒಂದು ವಾಕ್ಯ ಕೇಳಿ ಬಂತು.

ಎಮ್. ಟಿ. ಆರ್. ಇನ್ ಸ್ಟೆಂಟ್ ರವಾ ದೋಸೆ ಪುಡಿಯ ಪ್ಯಾಕೆಟ್ ಒಡೆದು ನೀರು ಹಾಕಿ ಕಲ್ಲಿನಲ್ಲಿ ದೋಸೆಗಳನ್ನು ಹಚ್ಚುವಾಗ ಕೇಳಿಬಂದ ವಾಕ್ಯವಿದು. ಅರ್ಥವಾಗದೇ ನಾನೆಂದೆ, ’ಏನು?’

’ದೋಸೆಗಳ ಶಕಲ್ಲ್ ಗಳೇ ಸರಿಯಾಗಿ ಬರ್ತಾ ಇಲ್ಲ’, ಅಂತ ಮತ್ತೆ ಬಂತು ಉತ್ತರ. 

ಗ್ಯಾಸಿನ ಮೇಲಿದ್ದ ದೋಸೆಯ ಕಲ್ಲಿನ ಮೇಲೆ ಹಾಕಿದ ದೋಸೆಯ ಆಕಾರ ಅಮೀಬಾದ ದೇಹದಂತಿತ್ತು.

’ಆಹ್, ದೋಸೆಯ ಶೇಪ್ ಸರಿಯಾಗಿ ಬರುತ್ತಿಲ್ಲ ಅಂತ ಹೇಳು’, ನಾನೆಂದೆ. ’ಕನ್ನಡದಲ್ಲಿ ಹೇಳಿದ್ರೆ ಕ್ಲಿಯರ್ ಆಗಿ ಅರ್ಥವಾಗುತ್ತಿತ್ತು’, ಅಂತ ಮತ್ತೆ ಮುಂದುವರಿಸಿದೆ.

’ಕರೆಕ್ಟ್, ದೋಸೆಗಳ ಶೇಪ್ ನೀಟ್ ಆಗಿ ಬರುತ್ತಿಲ್ಲ’, ಅಂತ ಮತ್ತೆ ಕೇಳಿ ಬಂತು ಉತ್ತರ.

’ಹಾಗೆ ಹೇಳು ಮತ್ತೆ’, ಅಂತಂದೆ.

Sunday, October 7, 2012

’ಬಿ ವಿ ಕಾರಂತ: ಬಾಬ’ ಡಾಕ್ಯುಮೆಂಟರಿಯ ಒಂದು ರಿವ್ಯು

 ಜಯಲಕ್ಷ್ಮೀ ಪಾಟೀಲ್  ’ಬಿ ವಿ ಕಾರಂತ: ಬಾಬ’ ಬಗ್ಗೆ ಬರೆದ ಲೇಖನ
http://jayalaxmi-abhinaya.blogspot.in/2012/10/blog-post.html